ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ: ಪರೋಕ್ಷವಾಗಿ ಮಾಧ್ಯಮಗಳನ್ನು ಕುಟುಕಿದ ಸಂಸದೆ ಸುಮಲತಾ

ಮಂಡ್ಯ: ನನ್ನಿಂದ ನಿಮಗೆ ಯಾವುದೇ ವಿವಾದಾತ್ಮಕ ಹೇಳಿಕೆ ಸಿಗುವುದಿಲ್ಲ ಎಂದು ಹೇಳಿ ನೂತನ ಮಂಡ್ಯ ಸಂಸದೆ ಸುಮಲತಾ ಅಂಬರೀಷ್​ ಅವರು ಪರೋಕ್ಷವಾಗಿ ಮಾಧ್ಯಮಗಳನ್ನು ಕುಟುಕಿದರು.

ಸಕ್ಕರೆ ನಾಡಿನ ಕೀಲಾರ ಗ್ರಾಮದಲ್ಲಿ ನಡೆದ ‘ಸ್ವಚ್ಚ ಮೇವ ಜಯತೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಯಾರ ಬಗ್ಗೆಯು ಕೀಳಾಗಿ ಮಾತನಾಡಿಲ್ಲ. ಈಗಲೂ ಸಹ ಮಾತನಾಡಲ್ಲ. ಜನ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿಕೊಂಡು ಹೋಗುತ್ತೇನೆ. ಇದು ರಾಜಕಾರಣ ಮಾಡುವ ಸಮಯವಲ್ಲ. ಟೀಕೆಗಳಿಗೆ ಉತ್ತರ ಕೊಡುತ್ತಾ ಸಮಯ ಹರಣ ಮಾಡಲ್ಲ. ನನ್ನಿಂದ ಯಾವುದೇ ವಿವಾದಾತ್ಮಕ ಹೇಳಿಕೆ ನಿಮಗೆ ಸಿಗುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಸಂಸದೆಯಾಗಿ ಮೊದಲ ಬಾರಿಗೆ ಸಂಸತ್ ಪ್ರವೇಶ ಮಾಡಿದ ಕ್ಷಣದ ಬಗ್ಗೆ ಮಾತನಾಡಿ, ಅದೊಂದು ಪ್ರಜಾಪ್ರಭುತ್ವದ ದೇವಾಲಯ, ಅಲ್ಲಿಗೆ ಹೋದಾಗ ಆದಂತಹ ಸಂತಸದ ಕ್ಷಣದ ಬಗ್ಗೆ ಹೇಳಲು ಆಗುತ್ತಿಲ್ಲ ಎಂದ ನೂತನ ಸಂಸದೆ, ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ವಿಚಾರವಾಗಿ, ನಾನು ಪ್ರತಿಕ್ರಿಯೆ ಕೊಡಲ್ಲ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಈಗಾಗಲೇ ನನ್ನ ಮನೆ ಇದೆ. ಪ್ರತಿ ತಾಲೂಕಿಗೂ ಭೇಟಿ ಕೊಡುತ್ತೇನೆ. ವಾರಕ್ಕೆ ಮೂರು ದಿನ ಮಂಡ್ಯದಲ್ಲೇ ವಾಸ್ತವ್ಯ ಹೂಡುತ್ತೇನೆ ಎಂದು ಭರವಸೆ ನೀಡಿದರು.

ಸಾಮಾನ್ಯರ ಕರೆಯನ್ನು ಸ್ವೀಕರಿಸುವುದಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿ, ಸಭೆಗಳು ಅಥವಾ ದೆಹಲಿಯಲ್ಲಿ ಇದ್ದಾಗ ಕರೆ ಸ್ವೀಕರಿಸಲು ಆಗುವುದಿಲ್ಲ. ಮುಂದೆ ಮಂಡ್ಯದಲ್ಲಿ ಕಚೇರಿ ಮಾಡಿ ಜನರ ಸಮಸ್ಯೆ ಆಲಿಸಲು ಸಿಬ್ಬಂದಿ ನೇಮಕ ಮಾಡುತ್ತೇನೆ ಎಂದು ಹೇಳಿದರು. ಇದೇ ವೇಳೆ ಬಿಜೆಪಿ ಅಥವಾ ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ನಾನು ನಾನಾಗೇ ಇರುತ್ತೇನೆ. ಜನರ ಪರವಾಗಿ ಇದ್ದು, ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದರು. (ದಿಗ್ವಿಜಯ ನ್ಯೂಸ್​)