ನನ್ನ ಪತಿ ಪಾರ್ಸಿ, ಅವರ ದೇಗುಲಕ್ಕೆ ನನಗೆ ಪ್ರವೇಶವಿಲ್ಲ; ಆದರೂ ಕೋರ್ಟ್​ಗೆ ಹೋಗಲಿಲ್ಲ

ನವದೆಹಲಿ: ಶಬರಿಮಲೆಯಲ್ಲಿ 50 ವರ್ಷದ ಒಳಗಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್​ನ ತೀರ್ಪಿನಿಂದಾಗಿ ಕೇರಳದಲ್ಲಿ ಉಂಟಾಗಿರುವ ಘರ್ಷಣೆಯ ಕುರಿತು ಸ್ಮೃತಿ ಇರಾನಿ ಅವರು ತಡವಾಗಿ ಮಾತನಾಡಿದ್ದಾರೆ. ಈ ವೇಳೆ ಅವರು ತಮ್ಮದೇ ಅನುಭವವೊಂದನ್ನು ಉದಾಹರಣೆಯಾಗಿ ನೀಡಿದ್ದಾರೆ.

“ಯಾವುದೇ ಧರ್ಮದ ಆಚರಣೆಗಳನ್ನು ನಾವು ಗೌರವಿಸಬೇಕು. ಅದನ್ನು ಉಲ್ಲಂಘಿಸುವವರು ಪತ್ರಿಕೆಗಳಲ್ಲಿ ಹೆಡ್​ಲೈನ್​ಗಳಾಗಲಷ್ಟೇ ಪ್ರಯತ್ನ ಮಾಡುತ್ತಿರುತ್ತಾರೆ. ಅಂಥ ಪ್ರಯತ್ನಗಳು ದೇಶದ ವೈವಿಧ್ಯತೆಗೆ ಮಾಡಿದ ಭಂಗ,” ಎಂದು ಸ್ಮೃತಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ದೆಹಲಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸ್ಮೃತಿ ಇರಾನಿ ಭಾಗವಹಿಸಿದ್ದರು. ಶಬರಿಮಲೆ ಪ್ರಕರಣದ ಕುರಿತು ಅವರು ಹಿಂದೊಮ್ಮೆ ನೀಡಿದ್ದ ” ಪ್ರಾರ್ಥಿಸುವ ಹಕ್ಕು ಎಂಬುದು ಅಪಹಾಸ್ಯ ಮಾಡುವ ಹಕ್ಕಲ್ಲ, ” ಎಂಬ ಹೇಳಿಕೆ ಕುರಿತು ವಿದ್ಯಾರ್ಥಿಗಳು ಪ್ರಶ್ನೆ ಮಾಡಿದರು. ಈ ವೇಳೆ ಮಾತನಾಡಿರುವ ಅವರು,

“ನಾನು ನನ್ನ ಅನುಭವದ ಮೂಲಕ ಮಾತನಾಡುತ್ತೇನೆ. ಇದನ್ನೇ ಅಂದು ಹೇಳಿದ್ದೆ. ನನ್ನ ಪತಿ ಝೊರಾಷ್ಟ್ರಿಯನ್​ (ಪಾರ್ಸಿ). ಅವರ ನೀತಿ ನಿಯಮಗಳ ಪ್ರಕಾರ ಅವರ ದೇಗುಲಕ್ಕೆ (ಅಗ್ನಿ ದೇಗುಲ) ನನಗೆ ಪ್ರವೇಶವಿಲ್ಲ. ಆ ನೀತಿ ನಿಯಮಗಳು ಸಂವಿಧಾನದ ಮೂಲಕ ಸ್ಥಾಪಿತವಾಗಿದ್ದಲ್ಲ. ಧಾರ್ಮಿಕ ಆಚರಣೆಗಳ ಮೂಲಕ ರಚನೆಯಾಗಿದ್ದು. ನಾನು ಇಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ನನಗೆ ಅಗ್ನಿ ದೇಗುಲಕ್ಕೆ ಪ್ರವೇಶ ನೀಡಲಿಲ್ಲ. ಆದರೆ, ನಾನು ಇದರ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಲಿಲ್ಲ. ಅವರ ನಂಬಿಕೆಗಳನ್ನು ನಾನು ಗೌರವಿಸಿದೆ,” ಎಂದು ಅವರು ಹೇಳಿಕೊಂಡಿದ್ದಾರೆ.