ಮೂಗು ಡೊಂಕಿದ್ದರೆ ಚಿಂತೆ ಬೇಡ… ವಾಸನೆ ಬರುತ್ತಿಲ್ಲವೆಂದರೆ ಕೂಡಲೇ ವೈದ್ಯರ ಬಳಿ ತೋರಿಸಿ

ಮೂಗು ಸ್ವಲ್ಪ ಡೊಂಕಿದ್ದರೂ ಮುಖದ ಅಂದ ಹದಗೆಡುತ್ತದೆ. ನಾವೆಲ್ಲ ಅದೆಷ್ಟೋ ಸಲ ಕನ್ನಡಿ ನೋಡಿಕೊಂಡು ನನ್ನ ಮೂಗು ಹಾಗಿರಬೇಕಿತ್ತು, ಉದ್ದ ಜಾಸ್ತಿ, ಅಗಲ ಹೆಚ್ಚು, ಆಕಾರವೇ ಇಲ್ಲ…ಹೀಗೆ ಕೊರಗುತ್ತೇವೆ. ನಮ್ಮ ಸೌಂದರ್ಯ ಮೂಗಿನ ಆಕಾರವನ್ನೂ ಅವಲಂಬಿಸಿರುವುದು ಎಷ್ಟು ಸತ್ಯವೋ ಹಾಗೇ ಅದು ವಾಸನೆ ಗ್ರಹಿಸುವ ಸಾಮರ್ಥ್ಯದ ಮೇಲೆ ನಮ್ಮ ಆರೋಗ್ಯ ಎಷ್ಟಿದೆ ಎಂಬುದನ್ನೂ ಕಂಡು ಹಿಡಿಯಬಹುದು.

ಬೇಗ ಸಾವು ಬರಬಹುದು

ಕೆಲವರ ಮೂಗಿಗೆ ಯಾವ ವಾಸನೆ, ಪರಿಮಳವೂ ಬರುವುದೇ ಇಲ್ಲ. ವಾಸನೆ ಗ್ರಹಿಸುವ ಶಕ್ತಿ ಇರುವುದಿಲ್ಲ. ಶೀತವಾಗಿದ್ದಾಗ, ಮೂಗು ಕಟ್ಟಿದ್ದಾಗ ಅದು ಸಹಜ. ಆದರೆ ಆರೋಗ್ಯವಾಗಿದ್ದರೂ ಮೂಗು ಮಾತ್ರ ತನ್ನ ಕೆಲಸ ಮಾಡುತ್ತಿಲ್ಲ ಎಂದಾದರೆ ಸ್ವಲ್ಪ ಗಂಭೀರ ಸಮಸ್ಯೆ. ಅದು ಬೇಗನೆ ಸಾವು ಬರುವುದರ ಮುನ್ಸೂಚನೆ ಎಂದು ಅಧ್ಯಯನವೊಂದು ಸಾಬೀತುಪಡಿಸಿದೆ.

ಚಿಕಾಗೋದ ಮೆಡಿಕಲ್​ ಯೂನಿವರ್ಸಿಟಿಯ ಪ್ರಕಾರ, ಯಾವ ವ್ಯಕ್ತಿಯಲ್ಲಿ ವಾಸನೆ ಗ್ರಹಣ ಶಕ್ತಿ ಪೂರ್ತಿಯಾಗಿ ಕುಂದಿರುತ್ತದೆಯೋ ಅವರು ಮುಂದಿನ ಐದು ವರ್ಷಗಳಲ್ಲಿ ಸಾಯುವ ಸಾಧ್ಯತೆ ಹೆಚ್ಚಾಗಿರುತ್ತದಂತೆ.

ಗುಲಾಬಿ, ಪೆಪ್ಪರ್​ಮಂಟ್​, ಕಿತ್ತಳೆ ಹೀಗೆ ಮತ್ತಿತರ ವಸ್ತುಗಳ ಪರಿಮಳವೇ ಬಾರದ ಸುಮಾರು ಶೇ. 39 ವಯಸ್ಕ ಜನರು ಉಳಿದ ಚೆನ್ನಾಗಿ ವಾಸನೆ ಗ್ರಹಿಸುವವರಿಗಿಂತ ಬೇಗನೇ ಮೃತಪಟ್ಟಿರುವುದು ಅಧ್ಯಯನದಿಂದ ತಿಳಿದುಬಂದಿದೆ.

ಏನೋ ವಾಸನೆ ಎಂದು ಭ್ರಮೆಯಾಗುತ್ತಿದೆಯಾ?
ಒಂದಷ್ಟು ಜನರಿಗೆ ಏನೋ ವಾಸನೆ ಬರುತ್ತಿದೆ ಎಂದೆನಿಸುತ್ತದೆ. ಆದರೆ ಸುತ್ತಮುತ್ತಲೂ ಏನೂ ಇರುವುದಿಲ್ಲ. ಒಂಥರಾ ವಾಸನೆಯ ಭ್ರಮೆಯಲ್ಲಿ ಇರುತ್ತಾರೆ. ನೀವು ಈ ಸಾಲಿನಲ್ಲಿ ಸೇರಿದ್ದರೆ ಅದು ಮೈಗ್ರೇನ್​ನ ಲಕ್ಷಣ ಎಂದು ವೈದ್ಯಕೀಯ ಸಂಶೋಧನೆ ತಿಳಿಸಿದೆ.

ಅಲ್ಝೆಮೈರ್​ ಕಾಯಿಲೆಯೂ ಇರಬಹುದು

ನಿಮ್ಮ ಮೂಗಿಗೆ ವಾಸನೆ ಗ್ರಹಿಸುವ ಸಾಮರ್ಥ್ಯ ತುಂಬ ಕಡಿಮೆಯಾಗುತ್ತಿದ್ದರೆ ಅದು ಅಲ್ಜೆಮೈರ್​ ಕಾಯಿಲೆಯ ಮುನ್ಸೂಚನೆ, ಪ್ರಾರಂಭಿಕ ಹಂತವೂ ಆಗಿರಬಹುದು ಎಂದು ಹರ್ವದ್ ವೈದ್ಯಕೀಯ ಶಾಲೆಯ ಅಧ್ಯಯನಕಾರರು ತಿಳಿಸಿದ್ದಾರೆ.
ಈ ಕಾಯಿಲೆ ಬಂದವರಲ್ಲಿ ಉಂಟಾಗುವ ಅಮ್ಲೈಡ್​ ದದ್ದುಗಳಿಂದ ವಾಸನೆ ಗ್ರಹಿಸಲು ಸಾಧ್ಯವಾಗುವುದಿಲ್ಲ. ಅಂಥವರ ಮಿದುಳಿನಲ್ಲಿ ಜೀವಕೋಶ ಸಾಯುತ್ತಿರುತ್ತದೆ ಎಂದಿದ್ದಾರೆ. ಶೀತವಾಗಿ ಮೂಗು ಕಟ್ಟದಿದ್ದರೂ ಏನೂ ವಾಸನೆ, ಪರಿಮಳ ಬರುತ್ತಿಲ್ಲ ಎಂದಾದರೆ ಒಮ್ಮೆ ವೈದ್ಯರ ಬಳಿ ತೋರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.