ಹುಡುಗಿಯೆಂದು ನಂಬಿಸಿ 300 ಬಾಲಕರನ್ನು ಲೈಂಗಿಕ ಕ್ರಿಯೆಗೆ ಪ್ರಚೋದಿಸುತ್ತಿದ್ದ ವ್ಯಕ್ತಿ ಬಂಧನ

ಓಸ್ಲೋ(ನಾರ್ವೆ): ಸುಮಾರು 300 ಅಪ್ರಾಪ್ತ ಬಾಲಕರನ್ನು ಲೈಂಗಿಕ ಚುಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಪ್ರಚೋದಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ನಾರ್ವೆ ರಾಜಧಾನಿ ಓಸ್ಲೋದಲ್ಲಿ ಕಳೆದ ಮಂಗಳವಾರ ನಡೆದಿದೆ.

26 ವರ್ಷದ ಆರೋಪಿಯನ್ನು ಫುಟ್ಬಾಲ್ ರೆಫ್ರಿ ಎಂದು ಗುರುತಿಸಲಾಗಿದೆ. ಇಂಟರ್​ನೆಟ್ ಉಪಯೋಗಿಸುವ ಬಾಲಕರನ್ನೇ ಗುರಿಯಾಗಿರಿಸಿಕೊಂಡು ಮೆಸೇಜಿಂಗ್​ ಆ್ಯಪ್​ ಮೂಲಕ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡಿದ ಆರೋಪ ವ್ಯಕ್ತವಾಗಿದೆ.

ಆರೋಪಿಯು ಹುಡುಗಿ ಎಂದು ಹೇಳಿಕೊಂಡು ಬಾಲಕರು ಹಸ್ತಮೈಥುನ ವಿಡಿಯೋ ಕಳುಹಿಸಿದರೆ ಕಾಮಪ್ರಚೋದಕ ಫೋಟೋಗಳನ್ನು ಕಳುಹಿಸಿಕೊಡುವುದಾಗಿ ನಂಬಿಸಿ ಅವರಿಂದ ವಿಡಿಯೋಗಳನ್ನು ಪಡೆಯುತ್ತಿದ್ದ. ನಂತರ ಹೊಸ ವಿಡಿಯೋಗಳನ್ನು ಕಳುಹಿಸಲು ಬಾಲಕರು ನಿರಾಕರಿಸಿದಾಗ ಹಳೆ ವಿಡಿಯೋಗಳನ್ನು ಅಂತರ್ಜಾಲದಲ್ಲಿ ಅಪ್​ಲೋಡ್​ ಮಾಡುವ ಬೆದರಿಕೆ ಒಡ್ಡುತ್ತಿದ್ದ ಎಂದು ಹೇಳಲಾಗಿದೆ.

ಆರೋಪಿಯ ಕಂಪ್ಯೂಟರ್​ನಲ್ಲಿ ಸುಮಾರು 16,000 ವಿಡಿಯೋಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. 2011 ರಿಂದ ಇಲ್ಲಿವರೆಗೆ 13 ರಿಂದ 16 ವಯಸ್ಸಿನ ಸುಮಾರು 300 ಬಾಲಕರನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದು, ಕೆಲ ಬಾಲಕರ ಮೇಲೆ ಅತ್ಯಾಚಾರವೂ ನಡೆದಿದೆ ಎಂದು ನಾರ್ವೆಯ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದ್ದು, ಸಂತ್ರಸ್ತರು ನಾರ್ವೆ, ಡೆನ್ಮಾರ್ಕ್​ ಹಾಗೂ ಸ್ವೀಡನ್ ಮೂಲದವರು ಎಂದು ಹೇಳಲಾಗಿದೆ.​

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ನಾರ್ವೆಯ ಅತಿ ದೊಡ್ಡ ಲೈಂಗಿಕ ಕಿರುಕುಳ ಪ್ರಕರಣವಾಗಿದೆ ಎಂದು ಇಲ್ಲಿನ ರಾಜ್ಯ ಪ್ರಾಸಿಕ್ಯೂಟರ್ ಗುರೋ ಹನ್ಸನ್​ ಬುಲ್​ ತಿಳಿಸಿದ್ದಾರೆ. (ಏಜೆನ್ಸೀಸ್​)