ಬಿತ್ತನೆಗೆ ಹಿಂಗಾರು ಹೊಡೆತ

| ಅಭಿಲಾಷ್ ಪಿಲಿಕೂಡ್ಲು

ಬೆಂಗಳೂರು: ಮುಂಗಾರಿನಲ್ಲಿ ತೀವ್ರ ಮಳೆ ಕೊರತೆಯಿಂದ ರೈತರ 26.18 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಗಾಯದ ಮೇಲೆ ಬರೆ ಎಂಬಂತೆ ಹಿಂಗಾರೂ ಕೈಕೊಟ್ಟಿದ್ದು, 2017ಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ 10.16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಡಿಮೆ ಆಗಿದೆ.

ಹಿಂಗಾರು ಅವಧಿಯಲ್ಲಿ (ಅಕ್ಟೋಬರ್-ಡಿಸೆಂಬರ್) ಕೃಷಿ ಇಲಾಖೆ ರಾಜ್ಯದಲ್ಲಿ 31.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ ಅಕ್ಟೋಬರ್​ನಲ್ಲೇ ಅಂದಾಜು 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ಉಂಟಾದ ಮಳೆ ಕೊರೆತೆಯಿಂದ ರೈತರು ಬಿತ್ತನೆಗೆ ಹಿಂದೇಟು ಹಾಕಿದ್ದಾರೆ. ಹೀಗಾಗಿ 2018 ಅ.1ರಿಂದ ಅ.27ರವರೆಗೆ ಕೇವಲ 9.53 ಲಕ್ಷ ಹೆಕ್ಟೇರ್ (ಶೇ.29.95) ಪ್ರದೇಶದಲ್ಲಿ ಬಿತ್ತನೆಯಾಗಿದೆ.

2017ರ ಇದೇ ಅವಧಿಯಲ್ಲಿ 19.69 ಲಕ್ಷ ಹೆಕ್ಟೇರ್ ಹಾಗೂ 2016ರಲ್ಲಿ 16.02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು ಎಂದು ಕೃಷಿ ಇಲಾಖೆ ತಿಳಿಸಿದೆ. ಬಹುತೇಕ ಜಿಲ್ಲೆಗಳ ಶೇ.39ರಿಂದ 42 ಭೌಗೋಳಿಕ ಪ್ರದೇಶದಲ್ಲಿ ಬಿತ್ತನೆಯಾದ ಬೆಳೆಗಳೂ ತೀವ್ರ ತೇವಾಂಶ ಕೊರತೆಗೆ ಒಳಗಾಗಿವೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್​ಎನ್​ಡಿಎಂಸಿ) ತಿಳಿಸಿದೆ.

ಉ.ಕರ್ನಾಟಕ ರೈತರ ಸಂಕಷ್ಟ: ಮುಂಗಾರು ಮಳೆ ಕೊರತೆಯಿಂದಾಗಿ 100ಕ್ಕೂ ಅಧಿಕ ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಆ ಪೈಕಿ ಬಹುತೇಕ ತಾಲೂಕುಗಳು ಉತ್ತರ ಕರ್ನಾಟಕಕ್ಕೆ ಸೇರಿದ್ದವು. ಮಳೆ ಕೊರತೆಯಿಂದ 26.18 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ 15,294 ಕೋಟಿ ರೂ. ನಷ್ಟವಾಗಿದೆ ಎಂದು ಕೃಷಿ ಇಲಾಖೆ ವರದಿ ನೀಡಿದೆ.

ರಾಜ್ಯಕ್ಕೆ ಹಿಂಗಾರು ಪ್ರವೇಶ

ನ.2ಕ್ಕೆ ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಹಿಂಗಾರು ಪ್ರವೇಶಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿನ ತಿತ್ಲಿ ಚಂಡಮಾರುತದಿಂದಾಗಿ 2 ವಾರ ವಿಳಂಬವಾಗಿ ಹಿಂಗಾರು ಪ್ರವೇಶಿಸಿದ್ದು, ರಾಜಧಾನಿ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ನ.7ರವರೆಗೂ ದಕ್ಷಿಣ ಒಳನಾಡು, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಮುಂದುವರಿಕೆ ಮುನ್ಸೂಚನೆ ಇದ್ದು, ಮಳೆ ಚುರುಕಾದರೆ ಬಿತ್ತನೆಯೂ ಚುರುಕಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ರಾಯಚೂರಲ್ಲಿ 38 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ

ರಾಯಚೂರು: ಜಿಲ್ಲೆಯಲ್ಲಿ 38 ವರ್ಷಗಳಲ್ಲೇ ಈ ಬಾರಿ ಅತ್ಯಂತ ಕಡಿಮೆ ಮಳೆಯಾಗಿದೆ. ನೈಸರ್ಗಿಕ ವಿಪತ್ತು ನಿರ್ವಹಣಾ ಕೋಶದ ದಾಖಲೆಗಳ ಪ್ರಕಾರ 1981ರಿಂದ 2018ರವರೆಗೆ ವಾರ್ಷಿಕ ಮಳೆ ಪ್ರಮಾಣ ಮಾಹಿತಿಯಂತೆ 2018ರಲ್ಲಿ ಕೇವಲ 290 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ವಾಡಿಕೆ ಮಳೆ ಪ್ರಮಾಣ 621 ಮಿ.ಮೀ. ಇದ್ದು, ಈ 38 ವರ್ಷಗಳಲ್ಲಿ 16 ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮೂಲಗಳ ಪ್ರಕಾರ 1972ರಲ್ಲಿ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮಳೆ ದಾಖಲಾಗಿದ್ದು, ಮರು ವರ್ಷ (1973) ಅತ್ಯಧಿಕ 1,600 ಮಿ.ಮೀ. ಮಳೆಯಾಗಿತ್ತು. ಅದಾದ ನಂತರದಲ್ಲಿ 2009ರಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ 1,019 ಮಿ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಕೆಲವು ವರ್ಷಗಳಿಂದ ವಾಡಿಕೆಗಿಂತ ಕಡಿಮೆ ಮಳೆ ಸುರಿಯುತ್ತಿದೆ. ಸುರಿದ ಮಳೆಯೂ ಸಕಾಲಕ್ಕೆ ಬರದೆ ರೈತರು ನಷ್ಟಕ್ಕೆ ಗುರಿಯಾಗಿದ್ದಾರೆ.