ಕೋಲಾರ: ಪದವಿ ಪರೀಕ್ಷೆಗಳನ್ನು ಅನುತ್ತೀರ್ಣರಾದವರನ್ನು ಬೆಂಗಳೂರು ಉತ್ತರ ವಿವಿಯಲ್ಲಿ ಉತ್ತೀರ್ಣ ಮಾಡಿರುವ ಅಕ್ರಮ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ವಿವಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ವಿವಿ ಆವರಣದಲ್ಲಿ ಜಮಾಯಿಸಿದ ಸಂಘದ ಕಾರ್ಯಕರ್ತರು ಬಡ ಮಕ್ಕಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಶಾಲಾ ಕಾಲೇಜುಗಳಿಗೆ ದಾಖಲಾಗುವುದು ಬಡವರೇ ಆಗಿರುತ್ತಾರೆ. ವಿವಿಯ ಅಧಿಕಾರಿಗಳು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಮುಖ್ಯಸ್ಥರೊಂದಿಗೆ ತಂತ್ರಾಂಶವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಅಲ್ಲಿನ ಮಕ್ಕಳು ಅತ್ಯುತ್ತಮ ಅಂಕಗಳಿಸಿ ಉತ್ತೀರ್ಣ ಆದಂತೆ ಅಂಕ ನಮೂದು ಮಾಡಿದ್ದಾರೆ ಎಂದು ದೂರಿದ ಹೋರಾಟಗಾರರು, ಕಷ್ಟ ಪಟ್ಟು ಓದಿರುವ ಬಡವರ ಮಕ್ಕಳ ಪ್ರಾಮಾಣಿಕತೆ ಬೆಲೆಯಿಲ್ಲವೆ ಎಂದು ಪ್ರಶ್ನಿಸಿದರು.
ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ತಂತ್ರಾಶದ ಐಡಿ, ಪಾಸ್‌ವಾರ್ಡ್ ಹ್ಯಾಕ್ ಮತ್ತು ದುರುಪಯೋಗ ಆಗಿದೆ ಎಂದರೆ ವಿವಿಯ ಅಧಿಕಾರಿಗಳ ನಿರ್ಲಕ್ಷವೇ ಕಾರಣವಾಗಿದೆ. ಈ ಕರ್ಮಕಾಂಡಕ್ಕೆ ಅಂತ್ಯ ಇಲ್ಲವೆ?, ಬಡ ಮಕ್ಕಳ ಬಾಯಿಗೆ ಮಣ್ಣು ಹಾಕಿ ಶ್ರೀಮಂತರ ಮಕ್ಕಳ ಬಾಯಿಗೆ ಸಕ್ಕರೆ ಹಾಕಿದ್ದೀರಲ್ಲ, ಇದು ನ್ಯಾಯವೇ ಎಂದು ಕಿಡಿಕಾರಿದರು.
ಫೇಲಾದ ವಿದ್ಯಾರ್ಥಿಗಳಿಂದ ಹಣ ಪಡೆದು ಪಾಸು ಮಾಡುವ ದಂಧೆ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದರೂ ಕುಲಪತಿಗಳು ಏಕೆ ಮೌನವಹಿಸಿದ್ದೀರಾ?. ಫೇಲಾದರು ತಂತ್ರಾಂಶದಲ್ಲಿ ಅಂಕ ನಮೂದು ಮಾಡಿ ಪಾಸ್ ಮಾಡಿರುವವರ ಫಲಿತಾಂಶವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿದ ಕುಲಪತಿ (ಮೌಲ್ಯಮಾಪನ) ಪ್ರೊ.ತಿಪ್ಪೇಸ್ವಾಮಿ, ಈ ಬಗ್ಗೆ ಈಗಾಗಲೇ ಪೊಲೀಸರಿಗೆ ದೂರು ನೀಡಲಾಗಿದೆ. ಇದರಲ್ಲಿ ಯಾರೇ ಶಾಮೀಲಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಪದಾಽಕಾರಿಗಳಾದ ಬಂಗವಾದಿ ನಾಗರಾಜಗೌಡ, ಮೂರಾಂಡಹಳ್ಳಿ ಶಿವಾರೆಡ್ಡಿ, ವೆಂಕಟೇಶಪ್ಪ, ಯಲ್ಲಣ್ಣ, ಹರೀಶ್, ಗಿರೀಶ್, ಶಾಂತಮ್ಮ, ಶೈಲಜ, ಗೌರಮ್ಮ, ವೆಂಕಟರತ್ನ, ಮುನಿರತ್ನಮ್ಮ, ಸುಪ್ರಿಂಚಲ, ಮುನಿರಾಜು, ಶಶಿ, ಆಂಜಿನಪ್ಪ, ಚಂದ್ರಪ್ಪ, ಪಾರುಕ್ ಪಾಷ, ಭಾಸ್ಕರ್, ಜುಬೇರ್ ಪಾಷಾ ಇದ್ದರು.