ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ವಿರೋಧಿಸಿ ಪ್ರತಿಭಟನೆ

ಬಾಗಲಕೋಟೆ: ಸಮಗ್ರ ಕರ್ನಾಟಕ ಅಭಿವೃದ್ಧಿ ಬೆಂಬಲಿಸಿ ಮತ್ತು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ವಿರೋಧಿಸಿ ಉತ್ತರ ಕರ್ನಾಟಕ ಅಭಿವೃದ್ಧಿ ಪರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಜೆಡಿಎಸ್ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಕಾರ್ಯ ಕರ್ತರು ಉ.ಕ. ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವ ನಾಯಕರ ವಿರುದ್ಧ ಘೊಷಣೆ ಕೂಗಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜೆಡಿಎಸ್ ಮುಖಂಡ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಉತ್ತರ ಭಾಗದ ಅಭಿವೃದ್ಧಿಗೆ ಇಲ್ಲಿನ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿದೆ. ಆಳ್ವಿಕೆ ನಡೆಸಿದ ಎಲ್ಲ ಸರ್ಕಾರಗಳು ಸಮರ್ಪಕ ಅನುದಾನ ನೀಡಿಲ್ಲ. ಪ್ರತ್ಯೇಕ ರಾಜ್ಯವಾದಲ್ಲಿ ಲೋಕಸಭೆ ಕ್ಷೇತ್ರಗಳು ಒಡೆದು ರಾಜ್ಯದ ಬಲ ಕುಗ್ಗಲಿದೆ. ಆದ್ದರಿಂದ ಪ್ರತ್ಯೇಕ ರಾಜ್ಯದ ಹೋರಾಟ ಕೈ ಬಿಡಬೇಕೆಂದು ಆಗ್ರಹಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಗೆ ಮಾಜಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ ಕೊಡುಗೆ ಅಪಾರವಾಗಿದೆ. ಸಿದ್ದರಾಮಯ್ಯ ಸರ್ಕಾರವೂ ನೀರಾವರಿಗೆ ಆದ್ಯತೆ ನೀಡಿದೆ. ಒಟ್ಟಿನಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.

ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಮಾತನಾಡಿ, ಕನ್ನಡ ಭಾಷಿಕರು ಏಳು ನೂರ ಐವತ್ತು ವರ್ಷಗಳ ನಂತರ ಒಂದಾಗಿ 1956ರಲ್ಲಿ ಕರ್ನಾಟಕದ ಏಕೀಕರಣವಾಯಿತು. ಕರ್ನಾಟಕದ ಅನೇಕ ಭಾಗಗಳಲ್ಲಿನ ಏಳಿಗೆಯಲ್ಲಿ ಸಾಕಷ್ಟು ಕೊರತೆಯಿರುವುದು ನಿಜ. ಇದಕ್ಕೆ ಭ್ರಷ್ಟ ರಾಜಕಾರಣಿಗಳೆ ಕಾರಣ. ಈಗ ಎದ್ದಿರುವ ಪ್ರತ್ಯೇಕ ರಾಜ್ಯದ ಕೂಗಿನಲ್ಲಿ ರಾಜಕೀಯ ಹಿತಾಸಕ್ತಿ ಅಡಗಿದೆ. ಸಿಎಂ ಕುಮಾರಸ್ವಾಮಿ ಸಮಗ್ರ ಕರ್ನಾಟಕದ ಮುಖ್ಯಮಂತ್ರಿ ಯಾಗಿದ್ದು, ಕೊಪ್ಪಳ ರೈತ ಹೋರಾಟದ ಕುರಿತಂತೆ ಆಡಿದ ಮಾತುಗಳು ಕನ್ನಡಿಗರ ನಡುವೆ ಬಿರುಕು ಮೂಡಿಸುತ್ತಿವೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಉ.ಕ. ಅಭಿವೃದ್ಧಿಯಾಗಬೇಕಾದರೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಸಿಕ್ಕಿರುವ 371ಜೆ ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ರಾಜ್ಯ ಸರ್ಕಾರ ಖಾತರಿಪಡಿಸಬೇಕು. ಕೇಂದ್ರ ಸರ್ಕಾರಿ ನೌಕರಿಗಳಾದ ಅಂಚೆ, ಪಿಂಚಣಿ, ತೆರಿಗೆ, ಬ್ಯಾಂಕ್, ರೈಲ್ವೆ ಇಲಾಖೆ ಹುದ್ದೆಗಳನ್ನು 371ಜೆ ಅಡಿ ತಂದು ಸ್ಥಳೀಯ ಕನ್ನಡಿಗರಿಗೆ ಮೀಸಲಿಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಮಹದಾಯಿ ನದಿ ನೀರಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿ ಪರಿಹಾರ ಒದಗಿಸಬೇಕು. ಏಮ್್ಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಲಬುರಗಿ, ಕೃಷ್ಣಾ ನೀರಿನ ಸದ್ಭಳಿಸಿಕೊಳ್ಳಲು ಎ ಸ್ಕೀಮ್ ಮತ್ತು ಬಿ ಸ್ಕೀಮ್​ಡಿಯ ಎಲ್ಲ ಯೋಜನೆಗಳಿಗೆ ವಿಶೇಷ ಅನುದಾನ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಬೇಕು. ಬೆಳಗಾವಿ, ಕಲಬುರಗಿ ವಿಭಾಗದಲ್ಲಿ ತಲಾ ಎರಡು ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲು ಕೇಂದ್ರ ಮುಂದಾಗಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ರವಿ ಹುಣಶ್ಯಾಳ, ಸಲೀಮ್ ಮೋಮಿನ್, ಬಸವರಾಜ ಹಳ್ಳಪ್ಪನವರ, ಭಾಗ್ಯಾ ಬೆಟಗೇರಿ, ಆತ್ಮಾರಾಮ ನೀಲನಾಯಕ, ಬಸವರಾಜ ಅಂಬಿಗೇರ, ಮಲ್ಲು ಕಟ್ಟಿಮನಿ, ಸುಜಾತಾ ದೊಡ್ಡಿಹಾಳ, ವೆಂಕಟೇಶ ಮತ್ತಿಕಟ್ಟಿ ಮತ್ತಿತರರಿದ್ದರು.