ಪ್ರತ್ಯೇಕಕ್ಕೆ ಸಿಗದ ಉತ್ತರ

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ರಾಜಕೀಯ ಮುಖಂಡರು ಹಾಗೂ ರೈತ ವರ್ಗದಿಂದ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಪ್ರತ್ಯೇಕತೆಯ ಕೂಗೇ ಫೂಲಿಷ್ ಆರ್ಗ್ಯೂಮೆಂಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದರೆ, ಕೂಗು ಏಳಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.

ಫೂಲಿಷ್ ಆರ್ಗ್ಯೂಮೆಂಟ್: ಅಖಂಡ ಕರ್ನಾಟಕ, ಏಕೀಕರಣದ ಹೋರಾಟ ಗೊತ್ತಿಲ್ಲದವರು ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ ಎಂದು ಮೈಸೂರಿನಲ್ಲಿ ಕಿಡಿಕಾರಿರುವ ಸಿದ್ದರಾಮಯ್ಯ, ಇದೊಂದು ಫೂಲಿಷ್ ಆರ್ಗ್ಯೂಮೆಂಟ್ ಎಂದು ಹೀಗಳೆದಿದ್ದಾರೆ. ಪ್ರತ್ಯೇಕ ರಾಜ್ಯ ಕೇಳುತ್ತಿರುವುದು ಮೂರ್ಖತನ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಆ ಭಾಗದ ಅಭಿವೃದ್ಧಿಗೆ ಕೋಟ್ಯಂತರ ರೂ.ಹಣ ಕೊಟ್ಟಿದ್ದೇನೆ. ಈಗ ಕೆಲವರು ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡ್ತಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಪ್ರತ್ಯೇಕ ರಾಜ್ಯ ಕೇಳುವವರು ಅಧಿಕಾರದಲ್ಲಿದ್ದಾಗ ಆ ಭಾಗಕ್ಕೆ ನೀಡಿದ ಕೊಡುಗೆ ಏನು? ಉಮೇಶ್ ಕತ್ತಿ ಸೇರಿ ಈ ಬಗ್ಗೆ ಮಾತನಾಡುತ್ತಿರುವ ಯಾರೂ ಆ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡಿಲ್ಲ. ಹೈದರಾಬಾದ್ ಕರ್ನಾಟಕ ಸೇರಿ ಉತ್ತರ ಕರ್ನಾಟಕದ ಯಾವುದೇ ಪ್ರದೇಶದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಕೊಡುಗೆ ಶೂನ್ಯವಾಗಿದೆ ಎಂದು ಪ್ರತಿಕ್ರಿಯಿಸಿದರು.

ಸಿಎಂ ಭೇಟಿಗೆ ಅವಕಾಶ: ಆ. 2ರಂದು ಬಂದ್​ಗೆ ಕರೆ ನೀಡಿರುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಪ್ರಮುಖರಿಗೆ ಆ. 1ರಂದು ಮುಖ್ಯಮಂತ್ರಿಯನ್ನು ಭೇಟಿ ಮಾಡಿಸಿ ಅಹವಾಲು ಮಂಡಿಸಲು ಅವಕಾಶ ನೀಡುವುದಾಗಿ ಸಾರಿಗೆ ಮಂತ್ರಿ ಡಿ.ಸಿ. ತಮ್ಮಣ್ಣ ಹಾಗೂ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಹುಬ್ಬಳ್ಳಿಯಲ್ಲಿ ಭರವಸೆ ನೀಡಿದ್ದಾರೆ.

ಮಠಾಧೀಶರ ಹೋರಾಟಕ್ಕೆ ಬೆಂಬಲ

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ನಿರ್ಲಕ್ಷ್ಯ ಹಾಗೂ ಬೆಳಗಾವಿಯ ಸುವರ್ಣ ವಿಧಾನಸೌಧ ಸದ್ಬಳಕೆ ಸಂಬಂಧ ಜು. 31ರಂದು ಸೌಧದೆದುರು ವಿವಿಧ ಮಠಾಧೀಶರು ನಡೆಸುವ ಪ್ರತಿಭಟನೆಗೆ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿ ಬೆಂಬಲ ಸೂಚಿಸಿದೆ. ಅಲ್ಲದೆ, ಮಠಾಧೀಶರು ಅನುಮತಿ ಕೊಟ್ಟರೆ, ಅಂದು ಪ್ರತ್ಯೇಕ ರಾಜ್ಯದ ಧ್ವಜ ಹಾರಿಸುವುದಾಗಿ ಸಮಿತಿ ಅಧ್ಯಕ್ಷ ಅಡಿವೇಶ ಇಟಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.