ಅಧಿವೇಶನದ ವೇಳೆ ಉ-ಕದ ಪ್ರತ್ಯೇಕ ಧ್ವಜ ಹಾರಿಸಲು ನಿರ್ಧಾರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತ್ಯೇಕ ಧ್ವಜ ಆರೋಹಣಕ್ಕೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ನಿರ್ಧರಿಸಿದ್ದು, ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಹೋರಾಟದ ಎಚ್ಚರಿಕೆ ನೀಡಿದೆ.

ಶನಿವಾರ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಸ್ಪಷ್ಟಪಡಿಸಿದ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಶರೀಫ ಅಮ್ಮಿನಭಾವಿ, ಕಳೆದ ಬಾರಿ ಹೋರಾಟ ಮಾಡಿದಾಗ ಸಿಎಂ ಮೂಗಿಗೆ ತುಪ್ಪ ಸವರಿದ್ದರು. ವಿಧಾನ ಸೌಧದಿಂದ ಬೆಳಗಾವಿಯ ಸುವರ್ಣ ಸೌಧಕ್ಕೆ ಕೆಲ ಕಚೇರಿಗಳನ್ನ ಸ್ಥಳಾಂತರಿಸುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕಚೇರಿ ಬೆಳಗಾವಿಗೆ ಸ್ಥಳಾಂತರವಾಗಿಲ್ಲ ಎಂದರು.

ಬೆಳಗಾವಿ ಅಧಿವೇಶನದ ಹಿನ್ನೆಲೆಯಲ್ಲಿ ಹೋರಾಟಕ್ಕೆ ಸಜ್ಜಾಗಿದ್ದು, ಅಧಿವೇಶನ ನಡೆಯುವ ಸಮಯದಲ್ಲಿ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸುವುದಕ್ಕೆ ನಿರ್ಧರಿಸಿದ್ದೇವೆ. ಉತ್ತರ ಕರ್ನಾಟಕದ 13 ಜಿಲ್ಲೆಗಳ ಹೋರಾಟಗಾರರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು. (ದಿಗ್ವಿಜಯ ನ್ಯೂಸ್)