ಬಂದ್​ಗಿಲ್ಲ ಕರುನಾಡ ಬೆಂಬಲ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅಭಿವೃದ್ಧಿ ಬೇಡಿಕೆಯ ಧ್ವನಿಗೆ ಕರ್ನಾಟಕ ವಿಭಜನೆಯ ಕೂಗು ಸೇರಿಸಿ ಗುರುವಾರ ರಾಜ್ಯದಲ್ಲಿ ಕರೆ ನೀಡಲಾಗಿರುವ ಬಂದ್ ನಡೆಯುವುದೇ ಅನುಮಾನವಾಗಿದೆ. ಬಂದ್​ಗೆ

ಕರೆ ನೀಡಿದ್ದ ಸಂಘಟನೆಗಳ ನಡುವೆ ಸಹಮತ ಏರ್ಪಡದೆ ಹೋರಾಟಗಾರರೇ ಮೂರು ದಿಕ್ಕಿಗೆ ಹೊರಳಿರುವುದರಿಂದ ದಿನಕ್ಕೆ ಮೊದಲೇ ಬಂದ್ ತೀವ್ರತೆ ಕಳೆದುಕೊಂಡಿದೆ. 13 ಜಿಲ್ಲೆಗಳಲ್ಲಿ ಹೋರಾಟ ನಡೆಸುವ ತೀರ್ಮಾನ ಬೆಂಬಲಿಸಿದ್ದ ಬಹುತೇಕ ಸಂಘಟನೆಗಳು ಬಂದ್​ಗೆ ಬೆಂಬಲಿಸುವ ನಿರ್ಧಾರದಿಂದ ಹಿಂದೆ ಸರಿದಿವೆ. ಆ ಮೂಲಕ ನಮ್ಮ ಬೆಂಬಲ ಉತ್ತರ ಕರ್ನಾಟಕ ಅಭಿವೃದ್ಧಿ ಹೋರಾಟಕ್ಕೇ ಹೊರತು ಪ್ರತ್ಯೇಕ ರಾಜ್ಯಕ್ಕಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಪ್ರಮುಖವಾಗಿ ಬಂದ್​ಗೆ ಕರೆ ಕೊಟ್ಟಿದ್ದ ಉ.ಕ. ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಸಿಎಂ ಭರವಸೆ ಹಿನ್ನೆಲೆಯಲ್ಲಿ ಬಂದ್ ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸೇರಿ ಬಂದ್ ರೂಪುರೇಷೆ ಸಿದ್ಧಪಡಿಸುವುದಾಗಿ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದ ರೈತ ಮುಖಂಡ ಬಸವರಾಜ ದಿಂಡೂರ ಕೂಡ ಬಂದ್ ವಿಚಾರದಲ್ಲಿ ಯಾವುದೇ ಹೇಳಿಕೆ ನೀಡಿಲ್ಲ. ಮತ್ತೊಂದೆಡೆ ಉತ್ತರ ಕರ್ನಾಟಕ ರೈತ ಸಂಘದ ಮುಖಂಡ ಬಸವರಾಜ ಕರಿಗಾರ ಮಾತ್ರ ಬಂದ್ ಮಾಡಿಯೇ ಸಿದ್ಧ ಎಂದು ಹೇಳಿ ದ್ದಾರಾದರೂ ಬಂದ್​ಗಾಗಿ ಪೊಲೀಸ್ ಅನುಮತಿ ಪಡೆದಿಲ್ಲ.

ಪ್ರತ್ಯೇಕ ಉ.ಕ. ಬಂದ್​ಗೆ ಸಿಗದ ಸ್ಪಂದನೆ

ಹುಬ್ಬಳ್ಳಿ/ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಹೋರಾಟದ ಕೂಗು ಬಹುತೇಕ ಕ್ಷೀಣಿಸಿದೆ. ಹೋರಾಟಗಾರರೇ ಮೂರು ಹೋಳಾಗಿದ್ದು, ಆ.2ರ ಬಂದ್ ವಾಪಸ್ ಪಡೆದಂತಾಗಿದೆ. ಒಂದೊಂದೇ ಸಂಘಟನೆಗಳು ಬಂದ್​ಗೆ ಬೆಂಬಲ ಇಲ್ಲ ಎಂದು ಬುಧವಾರ ಸಂಜೆಯವರೆಗೂ ಅಧಿಕೃತವಾಗಿ ಹೇಳಿದ್ದರಿಂದ ಬಂದ್ ನಡೆಯಲ್ಲ ಎನ್ನಲಾಗಿದೆ. ಹುಬ್ಬಳ್ಳಿಯಲ್ಲಿ ಸೇರಿ ಬಂದ್ ರೂಪುರೇಷೆ ಸಿದ್ಧಪಡಿಸುವುದಾಗಿ ಬೆಂಗಳೂರಿನಲ್ಲಿ ಮಂಗಳವಾರ ಹೇಳಿಕೆ ನೀಡಿದ್ದ ರೈತ ಮುಖಂಡ ಬಸವರಾಜ ದಿಂಡೂರ, ಬುಧವಾರ ಈ ಕಡೆ ಬರಲೇ ಇಲ್ಲ. ಆದರೆ, ಉತ್ತರ ಕರ್ನಾಟಕ ರೈತ ಸಂಘದ ಮುಖಂಡ ಬಸವರಾಜ ಕರಿಗಾರ ಮಾತ್ರ ಗುರುವಾರ ಬಂದ್ ನಡೆಸಿಯೇ ಸಿದ್ಧ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ಅವರು ಪೊಲೀಸರ ಅನುಮತಿ ಪಡೆದಿಲ್ಲ. ಇತರ ಸಂಘಟನೆಗಳ ಬೆಂಬಲ ಪಡೆದು ಪೂರ್ವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲವಾದ್ದರಿಂದ ಅವರಿಂದಲೂ ಬಂದ್ ಅಸಾಧ್ಯ ಎನ್ನಲಾಗುತ್ತಿದೆ.

ಉತ್ತರ ಕರ್ನಾಟಕದ ಹುಬ್ಬಳ್ಳಿ- ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ರಾಯಚೂರು, ಕೊಪ್ಪಳ, ಕಲಬುರಗಿ, ಬೀದರ್. ಯಾದಗಿರಿ ಜಿಲ್ಲೆಗಳಲ್ಲಿ ಪ್ರಮುಖ ಸಂಘಟನೆಗಳು ಈಗಾಗಲೇ ಬಂದ್​ನಿಂದ ದೂರ ಸರಿದಿವೆ. ಆದರೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿವೆ. ಈ ಯಾವ ಜಿಲ್ಲೆಗಳಲ್ಲೂ ಶಾಲಾ- ಕಾಲೇಜುಗಳಿಗೆ ರಜೆ ಕೂಡ ಘೋಷಿಸಿಲ್ಲ. ಎಲ್ಲ ಜಿಲ್ಲೆಗಳಲ್ಲಿ ಜನಜೀವನ -ವಹಿವಾಟು ಎಂದಿನಂತೆ ಇರಲಿದೆ.

ಪ್ರಮುಖವಾಗಿ ಬಂದ್ ಕರೆ ಕೊಟ್ಟಿದ್ದ ಉ.ಕ. ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಹಾವೇರಿಯಲ್ಲಿ ಮಾತನಾಡಿ, ಸಿಎಂ ಕುಮಾರಸ್ವಾಮಿ ಭರವಸೆ ಹಿನ್ನೆಲೆಯಲ್ಲಿ ಬಂದ್ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ನ.1ರ ಗಡುವು

ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ ಆಗ್ರಹಿಸಿ ಕರೆ ನೀಡಲಾಗಿದ್ದ ಬಂದ್ ಹಿಂಪಡೆಯಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ, ಕರ್ನಾಟಕ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸೇನಾ, ಉತ್ತರ ಕರ್ನಾಟಕ ಕೂಗು ಸಂಘಟನೆಗಳು ಹೇಳಿವೆ. ಸಿಎಂ ಭರವಸೆ ಹಿನ್ನೆಲೆಯಲ್ಲಿ ಮಠಾಧೀಶರ ಸಲಹೆಯಂತೆ ನ.1ರ ಗಡುವು ನೀಡಿ ಹೋರಾಟ ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿಸಿವೆ. ಮಹದಾಯಿ ಹೋರಾಟಗಾರರು ಸಹ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ನೀಡಿಲ್ಲ. ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ, ಕರ್ನಾಟಕ ನವ ನಿರ್ಮಾಣ ವೇದಿಕೆ, ಕರ್ನಾಟಕ ವೀರಶೈವ- ಲಿಂಗಾಯತ ಜಾಗ್ರತಾ ಸಮಿತಿ ಸೇರಿ ಹಲವು ಸಂಘಟನೆಗಳು ಬಂದ್​ಗೆ ಬೆಂಬಲವಿಲ್ಲ ಎಂದು ಪ್ರಕಟಣೆ ಹೊರಡಿಸಿವೆ.

ಸಾಂಕೇತಿಕ ಪ್ರತಿಭಟನೆ, ಮನವಿ

ಮಹದಾಯಿ ಹೋರಾಟಗಾರರು ಸೇರಿ ವಿವಿಧ ಸಂಘಟನೆಗಳ ಮುಖಂಡರು ಸಾಂಕೇತಿಕ ಪ್ರತಿಭಟನೆ ನಡೆಸಿ, ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದ್ದಾರೆ.

ದಾವಣಗೆರೆ ಆಗಲಿ ಎರಡನೇ ರಾಜಧಾನಿ

ಉತ್ತರ- ದಕ್ಷಿಣ ಕರ್ನಾಟಕಕ್ಕೆ ಮಧ್ಯದಲ್ಲಿರುವ ದಾವಣಗೆರೆ ಎರಡನೇ ರಾಜಧಾನಿ ಆಗಬೇಕು. ಇದು ಅರ್ಧ ಶತಮಾನದ ಬೇಡಿಕೆ. ಇದರಿಂದ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ. ದೂರದ ಪ್ರಯಾಣ ತಗ್ಗಲಿದೆ. ಕೆಲಸ ಕಾರ್ಯಗಳಿಗೆ ಬೆಂಗಳೂರಿಗೆ ಅಲೆಯುವುದು ತಪ್ಪಲಿದೆ. ಈ ಸಂಬಂಧ ಸಿಎಂ, ಡಿಸಿಎಂಗೆ ಪತ್ರ ಬರೆಯುವ ಜತೆಗೆ ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸುವೆ. ಸ್ವಾಮೀಜಿಗಳು, ಸಾಹಿತಿಗಳು, ಕನ್ನಡಪರ ಸಂಘಟನೆಗಳು ಒಂದಾಗಿ ಹೋರಾಡಲು ಮುಂದಾದರೆ ನೇತೃತ್ವ ವಹಿಸಲು ನಾನು ಸಿದ್ಧ.

| ಡಾ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಶಾಸಕ

ರೈತ ಸಂಘದಿಂದ ಬಂದ್

ಉತ್ತರ ಕರ್ನಾಟಕ ನಿರ್ಲಕ್ಷ್ಯ ಖಂಡಿಸಿ ಗುರುವಾರ ಬಂದ್ ಆಚರಿಸುವುದು ನಿಶ್ಚಿತ ಎಂದು ಉ.ಕ. ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆದರೆ, ಬಂದ್ ಸ್ವರೂಪದ ಬಗ್ಗೆ ಸಂಘದ ಪದಾಧಿಕಾರಿಗಳು ಗೊಂದಲಮಯ ಹೇಳಿಕೆ ನೀಡಿದ್ದಾರೆ. ಒಬ್ಬರು ಶಾಂತಿಯುತ ಎಂದರೆ, ಇನ್ನೊಬ್ಬರು ಉಗ್ರ ಹೋರಾಟ ಎಂದಿದ್ದಾರೆ. ಉತ್ತರ ಕರ್ನಾಟಕ ವ್ಯಾಪ್ತಿಯ 13 ಜಿಲ್ಲೆಗಳಲ್ಲಿ ಬಂದ್ ಆಚರಿಸಲಾಗುವುದು. ಸರ್ಕಾರಿ ಕಚೇರಿ, ಶಾಲಾ- ಕಾಲೇಜು, ಬಸ್ ಸಂಚಾರ ಹಾಗೂ ಅಂಗಡಿ ಮುಂಗಟ್ಟು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಕೆಲ ಸಂಘಟನೆಗಳು ಬಂದ್​ಗೆ ಬೆಂಬಲ ವ್ಯಕ್ತಪಡಿಸಿವೆ. ಪಾಲಿಕೆಯ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಗುತ್ತಿಗೆ ನೌಕರರು ಬೆಂಬಲ ಸೂಚಿಸಿದ್ದಾರೆ.

ಶ್ರೀರಾಮುಲು ವಿರುದ್ಧ ದೂರು

ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿಸಬೇಕು ಎಂದು ಹೇಳಿ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಶಾಸಕ ಶ್ರೀರಾಮುಲು ವಿರುದ್ಧ ಕನ್ನಡ ಅನುಷ್ಠಾನ ಮಂಡಳಿ ಸದಸ್ಯರು ಬೆಂಗಳೂರಿನ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉತ್ತರ ಕರ್ನಾಟಕದ ಜನರ ಭಾವನೆಗಳ ಜತೆ ಬಿಜೆಪಿ ಚೆಲ್ಲಾಟವಾಡುತ್ತಿದ್ದು, ಪ್ರತ್ಯೇಕ ರಾಜ್ಯದ ಒಡಕಿನ ಕುರಿತಂತೆ ಸ್ಪಷ್ಟ ನಿಲುವು ಘೋಷಿಸಬೇಕು. ಯಡಿಯೂರಪ್ಪ ಸಮ್ಮುಖದಲ್ಲೇ ಉಮೇಶ್ ಕತ್ತಿ ವ್ಯತಿರಿಕ್ತ ಹೇಳಿಕೆ ಕೊಟ್ಟಿದ್ದಾರೆ. ಶ್ರೀರಾಮುಲು, ಪಿ.ರಾಜೀವ್ ಮತ್ತಿತರರು ಕೂಡ ಪ್ರತ್ಯೇಕ ರಾಜ್ಯದ ಪರ ಮಾತನಾಡಿದ್ದಾರೆ. ಇಂಥ ದ್ವಂದ್ವ ನಿಲುವು ರಾಜ್ಯದ ಸಮಗ್ರತೆಗೆ ಧಕ್ಕೆ ತರಲಿದೆ.

| ಎನ್.ಎಚ್.ಕೋನರೆಡ್ಡಿ ಮಾಜಿ ಶಾಸಕ

ಬೆಳಗಾವಿ 2ನೇ ರಾಜಧಾನಿ ಪ್ರಸ್ತಾಪಕ್ಕೆ ಅಪಸ್ವರ

ಬೆಂಗಳೂರು: ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂಬ ಸರ್ಕಾರದ ಚಿಂತನೆಗೆ ಸಚಿವ ಪ್ರಿಯಾಂಕ್ ಖರ್ಗೆ ಅಪಸ್ವರ ಎತ್ತಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಬೆಂಗಳೂರು ಹೊರತುಪಡಿಸಿ ಹೆಚ್ಚುವರಿಯಾಗಿ ಒಂದು ಅಥವಾ ಎರಡು ರಾಜಧಾನಿಗಳನ್ನು ಘೋಷಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅಂತಹ ಚರ್ಚೆ ಅಪ್ರಸ್ತುತ. ಸಿಎಂ ಯಾವ ಅರ್ಥದಲ್ಲಿ ಮಾತನಾಡಿ ದ್ದಾರೋ ಗೊತ್ತಿಲ್ಲ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಆರ್ಥಿಕ ಸಬಲೀಕರಣ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಬಿಜೆಪಿಯ ಮುಖಂಡರು ರಾಜಕೀಯ ಲಾಭಕ್ಕಾಗಿ ಪ್ರತ್ಯೇಕತೆ ಕೂಗಿನೊಂದಿಗೆ ಹೋರಾಟ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಟೀಕಿಸಿದರು. ಡಾ.ನಂಜುಂಡಪ್ಪ ವರದಿ ಅನುಷ್ಠಾನದ ಭಾಗವಾಗಿ ರಾಜ್ಯ ಸರ್ಕಾರ ಬಜೆಟ್​ನಲ್ಲಿ 1,500 ಕೋಟಿ ರೂ. ಮೀಸಲಿಟ್ಟು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸಿಎಂ ರೂಪಿಸಿರುವ ಕ್ರಿಯಾ ಯೋಜನೆಗಳು ಜಾರಿಗೆ ಬರುವ ತನಕ ಜನರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು.

ಬೆಳಗಾವಿಯನ್ನು 2ನೇ ರಾಜಧಾನಿ ಮಾಡುವು ದಾಗಿ ಸಿಎಂ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಾನು ವಕ್ತಾರನಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಆಗಲು ನಾವು ಬಿಡಲ್ಲ. ಅಖಂಡ ಕರ್ನಾಟಕ ಇರಬೇಕು.

| ಡಿ.ಕೆ.ಶಿವಕುಮಾರ್ ಸಚಿವ