ಬೆಂಗಳೂರು: ಉತ್ತರ ಕರ್ನಾಟಕದ ಜನರು ಶ್ರಮಜೀವಿಗಳಾಗಿದ್ದು, ನಮ್ಮತನ ಉಳಿಸಿಕೊಂಡು ಎಲ್ಲರೊಂದಿಗೆ ಹೊಂದಿಕೊಂಡು ಉತ್ತಮ ಬಾಳ್ವೆ ನಡೆಸುವ ಗುಣ ಹೊಂದಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಯಲಹಂಕದ ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘ ಮಂಗಳವಾರ ಆಯೋಜಿಸಿದ್ದ ‘ಸಂಕ್ರಾಂತಿ ಸುಗ್ಗಿ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಕ್ರಾಂತಿಯು ಗ್ರಾಮೀಣ ಪ್ರದೇಶಗಳಲ್ಲಿ ಭೂಮಿತಾಯಿಯನ್ನು ಪೂಜಿಸುವ, ಒಕ್ಕಲುತನಕ್ಕೆ ಮೇಟಿಯಾಗಿರುವ ಎತ್ತುಗಳನ್ನು ಪೂಜಿಸುವ ವಿಶೇಷ ಸಂದರ್ಭವಾಗಿದೆ. ಉತ್ತರ ಕರ್ನಾಟಕದ ಸೊಗಡನ್ನು ಬೆಂಗಳೂರಿನಲ್ಲಿ ಮೂಡಿಸಿ ಆ ಭಾಗದವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಎಲ್ಲಿಯೇ ಹೋದರೂ ನಮ್ಮತನ, ನಮ್ಮೂರು, ನಮ್ಮ ಹಿರಿಯರನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಉತ್ತರ ಕರ್ನಾಟಕದವರ ಭಾಷೆ ಬೆಂಗಳೂರಿಗರಿಗೆ ಹುಂಬರ ಭಾಷೆ ಅಂಥ ಅನಿಸುತ್ತದೆ. ನಮ್ಮ ಕ್ಷೇತ್ರದಾಗ ಜನರಿಗೆ ಬಹಳ ಗೌರವ ಕೊಟ್ಟು ಮಾತನಾಡಿದರೆ, ಯಾಕ್ರಿ ಸಾಹೆಬ್ರ ಏನರ ತಪ್ಪಾಗೇತನ ಅಂತ ಕೇಳ್ತಾರೆ. ನಮ್ಮದು ನೇರ ನುಡಿ, ಇದ್ದಿದ್ದನ್ನು ಇದ್ದಂಗ ಹೇಳತೇವಿ. ಹೃದಯಕ್ಕೆ ಮುಟ್ಟುವಂತೆ ಮಾತನಾಡುತ್ತೇವೆ. ಯಾರದರ ಜೋಡಿ ಜಗಳಾ ಆಡಿದ್ದರೆ ಉದ್ರಿ ಇಲ್ಲ. ನಮ್ಮ ಮನಸಿನಲ್ಲಿ ನಂಜಿಲ್ಲ. ಹೃದಯ ಸ್ಪಂದನೆ ಹೆಚ್ಚಿರುತ್ತದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಯಲಹಂಕದ ರಾಮಕೃಷ್ಣ ವೇದಾಂತ ಆಶ್ರಮದ ಅಭಯಾನಂದ ಮಹಾರಾಜ್, ಶಾಸಕ ಎಸ್.ಆರ್.ವಿಶ್ವನಾಥ, ಯೋಗ ಗುರು ಭವನಲಾಲ್ ಆರ್ಯ, ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಮೇಟಿ, ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ದಿ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ ಹಿರೇಮಠ, ಅಧ್ಯಕ್ಷರಾದ ಶಿವಶರಣಪ್ಪ ಹಾಗೂ ಇತರರಿದ್ದರು.
ಉತ್ತರ ಕರ್ನಾಟಕದ ಜನರಿಗೆ ಬೆಂಗಳೂರಿನಲ್ಲಿ ನಾನು ಸಿಎಂ ಆಗಿದ್ದ ಅವಧಿಯಲ್ಲಿ 3 ಎಕರೆ ಜಮೀನು ಮಂಜೂರು ಮಾಡಿಕೊಟ್ಟಿದ್ದೇವೆ. ಆ ಜಾಗದಲ್ಲಿ ಉತ್ತರ ಕರ್ನಾಟಕ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸುವ ಕೆಲಸ ಆರಂಭವಾಗಲಿ.
– ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ