ಈಶಾನ್ಯ ಭಾರತದಲ್ಲಿ ತಗ್ಗಿದ ಹಿಂಸೆ, ಅಪರಾಧ

ದಿಟ್ಟ ನಿಲುವು, ಸೂಕ್ತ ಯೋಜನೆ, ಪರಿಣಾಮಕಾರಿ ಕಾರ್ಯಾಚರಣೆ, ರಚನಾತ್ಮಕ ಚಟುವಟಿಕೆಗಳಿಂದ ಕೇಂದ್ರ ಗೃಹ ಇಲಾಖೆ ಸಕಾರಾತ್ಮಕ ಪರಿವರ್ತನೆಯನ್ನು ತರುತ್ತಿದೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಹಿಂಸೆ, ಅಪರಾಧ ಪ್ರಕರಣಗಳು ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದ್ದರೆ, ಕೆಂಪು ಉಗ್ರರ ಹಾವಳಿಗೂ ಕಡಿವಾಣ ಬಿದ್ದಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಆಂತರಿಕ ಭದ್ರತೆ, ಗಡಿಭಾಗಗಳ ನಿರ್ವಹಣೆ, ಕೇಂದ್ರ-ರಾಜ್ಯ ಸಂಬಂಧಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ನಿರ್ವಹಣೆ- ಇವು ಕೇಂದ್ರ ಗೃಹಸಚಿವರೊಬ್ಬರು ಉತ್ತರದಾಯಿ ಎನಿಸಿಕೊಳ್ಳುವ ಹೊಣೆಗಾರಿಕೆಗಳು. ಇವುಗಳ ಜತೆಜತೆಗೆ ಅಥವಾ ಇಂಥ ಆಡಳಿತಾತ್ಮಕ ಕೌಶಲಗಳಿಗಿಂತ ಹೆಚ್ಚಾಗಿ, ರಾಜಕೀಯ ವಿವೇಚನಾಶಕ್ತಿ ಅಥವಾ ಕುಶಾಗ್ರಮತಿಯ ಆಧಾರದ ಮೇಲೂ ಗೃಹ ಸಚಿವರೊಬ್ಬರ ಕಾರ್ಯಕ್ಷಮತೆ ನಿಕಷಕ್ಕೆ ಒಡ್ಡಲಾಗುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ಕಳೆದ 4 ವರ್ಷಗಳ ಅವಧಿಯಲ್ಲಿ ರಾಜನಾಥ್ ಸಿಂಗ್​ರಿಂದ ಉತ್ತಮ ಕಾರ್ಯಕ್ಷಮತೆ ಹೊಮ್ಮಿಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ ಎನ್ನಲಡ್ಡಿಯಿಲ್ಲ.

ಗಡಿಗಳಿಗೆ ಬೇಲಿ

15,106.7 ಕಿ.ಮೀ.ನಷ್ಟು ಭೂಗಡಿ ಮತ್ತು ದ್ವೀಪ ಪ್ರದೇಶಗಳದ್ದೂ ಸೇರಿದಂತೆ 7,516.6 ಕಿ.ಮೀ.ನಷ್ಟು ಸಮುದ್ರತೀರವನ್ನು ಭಾರತ ಹೊಂದಿದೆ. 2016ರಲ್ಲಿ ಘೋಷಿಸಲ್ಪ ಟ್ಟಂತೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ ಹಂಚಿ ಕೊಳ್ಳಲಾಗಿರುವ ಗಡಿಯನ್ನು ಮುಚ್ಚುವ/ತಡೆ ನಿರ್ವಿುಸುವ ಪ್ರಕ್ರಿಯೆ ಪೂರ್ಣಗೊಳ್ಳುವ ಸಂಭವವಿದೆ. ಬೇಲಿಹಾಕುವಿಕೆ ಜತೆಗೆ, ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ಮತ್ತು ನೇಪಾಳದೊಂದಿಗಿನ ಗಡಿಗುಂಟ ರಸ್ತೆಗಳನ್ನು ನಿರ್ವಿುಸುವ, ಹೊನಲುದೀಪಗಳನ್ನು ಒದಗಿಸುವ, ಗಡಿಭಾಗದ ವಿವಿಧ ತಾಣಗಳಲ್ಲಿ ಸಂಯೋಜಿತ ಚೆಕ್​ಪೋಸ್ಟ್ ಗಳನ್ನು ಅಭಿವೃದ್ಧಿಪಡಿಸುವ ಹಾಗೂ ಕಡಲತೀರದ ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಗೊಳಿಸುವ ಉಪಕ್ರಮಗಳಿಗೆ ಕೇಂದ್ರ ಗೃಹ ಖಾತೆ ಮುಂದಾಗಿದೆ.

ಸವಾಲುಗಳೂ ಇವೆ

NSCN-IM ಮತ್ತು ಕೇಂದ್ರ ಸರ್ಕಾರದ ನಡುವೆ ಮೂಲ ಒಪ್ಪಂದವೊಂದಕ್ಕೆ ಸಹಿಬೀಳಲಿರುವುದಾಗಿ ಪ್ರಧಾನಿ ಮೋದಿ 2015ರಲ್ಲಿ ಘೋಷಿಸಿದರು. ಇದಾಗಿ 3 ವರ್ಷಗಳೇ ಸಂದಿದ್ದು, ಶಾಂತಿ ಒಡಂಬಡಿಕೆಯನ್ನು ಅಂತಿಮಗೊಳಿಸುವುದಿನ್ನೂ ಬಾಕಿಯಿದೆ- ಹೆಚ್ಚೆಚ್ಚು ಗುಂಪುಗಳು ತಮ್ಮ ಬೇಡಿಕೆಗಳೊಂದಿಗೆ ಮುಂದೆ ಬಂದಿದ್ದು, ಕೇಂದ್ರ ಸರ್ಕಾರದ ಪ್ರತಿನಿಧಿ ಆರ್.ಎನ್. ರವಿ ಅವುಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಬೇಕಿರುವುದರಿಂದಾಗಿ, ಈ ಚರ್ಚಾವಿಷಯಕ್ಕೆ ಆದ್ಯತೆ ಸಿಗದಿರಬಹುದು. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ದೇಶಗಳಿಂದ ಕಿರುಕುಳಕ್ಕೊಳಗಾದ ಹಿಂದೂಗಳು ಭಾರತೀಯ ಪೌರತ್ವ ಪಡೆದುಕೊಳ್ಳುವಂತಾಗಲು ನೆರವಾಗಲೆಂದು ಪ್ರಸ್ತಾವಿಸಲಾದ ಮತ್ತೊಂದು ಪ್ರಮುಖ ಶಾಸನವಾದ ‘ಪೌರತ್ವ (ತಿದ್ದುಪಡಿ) ಮಸೂದೆ, 2016’, ತೊಂದರೆಗೆ ಸಿಲುಕಿದೆ- ಅಸ್ಸಾಂ ಮತ್ತು ಮೇಘಾಲಯದಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳೇ ಇದಕ್ಕೆ ಕಾರಣ. ದೀರ್ಘಕಾಲಿಕ ವೀಸಾ ಸಂಬಂಧಿತ ಶಿಷ್ಟಾಚಾರಗಳನ್ನು ಸಡಿಲಗೊಳಿಸುವ ಮೂಲಕ ಕೇಂದ್ರ ಗೃಹಖಾತೆ ‘ಮಧ್ಯಂತರ ಪರಿಹಾರ’ ನೀಡಿದೆಯಾದರೂ, ಸದರಿ ಮಸೂದೆಯಿನ್ನೂ ಅನಿಶ್ಚಿತವಾಗೇ ಇದೆ; ಧರ್ಮದ ಆಧಾರದ ಮೇಲೆ ಪೌರತ್ವ ನೀಡಬಾರದೆಂಬುದಾಗಿ ವಿಪಕ್ಷಗಳು ತಗಾದೆ ಮಾಡುತ್ತಿರುವುದರಿಂದಾಗಿ, ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರಗೊಳ್ಳುವುದು ಅಸಂಭವವೇ. ‘ಸಾರ್ವಜನಿಕ ಸ್ವತ್ತು ಹಾನಿ ತಡೆ ಕಾಯ್ದೆ, 1984’ರ ಜಾಗದಲ್ಲಿ ‘ಸಾರ್ವಜನಿಕ ಸ್ವತ್ತು ಹಾನಿ ತಡೆ ಕಾಯ್ದೆ (ತಿದ್ದುಪಡಿ) ಮಸೂದೆ, 2015’ನ್ನು ಪ್ರತಿಷ್ಠಾಪಿಸುವ ಗೃಹಖಾತೆಯ ಉದ್ದೇಶಿತ ತಿದ್ದುಪಡಿ ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ. ರಾಜಕೀಯ ನಾಯಕರು ಕರೆನೀಡಿದ್ದಕ್ಕೆ ಘಟಿಸಿದ ಹರತಾಳ, ಪ್ರತಿಭಟನೆ ಮತ್ತು ಬಹಿರಂಗ ಸಭೆ/ಸಾರ್ವಜನಿಕ ಪ್ರದರ್ಶನಗಳ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದಲ್ಲಿ, ಹೀಗೆ ಕರೆಕೊಟ್ಟ ನಾಯಕರನ್ನೇ ಅದಕ್ಕೆ ಉತ್ತರದಾಯಿಗಳನ್ನಾಗಿಸುವುವುದು ಈ ಮಸೂದೆಯ ಉದ್ದೇಶ ಎಂಬುದಿಲ್ಲಿ ಗಮನಾರ್ಹ. ಎಲ್ಲ ಪೊಲೀಸ್ ಠಾಣೆಗಳನ್ನು ಸಂಪರ್ಕಜಾಲವೊಂದರ ವ್ಯಾಪ್ತಿಗೆ ತಂದು, ಪರಿಣಾಮಕಾರಿ ಪೊಲೀಸ್ ಚಟುವಟಿಕೆಗೆ ಸಂಬಂಧಿಸಿದ ಒಂದು ಸಮಗ್ರ ಮತ್ತು ಸಂಯೋಜಿತ ವ್ಯವಸ್ಥೆಯನ್ನು ಒದಗಿಸುವ ಗುರಿಯೊಂದಿಗೆ ಹಿಂದಿನ ಯುಪಿಎ ಸರ್ಕಾರ ಶುರುಮಾಡಿದ Crime and Criminal Tracking Network and Systems (CCTNS) ಉಪಕ್ರಮ ಕಳೆದ ವರ್ಷ ಕಾರ್ಯಾರಂಭ ಮಾಡಿತಾದರೂ, ಸಂಬಂಧಿತ ಸಂಸ್ಥೆಗಳಿಗೆ ಅಗತ್ಯವಿರುವ ಮಟ್ಟಿಗೆ ದತ್ತಾಂಶವನ್ನು ಯಶಸ್ವಿಯಾಗಿ ರೂಪಿಸಲು ಅದಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ ಅಪರಾಧ ದತ್ತಾಂಶಗಳಿಗೆ ಸಂಬಂಧಿಸಿ ಸರ್ಕಾರ ಈಗಲೂ ರಾಜ್ಯ ಪೊಲೀಸ್ ವ್ಯವಸ್ಥೆಯನ್ನೇ ನೆಚ್ಚುವಂತಾಗಿದೆ. ಇನ್ನು, ದೇಶಾದ್ಯಂತ ಏಕಮಾತ್ರ ತುರ್ತು ಪ್ರತಿಕ್ರಿಯೆ ಸಂಖ್ಯೆಯೊಂದನ್ನು ಹುಟ್ಟುಹಾಕುವ ಪ್ರಸ್ತಾವನೆಯೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಭರವಸೆಯ ಕಿರಣ

ಕಳೆದ 4 ವರ್ಷಗಳಲ್ಲಿ ಈಶಾನ್ಯ ಭಾರತದ ಸ್ಥಿತಿ ಸಾಕಷ್ಟು ಸುಧಾರಿಸಿದೆ. ಕೇಂದ್ರ ಗೃಹಖಾತೆಯ ಅನುಸಾರ, ಇಲ್ಲಿ ಬಂಡಾಯ-ಸಂಬಂಧಿತ ಘಟನೆಗಳ ಸಂಖ್ಯೆ 2016ರಲ್ಲಿ 484ರಷ್ಟಿದ್ದುದು, 2017ರಲ್ಲಿ 308ಕ್ಕೆ ಕುಸಿದಿದೆ; 1997ರಿಂದೀಚೆಗಿನ ಅಂಕಿ-ಅಂಶಗಳನ್ನು ಅವಲೋಕಿಸಿದಾಗ, ಇಂಥ ಘಟನೆ ಅತಿಕಡಿಮೆ ಸಂಖ್ಯೆಯಲ್ಲಿ ದಾಖಲಾದ ವರ್ಷವಿದು. ಇದೇ ರೀತಿಯಲ್ಲಿ, 2016ರ ವರ್ಷಕ್ಕೆ ಹೋಲಿಸಿದಾಗ, ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಸಾವುನೋವುಗಳು 2017ರಲ್ಲಿ ಕ್ರಮವಾಗಿ 17ರಿಂದ 12ಕ್ಕೆ ಮತ್ತು 48ರಿಂದ 37ಕ್ಕೆ ಇಳಿದಿವೆ. ಈ ಹಿಂದೆ ಈಶಾನ್ಯ ಭಾರತದ ಅನೇಕ ಭಾಗಗಳಿಗೆ ಅನ್ವಯವಾಗುತ್ತಿದ್ದ ಮತ್ತು ವಿವಾದಾತ್ಮಕವೆನಿಸಿದ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (Armed Forces Special Powers Act- AFSPA) ಈಗ ನಾಗಾಲ್ಯಾಂಡ್, ಅಸ್ಸಾಂ ಮತ್ತು ಅರುಣಾಚಲ ಪ್ರದೇಶಗಳಿಗೆ ಸೀಮಿತವಾಗಿದೆ. ಬಂಡಾಯದ ಗುಂಪುಗಳೊಂದಿಗೆ ಮಾತುಕತೆ ಮತ್ತು ಸಂಧಾನ ನಡೆಸುವ ಕಾರ್ಯನೀತಿಯೊಂದರ ಕುರಿತು ಚಿಂತನ-ಮಂಥನ ನಡೆಸುತ್ತಿರುವ ಕೇಂದ್ರ, ಹಿಂಸಾಚಾರ ಕೈಬಿಡುವಂತೆ, ಶಸ್ತ್ರಾಸ್ತ್ರ ತ್ಯಜಿಸುವಂತೆ ಹಾಗೂ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರೋಪಾಯ ಕಂಡುಕೊಳ್ಳುವಂತೆ ಅವನ್ನು ಉತ್ತೇಜಿಸುತ್ತಿದೆ. ಇನ್ನು, 2015ರ ಜೂನ್​ನಲ್ಲಿ, ಮಣಿಪುರದಲ್ಲಿ ಸೇನೆಯ ಮೇಲಿನ ದಾಳಿಗೆ ಹೊಣೆಗಾರನಾಗಿದ್ದ “NSCN-K’ (National Security Council of Nagaland-Khaplang faction) ಸಂಘಟನೆಯನ್ನು, ‘ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ, 1967’ರ ಅಡಿಯಲ್ಲಿ ‘ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸಲಾಯಿತು.

ಮಹಿಳಾ ಪ್ರಾತಿನಿಧ್ಯ ಹೆಚ್ಚಳ

ಮಹಿಳೆಯರ ಮೇಲಿನ ಅಪರಾಧಗಳನ್ನು ತಗ್ಗಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಪಡೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸುವ, 247 ಮಹಿಳಾ ಪೊಲೀಸ್ ಸಹಾಯವಾಣಿ ವ್ಯವಸ್ಥೆಗಳನ್ನು ಸ್ಥಾಪಿಸುವಂಥ ಉಪಕ್ರಮಗಳಿಗೆ ಮುಂದಾಗುವಂತೆ ರಾಜ್ಯಗಳನ್ನು ಕೋರುವ ಸಲಹೆಗಾರರು/ಸಲಹಾ ಸಮಿತಿಗಳನ್ನು ಕೇಂದ್ರ ಗೃಹಖಾತೆ ರಾಜ್ಯಗಳಿಗೆ ಕಳುಹಿಸಿದೆ. ಮಕ್ಕಳು ಮತ್ತು ಮಹಿಳೆಯರ ಮೇಲಿನ ಅಪರಾಧಕ್ಕೆ ಸಂಬಂಧಿಸಿದ ‘ಅಪರಾಧ ಕಾನೂನು (ತಿದ್ದುಪಡಿ) ಸುಗ್ರೀವಾಜ್ಞೆ, 2018’ ಉಗ್ರಶಿಕ್ಷೆಯ ಉಪಬಂಧದೊಂದಿಗೆ ಏಪ್ರಿಲ್​ನಿಂದ ಜಾರಿಗೆ ಬಂದಿದೆ. ‘ಬ್ರೂ’ ಜನಾಂಗೀಯ ವಲಸೆಗಾರರನ್ನು ಮಿಜೋರಾಂಗೆ ವಾಪಸು ಕಳಿಸುವ ಪ್ರಕ್ರಿಯೆ ಮುಂಬರುವ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಜನಾಂಗೀಯ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲೆಂದು ಈ ಜನರು 1997ರಲ್ಲಿ ತ್ರಿಪುರಾಕ್ಕೆ ಪಲಾಯನ ಮಾಡಿದ್ದರು. ಇದುವರೆಗೆ, 1,622 ಬ್ರೂ ಜನಾಂಗೀಯ ಕುಟುಂಬಗಳನ್ನು ಅವುಗಳ ಮೂಲನೆಲೆಗೆ ವಾಪಸ್ ಕಳಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದೆ ಇಂಥ ಪ್ರಕ್ರಿಯೆಗೆ ಒಳಗಾಗಲಿರುವ 5,407 ಕುಟುಂಬಗಳನ್ನು ಗುರುತಿಸಲಾಗಿದೆ.

ಆಗಿರುವ ಸಾಧನೆಯೇನು?

ಜಮ್ಮು-ಕಾಶ್ಮೀರ, ಎಡಪಂಥೀಯ ಉಗ್ರಗಾಮಿ ಸಿದ್ಧಾಂತ ದಾಳಿಗೆ ಸಿಲುಕಿರುವ ದಕ್ಷಿಣ ಮತ್ತು ದಕ್ಷಿಣ-ಮಧ್ಯ ಭಾರತದ ಪ್ರದೇಶಗಳು ಹಾಗೂ ಈಶಾನ್ಯ ಭಾರತದ ಹೊರಗಡೆ ಯಾವುದೇ ಪ್ರಮುಖ ಭಯೋತ್ಪಾದಕ ದಾಳಿಯಾಗದಂತೆ ತಡೆಗಟ್ಟಿರುವುದು, ಮೋದಿ ಸರ್ಕಾರದ ಅತಿದೊಡ್ಡ ಸಾಧನೆಗಳಲ್ಲೊಂದು ಎನ್ನಬೇಕು; 2016ರ ಜನವರಿಯಲ್ಲಿ ಪಠಾನ್​ಕೋಟ್ ವಾಯುನೆಲೆಯ ಮೇಲಾದ ಭಯೋತ್ಪಾದಕ ದಾಳಿಯೇ ಈ ಬಾಬತ್ತಿನಲ್ಲಿ ಕೊನೆಯದಾಗಿತ್ತು ಎಂಬುದು ಗಮನಾರ್ಹ. 2011ರಿಂದ ಶುರುವಾದ, ಎಡಪಂಥೀಯ ಉಗ್ರರ ಹಿಂಸಾಚಾರ ಪ್ರಕರಣಗಳ ಕುಸಿತದ ಪ್ರವೃತ್ತಿಯು ಕಳೆದ 4 ವರ್ಷಗಳಲ್ಲಿ ಮತ್ತಷ್ಟು ಸುಧಾರಿಸಿದೆ. 2013ರ ವರ್ಷಕ್ಕೆ ಹೋಲಿಸಿದಾಗ, 2017ರ ವರ್ಷದಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ ಒಟ್ಟಾರೆಯಾಗಿ ಶೇ. 20ರಷ್ಟು ಕುಸಿತವಾಗಿರುವುದು (2013ರಲ್ಲಿ 1,136ರಷ್ಟಿದ್ದುದು 2017ರಲ್ಲಿ 908ಕ್ಕೆ ತಗ್ಗಿದೆ) ಮತ್ತು ಎಡಪಂಥೀಯ ಉಗ್ರರ ದಾಳಿ ಸಂಬಂಧಿತ ಸಾವುಗಳಲ್ಲಿ ಶೇ. 33.8ರಷ್ಟು ಇಳಿಕೆ ದಾಖಲಾಗಿರುವುದು ಈ ಮಾತಿಗೆ ಪುಷ್ಟಿ ನೀಡುತ್ತವೆ. ಪ್ರಸಕ್ತ ವರ್ಷದ ಏಪ್ರಿಲ್​ನಲ್ಲಿ, ಮಾವೋವಾದಿಗಳ ಪ್ರಭಾವವಿರುವ ಪ್ರದೇಶಗಳ ಪಟ್ಟಿಯಿಂದ 44 ಜಿಲ್ಲೆಗಳನ್ನು ಕೇಂದ್ರ ಗೃಹಖಾತೆಯು ತೆಗೆದುಹಾಕಿದ್ದು, ಮಾವೋವಾದಿಗಳ ಅತೀವದಾಳಿಗೆ ಒಳಗಾದ ಪ್ರದೇಶಗಳ ಪೈಕಿ ಹೀನಸ್ಥಿತಿಯಲ್ಲಿದ್ದ ಜಿಲ್ಲೆಗಳ ಸಂಖ್ಯೆ 36ರಿಂದ 30ಕ್ಕೆ ಇಳಿದಿದೆ. ಆದಾಗ್ಯೂ, ತಮಿಳುನಾಡು, ಕೇರಳ ಮತ್ತು ಕರ್ನಾಟಕದ ‘ತ್ರಿಸಂಧಿಸ್ಥಾನ’ದಲ್ಲಿ ಮಾವೋವಾದಿಗಳ ಚಟುವಟಿಕೆಗಳು ಗರಿಗೆದರಿರುವುದು ಗಮನಕ್ಕೆ ಬಂದಿದ್ದು, ಕೇರಳದ ಮೂರು ಜಿಲ್ಲೆಗಳನ್ನು ಕೇಂದ್ರವು ಭದ್ರತಾ ಸಂಬಂಧಿತ ವಿನಿಯೋಗದಲ್ಲಿ ಸೇರ್ಪಡೆಮಾಡುವಂತಾಗಿದೆ.

Leave a Reply

Your email address will not be published. Required fields are marked *