ವಾಡಿಕೆ ಮುಂಗಾರು: ಹವಾಮಾನ ಇಲಾಖೆ ವರದಿ

ನವದೆಹಲಿ: ಈ ಬಾರಿಯ ಮುಂಗಾರು ಮಳೆ ವಾಡಿಕೆ ಪ್ರಮಾಣದಲ್ಲಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಎಲ್-ನಿನೊ ಪರಿಣಾಮ ಕ್ಷೀಣವಾಗುವ ಸಾಧ್ಯತೆ ಇದ್ದು, ನೈಋತ್ಯ ಮುಂಗಾರು ಮೇ ಅಂತ್ಯಕ್ಕೆ ಭಾರತ ಪ್ರವೇಶಿಸಲಿದೆ. ದೇಶದಲ್ಲಿ ವಾರ್ಷಿಕವಾಗಿ ಸುರಿಯುವ ಒಟ್ಟಾರೆ ಮಳೆ ಪ್ರಮಾಣದ ಶೇ. 70 ವರ್ಷಧಾರೆ ಈ ಮುಂಗಾರಿನಲ್ಲಿ ಸುರಿಯುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ದೀರ್ಘಾವಧಿಯಲ್ಲಿ (ಜೂನ್​ನಿಂದ ಸೆಪ್ಟೆಂಬರ್) ಮಳೆ ಪ್ರಮಾಣ ಶೇ. 96ರ ಸಮೀಪ ಇರಲಿದೆ. ಶೇ. 96ರಿಂದ ಶೇ. 104 ಮಳೆಯಾದರೆ ಅದನ್ನು ವಾಡಿಕೆ ಮಳೆ ಎಂದು ವ್ಯಾಖ್ಯಾನಿಸಲಾಗುತ್ತದೆ. ಕಳೆದ ಐದು ದಶಕದಲ್ಲಿ ಮುಂಗಾರಿನ ನಾಲ್ಕು ತಿಂಗಳಲ್ಲಿ ಭಾರತದಲ್ಲಿ ಸರಾಸರಿ 89 ಸೆಂ.ಮೀ. ಮಳೆ ಸುರಿದಿದೆ ಎಂದು ವಿಶ್ಲೇಷಿಸಲಾಗಿದೆ.

ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಎರಡು ವಾರದ ಹಿಂದೆ ನೀಡಿದ್ದ ವರದಿಯಲ್ಲಿ ಮಳೆ ಕೊರತೆಯಾಗುವ ಸಾಧ್ಯತೆ ಇದೆ ಎಂದಿತ್ತು.

ಏನಿದು ಎಲ್-ನಿನೊ?: ಎಲ್-ನಿನೊ ಎಂಬುದು ಹವಾಮಾನದ ಒಂದು ಮಾದರಿ. ಶಾಂತ ಸಾಗರದ ಪೂರ್ವ ವಲಯ ದಲ್ಲಿನ ತಾಪಮಾನ ಏರಿಕೆ ಮತ್ತು ಸಮುದ್ರ ನೀರು ಹೆಚ್ಚು ಬಿಸಿಯಾಗುವಿಕೆಯಿಂದ ಈ ಮಾದರಿ ಏರ್ಪಡುತ್ತದೆ. ಇದರ ಏರುಪೇರಿ ನಿಂದ ಮಳೆಮಾರುತಗಳು ದುರ್ಬಲವಾಗುತ್ತವೆ. ಈ ಎಲ್-ನಿನೊ ಸಾಧಾರಣವಾಗಿ ಎರಡರಿಂದ ಏಳು ವರ್ಷಗಳ ಮಧ್ಯಂತರದಲ್ಲಿ ಉಂಟಾಗುತ್ತದೆ.

Leave a Reply

Your email address will not be published. Required fields are marked *