ಅವೈಜ್ಞಾನಿಕ ಕೈಗಾರಿಕೆ ನೀತಿ ಅಭಿವೃದ್ಧಿಗೆ ಅಡ್ಡಿ

<<<ಜಿಲ್ಲಾ ಕೈಗಾರಿಕೆ ಸಂಸ್ಥೆಗಳ ರಾಜ್ಯ ಸಮಾವೇಶ>>>

<<<ಆಂಧ್ರ ಮಾದರಿಯಲ್ಲಿ ಪ್ರತಿ ಜಿಲ್ಲೆಗೆ ಕೂಲಿ ನಿಗದಿಗೆ ಆಗ್ರಹ>>>

ದಾವಣಗೆರೆ: ಅವೈಜ್ಞಾನಿಕ ಕೈಗಾರಿಕಾ ನೀತಿ, ಅಧಿಕಾರಿಗಳ ನಿರ್ಲಕ್ಷೃದಿಂದ ಕೈಗಾರಿಕೆ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಕರ್ನಾಟಕ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸಂಸ್ಥೆ ಅಧ್ಯಕ್ಷ ಸುಧಾಕರ ಶೆಟ್ಟಿ ಅಭಿಪ್ರಾಯಪಟ್ಟರು.

ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದರು.

ಮುದ್ರಾ, ಸ್ಟಾಂಡ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮೊದಲಾದ ಕೈಗಾರಿಕಾಭಿವೃದ್ಧಿ ಯೋಜನೆಗಳು ಸರ್ಕಾರಿ ತಿಜೋರಿಯಲ್ಲಿ ಭದ್ರವಾಗಿವೆ. ಸಮರ್ಪಕ ಮಾಹಿತಿ ಹಾಗೂ ಅನುಷ್ಠಾನ ಕೊರತೆಯಿಂದ ಕೈಗಾರಿಕಾ ಕ್ಷೇತ್ರ ಬಳಲಿದೆ ಎಂದರು.

ರಾಜ್ಯದ ಪ್ರತಿ ಜಿಲ್ಲೆಗಳು ವಿಶಿಷ್ಟವಾಗಿವೆ. ಬೆಂಗಳೂರನ್ನು ಮಾನದಂಡ ಮಾಡಿಕೊಂಡು ಪ್ರತಿ ಜಿಲ್ಲೆಯ ಕಾರ್ಮಿಕರ ಕನಿಷ್ಠ ಕೂಲಿ ನಿರ್ಧರಿಸುವುದು ಅವೈಜ್ಞಾನಿಕ. ಅಲ್ಲಿನ ಹವಾಗುಣ, ಸಾಮಾಜಿಕ ಸ್ಥಿತಿ, ಲಭ್ಯ ಮಾನವ ಸಂಪನ್ಮೂಲ ಗಮನಿಸಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನಿರ್ಧರಿಸಬೇಕು.

ಆಂಧ್ರ ಪ್ರದೇಶದ ಪ್ರತಿ ಜಿಲ್ಲೆಗೂ ಪ್ರತ್ಯೇಕ ಕನಿಷ್ಠ ಕೂಲಿ ಪದ್ಧತಿ ಜಾರಿಯಲ್ಲಿದೆ. ಈ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂದು ತಿಳಿಸಿದರು.

ಕೈಗಾರಿಕೆ ಸಾಲ ನೀಡಿಕೆ ನೀತಿ ಹಾಗೂ ಬಡ್ಡಿ ದರದಲ್ಲಿ ಬದಲಾವಣೆಯಾದಾಗ ಅಭಿವೃದ್ಧಿ ಸಾಧ್ಯ ಎಂದರು.

ಮ್ಯಾಂಚೆಸ್ಟರ್ ಖ್ಯಾತಿಯ ದಾವಣಗೆರೆ, ಮುದ್ರಣ ಕಾಶಿ ಎಂದು ಹೆಸರಾಗಿದ್ದ ಗದಗ ಕೀರ್ತಿ ಮರೆಯಾಗಿದೆ. ಪ್ರದೇಶವಾರು ಲಭ್ಯವಿರುವ ತಂತ್ರಜ್ಞಾನ, ಸಂಪನ್ಮೂಲ ಬಳಸಿಕೊಂಡು ಕೈಗಾರಿಕೆ ಅಭಿವೃದ್ಧಿಪಡಿಸಲು ಎಫ್‌ಕೆಸಿಸಿಐ ಸರ್ಕಾರದ ಜತೆಗೆ ಶ್ರಮಿಸುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಕೆ. ರವಿ ಮಾತನಾಡಿ, ಇಸ್ರೇಲ್ ಛೇಂಬರ್ ಜತೆ ಒಡಂಬಡಿಕೆ ಮಾಡಿಕೊಂಡು ಕೃಷಿ ಪರಿಕರಗಳನ್ನು ಒದಗಿಸಲು ಹೈಟೆಕ್ ಅಗ್ರಿ ಸೆಲ್ ಆರಂಭಿಸಿದ್ದೇವೆ. ಅಂತರ್ಜಾಲ, ಕೃತಕ ಬುದ್ಧಿವಂತಿಕೆ, ರೋಬಾಟಿಕ್ಸ್, ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪ್ರಯತ್ನಗಳು ನಡೆದಿವೆ ಎಂದರು.

ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಮಾತನಾಡಿ, ಸರ್ಕಾರದ ಉಚಿತ ಅಕ್ಕಿ ಯೋಜನೆಯಿಂದ ಕೈಗಾರಿಕೆಗಳಿಗೆ ಕಾರ್ಮಿಕರು ಲಭ್ಯತೆ ಕುಸಿದಿದೆ. ನೋಟು ಅನಾಣ್ಯೀಕರಣ, ಜಿಎಸ್‌ಟಿ ಜಾರಿಯಿಂದ ಕೈಗಾರಿಕೋದ್ಯಮ ಚೇತರಿಸಿಕೊಂಡಿಲ್ಲ ಎಂದು ತಿಳಿಸಿದರು.

ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಫ್‌ಕೆಸಿಸಿಐ ಉಪಾಧ್ಯಕ್ಷ ಸಿ.ಆರ್.ಜನಾರ್ಧನ, ಛೇಂಬರ್ಸ್‌ ಜಿಲ್ಲಾಧ್ಯಕ್ಷ ಯಜಮಾನ್ ಮೋತಿ ವೀರಣ್ಣ, ಬಾಪೂಜಿ ಶಿಕ್ಷಣ ಸಂಸ್ಥೆ ಖಜಾಂಚಿ ಎ.ಸಿ.ಜಯಣ್ಣ, ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಎನ್. ಯಶವಂತರಾಜ್, ಸಮಾವೇಶದ ಸಂಚಾಲಕ ಅಕ್ಕಿ ಮಲ್ಲಿಕಾರ್ಜುನ್ ಇದ್ದರು.

Leave a Reply

Your email address will not be published. Required fields are marked *