ರಾಜಕೀಯೇತರ ಪಕ್ಷಕ್ಕೆ ಅಧಿಕಾರ ಕೊಡಿ

ಬೆಳಗಾವಿ: ದೇಶದಲ್ಲಿ 70ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಜಾಕೀಯ ಪಕ್ಷಕ್ಕೆ ಅಧಿಕಾರ ನೀಡಿ ಎಂದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿನ ಸಮಸ್ಯೆಗಳಿಗೆ 70 ವರ್ಷ ಆಡಳಿತ ನಡೆಸಿದ ಸರ್ಕಾರಗಳೇ ಕಾರಣವಾಗಿವೆ. ಜನಪ್ರತಿನಿಧಿಗಳು ಸಮಸ್ಯೆ ಪರಿಹರಿಸದೆ ನಿರ್ಲಕ್ಷೃ ಮಾಡಿಕೊಂಡು ಬರುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಬೇಕಾದರೆ.

ರಾಜಕೀಯೇತರವಾಗಿ ಕೆಲಸ ಮಾಡುತ್ತಿರುವ ಪ್ರಜಾಕೀಯ ಬೆಂಬಲಿಸಿ ಅಧಿಕಾರ ನೀಡಬೇಕು ಎಂದರು.
ಪ್ರಜೆಗಳಿಂದ ಪ್ರಜೆಗಳಿಗಾಗಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ನಿರ್ಮಾಣಗೊಂಡಿರುವ ವಿಧಾನಸೌಧ ಮತ್ತು ಸುವರ್ಣ ಸೌಧಗಳಲ್ಲಿ ಪ್ರಜೆಗಳಿಗೆ ಮುಕ್ತ ಅವಕಾಶ ಇಲ್ಲ. ಇವತ್ತಿಗೂ ಪ್ರಜೆಗಳು ರಸ್ತೆಯ ಮೇಲೆ ನಿಂತು ಸೌಧಗಳನ್ನು ನೋಡುತ್ತಿದ್ದಾರೆ. ನಮ್ಮ ರಾಜಕಾರಣಿಗಳು ಸೌಧಗಳನ್ನು ವ್ಯಾಪಾರ ವಹಿವಾಟಿನ ಕೇಂದ್ರವನ್ನಾಗಿ ಮಾಡಿದ್ದಾರೆ ವಿನಃ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತಮ ಪ್ರಜಾಕೀಯ ಅಧಿಕಾರಕ್ಕೆ ಬಂದರೆ ವಿಧಾನಸೌಧವನ್ನು ಮನರಂಜನಾ ತಾಣ,ಯುವ ಸಮುದಾಯಕ್ಕೆ ಶಿಕ್ಷಣ ನೀಡುವ ಸಂಸ್ಥೆಯನ್ನಾಗಿಸುವೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಭರವಸೆ ನೀಡಲು ನಾವು ರಾಜಕೀಯ ನಾಯಕರಲ್ಲ, ಸೇವಕರೂ ಅಲ್ಲ. ನಾವೆಲ್ಲ ಕಾರ್ಮಿಕರು. ನೀವು ಹೇಳಿದಂತೆ ಕೇಳುವ, ಕೆಲಸ ಮಾಡುವ ಕಾರ್ಮಿಕರು. ಹಾಗಾಗಿ ಚುನಾವಣೆಯಲ್ಲಿ ಸುಳ್ಳು ಭರವಸೆಯ ಒಳಗೊಂಡಿರುವ ಪ್ರಣಾಳಿಕೆ ನೀಡುವುದಿಲ್ಲ. ಜನರೇ ಪ್ರಣಾಳಿಕೆಗಳನ್ನು ನಿರ್ಧರಿಸಿಕೊಳ್ಳಲಿ ಎಂದು ಖಾಲಿ ಪೇಪರ್ ನೀಡಲಾಗಿದೆ ಎಂದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು, ಇನ್ನಿತರರು ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ನಮ್ಮ ಕೆಲಸವನ್ನು ನಾವು ಮೌನವಾಗಿ ಮಾಡುತ್ತಿದ್ದೇವೆ.
|ಉಪೇಂದ್ರ, ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ