More

  7 ತಿಂಗಳಿಂದ ಬಾರದ ಹಾಲಿನ ಪ್ರೋತ್ಸಾಹ ಧನ

  ಕಾರವಾರ: ಒಂದೆಡೆ ರೈತರಿಂದ ಹಾಲು ಖರೀದಿ ದರ ಇಳಿಸುವ ಕುರಿತು ಚರ್ಚೆ ನಡೆದಿದೆ. ಈ ನಡುವೆ ಏಳು ತಿಂಗಳ ಹಾಲಿನ ಪ್ರೋತ್ಸಾಹಧನವನ್ನು ಸರ್ಕಾರ ಹೈನುಗಾರರಿಗೆ ನೀಡುವುದು ಬಾಕಿ ಇದೆ.

  ಹೈನುಗಾರಿಕೆ ಮಾಡುವವರನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರವು ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳ ವ್ಯಾಪ್ತಿಗೆ ಬರುವ ಎಲ್ಲ ಸಹಕಾರ ಸಂಘಗಳಿಗೆ ನೀಡುವ ಪ್ರತಿ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹಧನ ಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದಿತು. 2013ರಲ್ಲಿ ಅದನ್ನು 4 ರೂ.ಗೆ, 2017ರ ಡಿಸೆಂಬರ್‌ನಿಂದ ಅದನ್ನು 5 ರೂ.ಗೆ ಹೆಚ್ಚಿಸಲಾಗಿದೆ.

  ಸಹಕಾರ ಸಂಘಗಳ ಕಾರ್ಯದರ್ಶಿಗಳು ಪ್ರತಿ ತಿಂಗಳು ಹೈನುಗಾರರು ನೀಡಿದ ಹಾಲಿನ ಪ್ರಮಾಣ ಹಾಗೂ ಅವರ ಬ್ಯಾಂಕ್ ಖಾತೆಯ ವಿವರವನ್ನು ಸರ್ಕಾರಕ್ಕೆ ಒಪ್ಪಿಸುತ್ತಾರೆ. ಸರ್ಕಾರ ಎರಡು, ಮೂರು ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪ್ರೋತ್ಸಾಹಧನದ ಹಣವನ್ನು ಬಿಡುಗಡೆ ಮಾಡುತ್ತಿತ್ತು.

  ಹಾಲು ಮಾರಾಟದ ಆಧಾರದ ಮೇಲೆ ಪ್ರತಿ ತಿಂಗಳು ಸರ್ಕಾರ ಸುಮಾರು 90 ರಿಂದ 110 ಕೋಟಿ ರೂ.ಗಳನ್ನು ಪ್ರೋತ್ಸಾಹಧನ ರೂಪದಲ್ಲಿ ನೀಡುತ್ತಿತ್ತು. ಆದರೆ, 2022ರ ನವೆಂಬರ್‌ನಿಂದ ಸರ್ಕಾರ ಪ್ರೋತ್ಸಾಹಧನ ನೀಡಿಲ್ಲ. ಸುಮಾರು 620 ಕೋಟಿ ರೂ.ಗೂ ಅಧಿಕ ಪ್ರೋತ್ಸಾಹಧನವನ್ನು ಹೈನುಗಾರರಿಗೆ ನೀಡುವುದು ಬಾಕಿ ಇದೆ ಎನ್ನಲಾಗಿದೆ.

  ಮೇವಿನ ದರ ಏರಿಕೆಯಾಗಿದೆ. ಪಶು ಆಹಾರ ಅಥವಾ ಹಿಂಡಿ ದರ ಏರಿಕೆಯಾಗಿದೆ. ಜಾನುವಾರುಗಳು ಲಂಪಿ ಸ್ಕೀನ್ ಎಂಬ ರೋಗದಿಂದ ಬಳಲುತ್ತಿದ್ದು, ಅದರಿಂದ ಹಾಲಿನ ಇಳುವರಿ ಗಣನೀಯವಾಗಿ ಇಳಿಕೆಯಾಗಿದೆ.

  ಕೆಲ ಜಾನುವಾರುಗಳು ರೋಗದಿಂದ ಮೃತಪಟ್ಟಿವೆ. ಈ ಎಲ್ಲ ಕಾರಣಗಳಿಂದ ರೈತರು ಹೈನುಗಾರಿಕೆಯಿಂದಲೇ ದೂರವಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಪ್ರೋತ್ಸಾಹಧನ ಬಾಕಿ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ.

  ಏಳೂವರೆ ತಿಂಗಳಿಂದ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನ ಬಾಕಿ ಇದೆ. ಶೀಘ್ರದಲ್ಲಿ ಬಿಡುಗಡೆ ಮಾಡುವಂತೆ ಧಾರವಾಡ ಹಾಲು ಒಕ್ಕೂಟದಿಂದ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಲಾಗಿದೆ. ಈಗ ಹೊಸ ಸರ್ಕಾರ ಬಂದಿದ್ದು, ಈಗಲಾದರೂ ಹಣ ಬಿಡುಗಡೆ ಮಾಡುವುದೇ ಎಂದು ಕಾದು ನೋಡಬೇಕಿದೆ.
  >ಸುರೇಶ್ಚಂದ್ರ ಹೆಗಡೆ ,ಕೆಎಂಎ್ ನೌಕರರ ಕ್ಷೇಮಾಭಿವೃದ್ಧಿ ಮಂಡಳಿ ಅಧ್ಯಕ್ಷ

  ಹಿಂಡಿ, ಹುಲ್ಲು ಎಲ್ಲ ಬೆಲೆ ಹೆಚ್ಚಾಗಿದೆ. ಹೈನುಗಾರಿಕೆ ನಷ್ಟದ ಹಾದಿಯಲ್ಲಿ ಸಾಗುತ್ತಿದೆ. ಹಾಲು ಉತ್ಪಾದನೆಯೇ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ರೈತರು ಹಸು ಸಾಕಣೆಯಿಂದ ದೂರ ಹೋಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಹತ್ತಾರು ಸಾವಿರ ರೂ. ಪ್ರೋತ್ಸಾಹಧನ ಸರ್ಕಾರದಿಂದ ಬಾಕಿ ಇದೆ. ಈ ರೀತಿ ಐದಾರು ತಿಂಗಳು ಬಿಟ್ಟು ಹಣ ನೀಡಿದರೆ ಪ್ರಯೋಜನವಿಲ್ಲ. ಶೀಘ್ರದಲ್ಲಿ ಪ್ರೋತ್ಸಾಹಧ ಬಿಡುಗಡೆ ಮಾಡಬೇಕು.
  >ಶ್ರೀನಿವಾಸ ಹೆಗಡೆ, ಹಾಲು ಉತ್ಪಾದಕ ಶಿರಸಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts