ಮೊಬೈಲ್ ವಿರಹದ ವೇದನೆ

ಇಂಗ್ಲಿಷಿನಲ್ಲಿ ಫೋಬಿಯಾ (phobia) ಎಂಬ ಒಂದು ಪದವಿದೆ. ಸದಾ ಕಾಡುವ ಭೀತಿ, ಹೆದರಿಕೆ ಅಥವಾ ವಿಪರೀತ ಭಯವನ್ನು ಈ ಪದ ಪ್ರತಿನಿಧಿಸುತ್ತದೆ. ವಿಭಿನ್ನ ರೀತಿಯ ಹೆದರಿಕೆಗಳನ್ನು ಬೇರೆಬೇರೆ ಹೆಸರುಗಳಿಂದ ಗುರುತಿಸಲಾಗುತ್ತದೆ. ಹಲ್ಲಿಯ ಭಯ, ಎತ್ತರದ ಭಯ, ಕತ್ತಲೆಯ ಭಯ – ಹೀಗೆ ಪ್ರತಿಯೊಂದು ಬಗೆಯ ಭೀತಿಗೂ ಬೇರೆಯದೇ ಆದ ಹೆಸರಿದೆ.

ಇಂಥದ್ದೇ ಒಂದು ಭೀತಿಯ ಹೆಸರು ‘ನೋಮೊಫೋಬಿಯಾ’. ಫೋಬಿಯಾಗಳ ಸಾಲಿನಲ್ಲಿ ತಕ್ಕಮಟ್ಟಿಗೆ ಹೊಸದೆಂದೇ ಹೇಳಬಹುದಾದ ಈ ಭೀತಿಗೆ ಕಾರಣ – ನಮ್ಮೆಲ್ಲರ ಕೈಯಲ್ಲೂ ಇರುವ ಮೊಬೈಲ್ ಫೋನು!

ಹಲ್ಲಿಯನ್ನೋ ಜಿರಳೆಯನ್ನೋ ಕಂಡು ಹೆದರಿಕೊಳ್ಳುವ ಹಾಗೆ ನೋಮೊಫೀಬಿಯಾ ಪೀಡಿತರು ಮೊಬೈಲ್ ಫೋನ್ ಕಂಡು ಹೆದರುತ್ತಾರೆಯೇ? ಖಂಡಿತಾ ಇಲ್ಲ. ಯಾವುದೋ ಕಾರಣದಿಂದ ಮೊಬೈಲ್ ಬಳಸಲು ಸಾಧ್ಯವಾಗದಿದ್ದರೆ ಏನು ಮಾಡುವುದು ಎನ್ನುವುದು ಅವರ ಭೀತಿಗೆ ಕಾರಣ. ಈ ಭೀತಿಯ ಹೆಸರಿನಲ್ಲಿರುವುದೂ ಅದೇ: ಇಲ್ಲಿ ನೋಮೊ ಎನ್ನುವುದು ‘ನೋ ಮೊಬೈಲ್ ಫೋನ್’ನ ಹ್ರಸ್ವರೂಪ. ಇದನ್ನು ಫೋಬಿಯಾ ಎನ್ನುವುದಕ್ಕಿಂತ ಆಂಕ್ಸೈಟಿ (ತಳಮಳ) ಎನ್ನುವುದೇ ಹೆಚ್ಚು ಸೂಕ್ತವೆಂದು ಕೆಲವರು ಅಭಿಪ್ರಾಯಪಟ್ಟರೂ ನೋಮೊಫೋಬಿಯಾ ಎಂಬ ಹೆಸರು 2008ರಿಂದಲೇ ಚಾಲ್ತಿಯಲ್ಲಿದೆ.

ಕೇಂಬ್ರಿಜ್ ನಿಘಂಟಿನ ಪ್ರಕಾರ ನೋಮೊಫೋಬಿಯಾ ಎಂದರೆ ‘ಮೊಬೈಲ್ ಫೋನ್ ಇಲ್ಲದೆ ಅಥವಾ ಅದನ್ನು ಬಳಸಲು ಸಾಧ್ಯವಾಗದೆ ಇರಬೇಕಾಗುವ ಸನ್ನಿವೇಶದ ಕುರಿತ ಭಯ ಅಥವಾ ಚಿಂತೆ’. ಈ ಪದಕ್ಕೆ ಅದು 2018ರ ‘ಜನತೆಯ ಪದ’ ಎಂಬ ಮನ್ನಣೆಯನ್ನೂ ನೀಡಿತ್ತು. ಮೊಬೈಲ್ ಫೋನ್ ಕುರಿತ ಈ ತಳಮಳವನ್ನು ವಿಶ್ವದೆಲ್ಲೆಡೆ ಎಷ್ಟು ಜನ ಅನುಭವಿಸುತ್ತಿದ್ದಾರೆ ಎಂದರೆ ಅದನ್ನು ಪ್ರತ್ಯೇಕವಾಗಿ ಗುರುತಿಸಲು ಒಂದು ಹೆಸರು ಬೇಕು ಎಂದು ಎಲ್ಲರಿಗೂ ಅನ್ನಿಸುತ್ತಿದೆ; ನೋಮೊಫೋಬಿಯಾ ಎಂಬ ಹೆಸರಿಗೆ ಸಿಕ್ಕ ಮನ್ನಣೆ ಈ ಅನಿಸಿಕೆಯ ಪ್ರತಿಧ್ವನಿ ಎನ್ನುವುದು ಆ ಸಂದರ್ಭದಲ್ಲಿ ಕೇಂಬ್ರಿಜ್ ನಿಘಂಟು ಹೊರಡಿಸಿದ್ದ ಪ್ರಕಟಣೆಯಲ್ಲಿದ್ದ ಹೇಳಿಕೆ.

ಮೊಬೈಲನ್ನು ಮರೆತು ಬಂದಿದ್ದರೆ, ಸಿಗ್ನಲ್ ಸಿಗದಿದ್ದರೆ, ಬ್ಯಾಟರಿ ಮುಗಿದುಹೋದರೆ ಚಡಪಡಿಕೆ ಶುರುವಾಗುವುದು ನೋಮೊಫೋಬಿಯಾದ ಲಕ್ಷಣಗಳಲ್ಲೊಂದು. ಸ್ವಲ್ಪಹೊತ್ತು ಮೊಬೈಲ್ ಬಳಸದಿದ್ದರೆ, ಸೋಶಿಯಲ್ ಮೀಡಿಯಾದೊಳಗೆ ಇಣುಕದಿದ್ದರೆ ಏನೋ ಮುಖ್ಯವಾದುದನ್ನು ಕಳೆದುಕೊಂಡುಬಿಡುತ್ತೇನೆ ಎಂಬ ಹೆದರಿಕೆ (ಇಂಗ್ಲಿಷಿನಲ್ಲಿ ಇದನ್ನು ಫಿಯರ್ ಆಫ್ ಮಿಸ್ಸಿಂಗ್ ಔಟ್ ಎಂದು ಕರೆಯುತ್ತಾರೆ) ಕೂಡ ನೋಮೋಫೀಬಿಯಾದ್ದೇ ಇನ್ನೊಂದು ರೂಪ. ಕೆಲವು ತಿಂಗಳ ಹಿಂದೆ ಫೇಸ್​ಬುಕ್ ಹಾಗೂ ಇನ್​ಸ್ಟಾಗ್ರಾಮ್ ಸೇವೆಗಳಲ್ಲಿ ಅಡಚಣೆ ಕಾಣಿಸಿಕೊಂಡಾಗ ಹಲವು ಬಳಕೆದಾರರು ವ್ಯಕ್ತಪಡಿಸಿದ ವಿಪರೀತ ಪ್ರತಿಕ್ರಿಯೆಗಳ ಹಿಂದೆ ಈ ಹೆದರಿಕೆಯ ಕೈವಾಡವೂ ಇತ್ತು. ಹಲವು ಬಳಕೆದಾರರು ಸಾಮಾಜಿಕ ಜಾಲತಾಣಗಳಳ್ಲಿ ವಿಪರೀತ ಸಮಯ ಕಳೆಯುವುದಕ್ಕೆ ಕಾರಣವೂ

ಇದೇ ಹೆದರಿಕೆ.

ಮೊಬೈಲ್ ಬಳಸದಿದ್ದರೆ ಏನಾಗುತ್ತೋ ಏನೋ ಎಂದು ಹೆದರುವವರು ಯಾವುದೇ ಕರೆ, ಮೆಸೇಜ್ ಅಥವಾ ನೋಟಿಫಿಕೇಶನ್ ಬರದಿದ್ದರೂ ತಮ್ಮ ಫೋನನ್ನು ಪದೇಪದೇ ತೆಗೆದು ನೋಡುತ್ತಾರೆ. ಈ ಅಭ್ಯಾಸ ಯಾವ ಮಟ್ಟಕ್ಕೆ ಹೋಗಬಹುದೆಂದರೆ ಮೊಬೈಲ್ ರಿಂಗ್ ಆಗದಿದ್ದಾಗಲೂ ಅದು ರಿಂಗ್ ಆಗುತ್ತಿರಬಹುದು ಎಂಬ ಭ್ರಮೆ ಅವರನ್ನು ಕಾಡುತ್ತದೆ. ಜೇಬಿನಲ್ಲಿರುವ ಮೊಬೈಲು ವೈಬ್ರೇಟ್ ಆದಂತೆ ಅನ್ನಿಸಿ ಅದನ್ನು ತೆಗೆದು ನೋಡುವಂತಾಗುತ್ತದೆ. ‘ಫ್ಯಾಂಟಮ್ ರಿಂಗಿಂಗ್’ ಹಾಗೂ ‘ಫ್ಯಾಂಟಮ್ ವೈಬ್ರೇಷನ್’ (ಫ್ಯಾಂಟಮ್ = ಮನಸ್ಸಿನ ಭ್ರಮೆ) ಎಂದು ಕರೆಸಿಕೊಳ್ಳುವ ಈ ಲಕ್ಷಣಗಳನ್ನು ಬಹುಪಾಲು ಮೊಬೈಲ್ ಬಳಕೆದಾರರಲ್ಲಿ ಕಾಣಬಹುದಂತೆ.

ಈ ವರ್ತನೆಗೆ ನಾವು ಏನು ಹೆಸರಿಟ್ಟರೂ, ಅದರ ಪರಿಣಾಮ ಮಾತ್ರ ಬಹುತೇಕ ಒಂದೇ – ಮೊಬೈಲಿನೊಡನೆ ನಾವು ಕಳೆಯುವ ಸಮಯದಲ್ಲಿ ಇನ್ನಷ್ಟು ಹೆಚ್ಚಳ. ಮೊಬೈಲ್ ಬಿಟ್ಟಿರಬೇಕಾದ ಭೀತಿಯಿರಲಿ, ಅದರ ಮೇಲಿನ ಪ್ರೀತಿಯೇ ಇರಲಿ, ಯಾವುದೋ ಕಾರಣದಿಂದ ನಾವು ಮೊಬೈಲ್ ಫೋನನ್ನು ಹೆಚ್ಚುಹೆಚ್ಚಾಗಿ ಬಳಸುತ್ತಲೇ ಹೋಗುತ್ತೇವೆ. ಇದು ಇನ್ನಷ್ಟು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಹಾಗಾದರೆ ಈ ವಿಷವರ್ತಲದಿಂದ ಹೊರಬರುವುದು ಹೇಗೆ? ಇದಕ್ಕಾಗಿ ನಾವು ಹಲವು ದಾರಿಗಳನ್ನು ಹುಡುಕಿಕೊಳ್ಳಬಹುದು. ಮೊಬೈಲ್ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ಕಡಿಮೆಮಾಡುವುದು ಇಂತಹ ದಾರಿಗಳಲ್ಲೊಂದು. ಮುಂಜಾನೆ ವಾಯುವಿಹಾರಕ್ಕೆ ಹೋಗುವಾಗ, ಮಿತ್ರರೊಡನೆ ಹೋಟಲಿಗೆ ಹೋಗುವಾಗ ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೋದರೆ ಯಾವುದೇ ಒತ್ತಡವಿಲ್ಲದೆ ಕೊಂಚ ಸಮಯ ಕಳೆಯಬಹುದು. ಮೊಬೈಲನ್ನು ಮಲಗುವ ಕೋಣೆಯಿಂದ ಹೊರಗಿಟ್ಟರೆ ನಿದ್ರಿಸುವ ಮುನ್ನ ಹಾಗೂ ಎದ್ದ ತಕ್ಷಣ ಮೊಬೈಲಿನ ಕಡೆ ಹೋಗದಂತೆ ನೋಡಿಕೊಳ್ಳಬಹುದು. ಇನ್ನು ಫೇಸ್​ಬುಕ್​ನಲ್ಲಿ ಸಿಕ್ಕಾಪಟ್ಟೆ ಸಮಯ ಕಳೆಯುತ್ತಿದ್ದೇನೆ ಎನ್ನುವವರು, ಮೊಬೈಲ್ ಹಾಗೂ ಕಂಪ್ಯೂಟರ್ ಎರಡನ್ನೂ ಬಳಸುವವರಾಗಿದ್ದರೆ, ಮೊಬೈಲಿನಿಂದ ಫೇಸ್​ಬುಕ್ ಆಪ್ ಕಿತ್ತುಹಾಕಿ ಅದನ್ನು ಕಂಪ್ಯೂಟರಿನಲ್ಲಿ ಮಾತ್ರವೇ ಬಳಸುವ ಪ್ರಯೋಗ ಮಾಡಿನೋಡಬಹುದು. ಇನ್ನೂ ಸ್ವಲ್ಪ ಸಾಹಸ ಮಾಡುವಂತಿದ್ದರೆ ಕೆಲದಿನಗಳ ಮಟ್ಟಿಗೆ ಫೇಸ್​ಬುಕ್ ಖಾತೆಯನ್ನೇ ನಿಷ್ಕ್ರಿಯಗೊಳಿಸಲೂಬಹುದು (ಡಿಆಕ್ಟಿವೇಟ್). ಇಂತಹ ಹಲವು ಪ್ರಯೋಗಗಳನ್ನು ಮಾಡಿನೋಡಿ ನಮ್ಮ ಅನುಭವವನ್ನು ಇತರರೊಡನೆ ಹಂಚಿಕೊಳ್ಳುವುದೂ ಒಳ್ಳೆಯದೇ. ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಕಷ್ಟ, ಸರಿ. ಹಾಗೆಂದು ಅದಕ್ಕೆ ನಮ್ಮ ಬದುಕಿನಲ್ಲಿ ವಿಪರೀತ ಪ್ರಾಮುಖ್ಯ ನೀಡುವುದೂ ತಪ್ಪು. ಮೊಬೈಲನ್ನು ಯಾವಾಗ ಎಷ್ಟರಮಟ್ಟಿಗೆ ಬಳಸಬೇಕು ಎಂದು ನಾವಾಗಿಯೇ ಅರಿತುಕೊಂಡಾಗ ಮಾತ್ರ ‘ನೋ ಮೋರ್ ನೋಮೊಫೋಬಿಯಾ’ ಎಂದು ಹೇಳುವುದು ಸಾಧ್ಯವಾಗುತ್ತದೆ. ಮೊಬೈಲ್ ಮೋಹಿಗಳೆಲ್ಲರಿಗೂ ಅದು ಸಾಧ್ಯವಾಗಲಿ!

Leave a Reply

Your email address will not be published. Required fields are marked *