ಜನರೆದುರು ಕ್ರಿಮಿನಲ್​ಗಳ ಇತಿಹಾಸ!

|ವಿಲಾಸ ಮೇಲಗಿರಿ

ಬೆಂಗಳೂರು: ನಾಮಪತ್ರ ಸಲ್ಲಿಕೆ ಸಂದರ್ಭ ಅಭ್ಯರ್ಥಿಗಳು ಸಲ್ಲಿಸುವ ಅಫಿಡವಿಟ್​ನಲ್ಲಿ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಉಲ್ಲೇಖಿಸಿದ್ದರೂ ಅದು ಹೆಚ್ಚು ಪ್ರಚಾರಕ್ಕೇ ಬರುವುದಿಲ್ಲ. ಆದರೆ, ಇನ್ನುಮುಂದೆ ಕ್ರಿಮಿನಲ್ ರಾಜಕಾರಣಿಗಳ ’ರಹಸ್ಯ’ ಗುಟ್ಟಾಗಿ ಉಳಿಯಲಾರದು.

ಕ್ರಿಮಿನಲ್ ಮೊಕದ್ದಮೆಯುಳ್ಳ ಅಭ್ಯರ್ಥಿ ಕೇಸ್​ಗಳನ್ನು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ತಾನೇ ಪ್ರಚುರಪಡಿಸಬೇಕು ಎಂದು ಸುಪ್ರಿಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಚುನಾವಣಾ ಅ.10ರಂದು ಆದೇಶ ಹೊರಡಿಸಿದೆ. ರಾಜ್ಯದ 3 ಲೋಕಸಭಾ, 2 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮೂಲಕ ಈ ಕಾಯ್ದೆ ಇದೇ ಮೊದಲ ಬಾರಿಗೆ ಜಾರಿಗೆ ಬಂದಂತಾಗಿದೆ. ಯಾವುದೇ ಪಕ್ಷ ಕ್ರಿಮಿನಲ್ ಮೊಕದ್ದಮೆಯುಳ್ಳ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದರೆ, ತನ್ನ ವೆಬ್​ಸೈಟ್​ನಲ್ಲಿ ಅವರ ಕ್ರಿಮಿನಲ್ ಮಾಹಿತಿ ಅಳವಡಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ. ಉಪಚುನಾವಣಾ ಕಣದಲ್ಲಿ 31 ಅಭ್ಯರ್ಥಿಗಳಿದ್ದು, ಯಾರ ಮೇಲೆ ಎಷ್ಟು ಕ್ರಿಮಿನಲ್ ಮೊಕದ್ದಮೆಗಳಿವೆ. ಶಿಕ್ಷೆಯಾಗಿದ್ದರೆ ಈಗಾಗಲೇ ಎಷ್ಟು ಪ್ರಕರಣಗಳಲ್ಲಿ ಆಗಿದೆ ಎಂಬ ಮಾಹಿತಿ ಪ್ರಸಾರ ಮಾಡಿಸುವಂತೆ ರಿಟರ್ನಿಂಗ್ ಆಫೀಸರ್​ಗಳಿಗೆ ಮಾಹಿತಿ ಕಳುಹಿಸಲಾಗಿದೆ. ಅಭ್ಯರ್ಥಿಗಳು ಮತದಾನದ 48 ಗಂಟೆಗಳ ಮೊದಲು ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಮತ್ತು ಶಿಕ್ಷೆಯಾಗಿದ್ದಲ್ಲಿ ಅದರ ಮಾಹಿತಿಯನ್ನು 3 ಬಾರಿ ಪ್ರಚುರಪಡಿಸಬೇಕು.

ಸುಪ್ರಿಂಕೋರ್ಟ್ ಆದೇಶವನ್ನು ಚುನಾವಣಾ ಆಯೋಗ ಜಾರಿಗೊಳಿಸಿದೆ. ಅಭ್ಯರ್ಥಿಗಳು ಆದೇಶ ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯಾಗುತ್ತದೆ.

| ಸಂಜೀವ್​ಕುಮಾರ್ ಮುಖ್ಯ ಚುನಾವಣಾಧಿಕಾರಿ

ಜನರಿಗೇನು ಉಪಯೋಗ?

ಚುನಾವಣಾ ಆಯೋಗದ ಈ ಆದೇಶದಿಂದ ಸಾರ್ವಜನಿಕರಿಗೆ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಯ ಇತಿಹಾಸ ಏನು? ಅವರ ಚಾರಿತ್ರ್ಯ ಹೇಗಿದೆ? ಯಾವುದಾದರೂ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆಯೆ? ಹಿಂದೆ ಯಾವ ಪ್ರಕರಣಗಳಲ್ಲಾದರೂ ಶಿಕ್ಷೆಯಾಗಿದೆಯೆ ಎಂಬ ಮಾಹಿತಿ ದೊರೆಯುತ್ತದೆ. ಇದರಿಂದ ಯಾರಿಗೆ ಮತ ಚಲಾಯಿಸಬೇಕು ಎಂಬ ಆಯ್ಕೆ ಮಾಡಲು ಅವಕಾಶವಾಗುತ್ತದೆ ಎಂಬುದು ಈ ಆದೇಶದ ಹಿಂದಿನ ಉದ್ದೇಶ.