ನವಜಾತ ಹೆಣ್ಣು ಶಿಶುವಿಗೆ ನಾಮಕರಣ

ಹಾವೇರಿ: ಹೆಣ್ಣು ಮಗುವಿನ ರಕ್ಷಣೆ ಹಾಗೂ ಅವಳ ಶಿಕ್ಷಣದ ಮಹತ್ವದ ಬಗೆಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಮ್ಮಿಕೊಂಡಿರುವ ‘ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಸ್ಪತ್ರೆಯ ನವಜಾತ ಶಿಶುವಿಗೆ ಶನಿವಾರ ನಾಮಕರಣ ಮಾಡಲಾಯಿತು.

ರಾಣೆಬೆನ್ನೂರ ತಾಲೂಕಿನ ಬಿಲ್ಲಹಳ್ಳಿ ಗ್ರಾಮದ ಸಿದ್ದಪ್ಪ ಹಾಗೂ ರೂಪಶ್ರೀ ದಂಪತಿಗೆ 2ನೇ ಮಗಳಾಗಿ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಜನಿಸಿದ ನವಜಾತ ಹೆಣ್ಣು ಮಗುವಿಗೆ ‘ತನುಶ್ರೀ’ ಎಂದು ಶಾಸಕ ನೆಹರು ಓಲೇಕಾರ ಅವರು ನಾಮಕರಣ ಮಾಡಿದರು.

ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಹಾಗೂ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಪಾಲ್ಗೊಂಡು ಮಗುವಿಗೆ ಶುಭ ಕೋರಿದರು. ಮಗುವಿನ ತಂದೆ ಸಿದ್ದಪ್ಪ ಹಾಗೂ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು, ವೈದ್ಯರು ಇದ್ದರು.

ನಂತರ ಮಾತನಾಡಿದ ಶಾಸಕ ನೆಹರು ಓಲೇಕಾರ, ಇದೊಂದು ಮಹತ್ವದ ಯೋಜನೆ. ಹೆಣ್ಣು ಮಕ್ಕಳ ರಕ್ಷಣೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಹಿಂದಿನ ಕಾಲದಲ್ಲಿ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಭಾವಿಸುತ್ತಿದ್ದರು. ಆ ಭಾವನೆ ಹೋಗಲಾಡಿಸಲು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದ್ದು, ಹೊಸ ಯೋಜನೆಯಿಂದ ಭಾಗ್ಯ ಬಂದಂತಾಗಿದೆ. ಹೆಣ್ಣು ಮಕ್ಕಳನ್ನು ಸರಿಯಾದ ರೀತಿಯಲ್ಲಿ ಲಾಲನೆಪಾಲನೆ, ಪೋಷಣೆ ಮಾಡಿದಲ್ಲಿ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಮಾತನಾಡಿ, ಇಂದು ಗಂಡು ಮಕ್ಕಳನ್ನು ಹೊಂದಿದ ತಂದೆ-ತಾಯಿ ಬೀದಿ ಪಾಲಾದ ಅನೇಕ ಸನ್ನಿವೇಶಗಳನ್ನು ನೋಡಬಹುದು. ಹೆಣ್ಣು ಮಕ್ಕಳು ತಂದೆ-ತಾಯಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆ ಆರಂಭಿಸಿದ ಹೆಣ್ಣು ಮಕ್ಕಳಿಗೆ ಪಾಸ್​ಬುಕ್ ವಿತರಿಸಲಾಯಿತು. ಆಸ್ಪತ್ರೆ ಆವರಣದಲ್ಲಿ ಜಿ.ಪಂ. ಅಧ್ಯಕ್ಷರು, ಶಾಸಕರು ಸಸಿನೆಟ್ಟರು.

ಹೆಣ್ಣು ಹುಟ್ಟಿದರೆ ಸಂಭ್ರಮಿಸಿ: ಹೆಣ್ಣು ಮಕ್ಕಳು ಜನಿಸಿದರೆ ಖುಷಿಯಿಂದ ಸಂಭ್ರಮಿಸಬೇಕು. ಸರ್ಕಾರ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದೆ. ಗ್ರಾ.ಪಂ., ತಾ.ಪಂ. ಚುನಾವಣೆಯಲ್ಲಿ ಶೇ. 50 ಹಾಗೂ ಸರ್ಕಾರಿ ಕೆಲಸದಲ್ಲಿ ಶೇ. 33ರಷ್ಟು ಮೀಸಲಾತಿ ನೀಡಿದೆ. ಹೆಣ್ಣು ಮಕ್ಕಳನ್ನು ಗೌರವಿಸುವ ಜತೆಗೆ ಅವರ ರಕ್ಷಣೆ ಹಾಗೂ ಶಿಕ್ಷಣದ ಕುರಿತು ತಂದೆ-ತಾಯಿ ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ಹೇಳಿದರು.

ಜಿ.ಪಂ. ಉಪಕಾರ್ಯದರ್ಶಿ ಜಿ. ಗೋವಿಂದಸ್ವಾಮಿ, ಡಿಎಚ್​ಒ ಎಚ್.ಎಸ್. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯಕ್, ವಾರ್ತಾಧಿಕಾರಿ ಬಿ.ಆರ್. ರಂಗನಾಥ, ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಜೀದ್ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಸ್ವಾಗತಿಸಿದರು. ಮುತ್ತುರಾಜ ಮಾದರ ನಿರೂಪಿಸಿದರು.