ಭೌತವಿಜ್ಞಾನ ನೊಬೆಲ್ ಘೋಷಣೆ

ಲೇಸರ್ ಕಿರಣ ಕುರಿತ ಸಂಶೋಧನೆಗೆ ತ್ರಿಮೂರ್ತಿಗಳಿಗೆ ಗೌರವ

ಸ್ಟಾಕ್​ಹೋಮ್:  ಲೇಸರ್ ಕಿರಣಗಳ ಕುರಿತು ಸಂಶೋಧನೆ ನಡೆಸಿದ ಅಮೆರಿಕದ ಆರ್ಥರ್ ಅಶ್ಕಿನ್, ಫ್ರಾನ್ಸ್​ನ ಗೆರಾರ್ಡ್ ಮೌರೊ ಮತ್ತು ಕೆನಡಾದ ಡೊನ್ನಾ ಸ್ಟ್ರಿಕ್​ಲೆಂಡ್ ಅವರಿಗೆ 2018ನೇ ಸಾಲಿನ ಭೌತವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ.

ಈ ಮೂವರು ಲೇಸರ್ ಕಿರಣಗಳ ಬಗ್ಗೆ ನಡೆಸಿದ ಉನ್ನತ ಮಟ್ಟದ ಸಂಶೋಧನೆಯಿಂದಾಗಿ ನಿಖರವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲು ಅನುಕೂಲವಾಗಿದೆ. ಸಂಶೋಧನೆಯಿಂದ ನೂತನ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ ಸಾಧನಗಳನ್ನು ಆವಿಷ್ಕರಿಸಲು ಸಹಕಾರಿಯಾಯಿತು ಎಂದು ಪ್ರಶಸ್ತಿ ಆಯ್ಕೆ ಸಮಿತಿ ಹೇಳಿದೆ. ಅಂದಾಜು 7.40 ಕೋಟಿ ರೂ.  (1.01 ಮಿಲಿಯನ್ ಡಾಲರ್) ನಗದು ಬಹುಮಾನದಲ್ಲಿ ಅಶ್ಕಿನ್​ಗೆ ಅರ್ಧ ಪಾಲು ಸಂದಾಯವಾಗಲಿದ್ದು, ಉಳಿದ ಅರ್ಧ ಮೊತ್ತವನ್ನು ಮೌರೊ ಮತ್ತು ಸ್ಟ್ರಿಕ್​ಲೆಂಡ್ ಹಂಚಿಕೊಳ್ಳಲಿದ್ದಾರೆ. ಡೊನ್ನಾ ಸ್ಟ್ರಿಕ್​ಲೆಂಡ್ ಭೌತವಿಜ್ಞಾನದ ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾದ ಮೂರನೇ ಮಹಿಳೆ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.

ಆರ್ಥರ್ ಅಶ್ಕಿನ್: ಭೌತಕಣಗಳು, ವೈರಸ್ ಇನ್ನಿತರ ಸೂಕ್ಷ್ಮ ವಸ್ತುಗಳನ್ನು ಲೇಸರ್ ಕಿರಣದ ಮೂಲಕ ಸೆಳೆದುಕೊಳ್ಳುವಂತಹ ‘ಆಪ್ಟಿಕಲ್ ಟ್ವೀಜರ್ಸ್’ ಅನ್ನು ಆರ್ಥರ್ ಅಶ್ಕಿನ್ ಆವಿಷ್ಕರಿಸಿದ್ದಾರೆ. ಇದರಿಂದ ಬೆಳಕಿನ ಕಿರಣಗಳಿಂದ ಹೊಮ್ಮುವ ಒತ್ತಡದಿಂದ ಭೌತಿಕ ವಸ್ತುಗಳನ್ನು ಚಲಿಸುವಂತೆ ಮಾಡಬಹುದಾಗಿದೆ.

ಗೆರಾರ್ಡ್ ಮೌರೊ, ಡೊನ್ನಾ ಸ್ಟ್ರಿಕ್​ಲೆಂಡ್

‘ಅಲ್ಟ್ರಾ-ಶಾರ್ಟ್ ಆಪ್ಟಿಕಲ್ ಪಲ್ಸ್’ ಗಳನ್ನು ಲೇಸರ್ ಕಿರಣಗಳ ಮೂಲಕ ಉತ್ಪತ್ತಿ ಮಾಡುವುದನ್ನು ಮೌರೊ ಮತ್ತು ಸ್ಟ್ರಿಕ್​ಲೆಂಡ್ ಜಂಟಿಯಾಗಿ ಸಂಶೋಧಿಸಿದ್ದಾರೆ. ಇದು ಅತ್ಯಂತ ಕಡಿಮೆ ಪ್ರಮಾಣದ ಮತ್ತು ಅಧಿಕ ತೀವ್ರತೆಯ ಲೇಸರ್ ಕಿರಣಗಳ ಕಂಪನವಾಗಿದ್ದು, ಇಂಥದೊಂದು ಸಂಶೋಧನೆಯನ್ನು ಹಿಂದೆ ಯಾರೂ ನಡೆಸಿರಲಿಲ್ಲ.

Leave a Reply

Your email address will not be published. Required fields are marked *