ರಸಾಯನಶಾಸ್ತ್ರ ನೊಬೆಲ್ ಬಹುಮಾನ ಪ್ರಕಟ: ಲಿಥಿಯಮ್ ಅಯಾನ್ ಬ್ಯಾಟರಿ ಜನಕರಿಗೆ ಪ್ರಶಸ್ತಿ

ಸ್ಟಾಕ್​ಹೋಮ್: ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್​ ಸೈನ್ಸಸ್​​ 2019 ಸಾಲಿನ ರಸಾಯನ ಕ್ಷೇತ್ರದ ನೊಬೆಲ್ ಬಹುಮಾನ ಘೋಷಿಸಿದೆ. ಜಾನ್ ಬಿ.ಗುಡೆನಫ್, ಎಂ.ಸ್ಟ್ಯಾನ್ಲಿ ವೈಟಿಂಗ್ಹ್ಯಾಮ್ ಮತ್ತು ಅಕಿರಾ ಯೋಷಿನೋ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೊಬೈಲ್​ಗಳಲ್ಲಿ ಬಳಸುವ ಲಿಥಿಯಮ್ ಅಯಾನ್ ಬ್ಯಾಟರಿಗಳ ಸಂಶೋಧನೆಗಾಗಿ ಪ್ರಶಸ್ತಿ ಘೋಷಿಸಲಾಗಿದೆ.

ಲಿಥಿಯಮ್ ಅಯಾನ್ ಬ್ಯಾಟರಿಗಳು ಜಾಗತಿಕ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿವೆ. ದಿನನಿತ್ಯ ಬಳಸುವ ಸ್ಮಾರ್ಟ್​ಫೋನ್ಸ್​​, ಲ್ಯಾಪ್​ಟಾಪ್​ ಸೇರಿದಂತೆ ವಿದ್ಯುತ್ ಚಾಲಿತ ವಾಹನಗಳಿಗೆ ಶಕ್ತಿಯ ಆಕರಗಳಾಗಿವೆ. ರಸಾಯನಶಾಸ್ತ್ರದಲ್ಲಿ ನೊಬೆಲ್ ಬಹುಮಾನಕ್ಕೆ ಪಾತ್ರರಾದ ಈ ಮೂವರು ತಂತಿರಹಿತ ಉಪಕರಣಗಳು, ಪಳೆಯುಳಿಕೆ ಇಂಧನ ರಹಿತ ಸಮಾಜ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ಅಭಿಪ್ರಾಯಪಟ್ಟಿದೆ.

ಪ್ರತಿಷ್ಠಿತ ನೊಬೆಲ್ ಬಹುಮಾನವನ್ನು ಸ್ವೀಡನ್​ನ ವಾಣಿಜ್ಯೋದ್ಯಮಿ, ಎಂಜಿನಿಯರ್, ಸಂಶೋಧಕ ಹಾಗೂ ತತ್ವಶಾಸ್ತ್ರಜ್ಞರೂ ಆದ ಅಲ್​ಫ್ರೆಡ್​ ನೊಬೆಲ್ ಸ್ಥಾಪಿಸಿದ್ದಾರೆ. 1901 ರಿಂದ 2018 ವರೆಗೆ 110 ಬಾರಿ ರಸಾಯನಶಾಸ್ತ್ರ ವಿಭಾಗದಲ್ಲಿ 180 ಮಂದಿಗೆ ಪ್ರಶಸ್ತಿ ನೀಡಲಾಗಿದೆ.

Leave a Reply

Your email address will not be published. Required fields are marked *