ಮುಂಡ್ಕೂರಲ್ಲಿ ಬತ್ತದ ಜೀವಜಲ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್
ದಿನೇದಿನೆ ಬಿಸಿಲ ಬೇಗೆಗೆ ನದಿ, ಬಾವಿಗಳು ಬತ್ತುತ್ತಿದ್ದು, ಎಲ್ಲ ಕಡೆ ನೀರಿನ ಸಮಸ್ಯೆ ಎದುರಾಗಿದ್ದರೂ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಪಂ ವ್ಯಾಪ್ತಿಯಲ್ಲಿ ಇನ್ನೂ ಬತ್ತಿಲ್ಲ. ವ್ಯಾಪ್ತಿಯಲ್ಲಿ ನಿರಂತರ ನೀರು ಪೂರೈಕೆ ಮಾಡುವಲ್ಲಿ ಗ್ರಾಪಂ ಯಶಸ್ವಿಯಾಗಿದೆ.

ಪ್ರಸ್ತುತ ಆಡಳಿತದಲ್ಲಿರುವ ಪಂಚಾಯಿತಿ ಸದಸ್ಯರು, ಪಿಡಿಒ , ಸಿಬ್ಬಂದಿ ಹಾಗೂ ನೀರು ಪೂರೈಕೆ ಜವಾಬ್ದಾರಿ ಹೊತ್ತಿರುವ ಇಸುಬು ವ್ಯವಸ್ಥೆಯ ರುವಾರಿಗಳು. ತುರ್ತು ಅಗತ್ಯ ನೀರಿನ ಬೇಡಿಕೆ ಇರುವ ಫಲಾನುಭವಿಗಳಿಗೆ ದಾಖಲೆ ಪಡೆದು ಅರ್ಜಿ ನೀಡಿದ ಅರ್ಧ ಗಂಟೆಯೊಳಗೆ ಆಡಳಿತ ವ್ಯವಸ್ಥೆ ನೀರು ಪೂರೈಸುತ್ತಿದೆ.

ಕಾನೂನಿನಂತೆ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅರ್ಜಿ ಪರಿಶೀಲಿಸಿ ನೀರಿನ ಸಂಪರ್ಕ ನೀಡಬೇಕಿದ್ದರೂ ಹಾಲಿ ಪಂಚಾಯಿತಿ ಆಡಳಿತ ಆದ್ಯತೆಗೆ ಅನುಗುಣವಾಗಿ ನೀರಿನ ತುರ್ತು ಬವಣೆ ಪರಿಶೀಲಿಸಿ ಸಂಪರ್ಕ ನೀಡುತ್ತಿದ್ದು, ಪಂಚಾಯಿತಿಯ ಈ ಕ್ರಮ ಜನರ ಶ್ಲಾಘನೆಗೆ ಪಾತ್ರವಾಗಿದೆ.

ನೀರಿನ ಮೂಲ: ಮುಂಡ್ಕೂರು ಗ್ರಾಪಂ ವತಿಯಿಂದ ಜಲಾನ್ವೇಷಣೆ ಕಾರ್ಯ ಪ್ರಾರಂಭವಾದದ್ದು 2005ರಲ್ಲಿ. ಅಂದಿನ ಪಂಚಾಯಿತಿ ಅಧ್ಯಕ್ಷ ಸತ್ಯಶಂಕರ ಶೆಟ್ಟಿ ಕನಸಿನ ಯೋಜನೆಯಾಗಿದ್ದ ಈ ಪರಿಕಲ್ಪನೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸ್ವಜಲಧಾರಾ ಯೋಜನೆಯ ರೂಪ. ಶೇ.10 ಫಲಾನುಭವಿಗಳ ಪಾಲು ಹಾಗೂ ಶೇ.90 ಸರ್ಕಾರದ ಪಾಲು ಎಂಬ ಮಾನದಂಡದೊಂದಿಗೆ, ಸ್ಥಳೀಯ ಫಲಾನುಭವಿಗಳಿಂದ ತಲಾ 1500 ರೂ. ಸಂಗ್ರಹಿಸಿ ಉಳಿದ ಹಣ ದಾನಿಗಳಿಂದ ಕ್ರೋಡೀಕರಿಸಿ ಸುಮಾರು 5 ಲಕ್ಷ ರೂ. ಸ್ಥಳೀಯ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗಿತ್ತು.

2014ರಲ್ಲಿ ಮತ್ತೆ ಸತ್ಯಶಂಕರ ಶೆಟ್ಟಿ ಮುಂಡ್ಕೂರು ಗ್ರಾಪಂಗೆ ಅಧ್ಯಕ್ಷರಾಗಿ ಪುನರಾಯ್ಕೆಯಾದಾಗ ಈ ಯೋಜನೆಗೆ ಮರುಜೀವ ಬಂದು ಜಾರಿಗೆಕಟ್ಟೆ ಅಲಂಗಾರು ಬಳಿ, ಖಾಸಗಿ ಜಮೀನಿನಲ್ಲಿ ದಾರಿ ಪಡೆದು ಶಾಂಭವಿ ನದಿಯಲ್ಲಿ ಸುಮಾರು 15 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಬಾವಿ ತೋಡಲಾಗಿ ಸುಮಾರು 6 ಲಕ್ಷ ರೂ. ಉಳಿಕೆಯಾಗಿತ್ತು. ಜಿಪಂ ಪೈಪ್‌ಲೈನ್ ಅಳವಡಿಕೆಗೆ, ಟ್ಯಾಂಕ್ ನಿರ್ಮಾಣಕ್ಕೆ ಸುಮಾರು 21 ಲಕ್ಷ ರೂ. ನೀಡಿದೆ. ಈ ಬೃಹತ್ ಬಾವಿಯ ನೀರು ಹಾಗೂ ಉಳಿದಂತೆ 11 ಬೋರ್‌ವೆಲ್‌ಗಳು ಮುಂಡ್ಕೂರು ಗ್ರಾಪಂನ ನಾಗರಿಕರ ನೀರಿನ ಬವಣೆ ನೀಗಿಸುವಲ್ಲಿ ಯಶಸ್ವಿಯಾಗಿವೆ.

1041 ನೀರಿನ ಸಂಪರ್ಕ: ಗ್ರಾಪಂ ವ್ಯಾಪ್ತಿಯಲ್ಲಿ 1041 ನೀರಿನ ಸಂಪರ್ಕಗಳಿದ್ದು, ಸುಮಾರು 1 ಲಕ್ಷ ರೂ. ಗೂ ಮಿಕ್ಕಿ ಹಣ ಸಂಗ್ರಹವಾಗುತ್ತಿದೆ. ನೀರು ನಿರ್ವಾಹಕರು, ಬಿಲ್ ಕಲೆಕ್ಟರ್‌ಗಳಿಗೆ ಪಂಚಾಯಿತಿ ಇಲಾಖೆಯಿಂದ ವೇತನ ಬರುತ್ತಿದ್ದು, ನೀರಿನ ಆದಾಯದಿಂದ ಗ್ರಾಮದ ಸ್ವಚ್ಛತೆಯ ಎಸ್‌ಎಲ್‌ಆರ್‌ಎಂ ಘಟಕದ ಸಿಬ್ಬಂದಿ ಸಂಬಳ, ವಾಹನ ವೆಚ್ಚ ನಿರ್ವಹಿಸಲಾಗುತ್ತಿದೆ. ಅಲ್ಲದೆ ಪೈಪ್‌ಲೈನ್ ದುರಸ್ತಿಗೂ ಬಳಸಲಾಗುತ್ತಿದೆ. ಹೀಗೆ ವಿವಿಧ ದೃಷ್ಟಿಕೋನಗಳಿಂದ ಈ ಪಂಚಾಯಿತಿ ನಿರ್ವಹಣೆ ನಡೆಸುತ್ತಿದೆ. ಮುಂಗಾರು ವಿಳಂಬವಾಗಿ ಎಲ್ಲಡೆ ನೀರಿಗಾಗಿ ಹಾಹಾಕಾರ ಬಂದರೂ ಮುಂಡ್ಕೂರು ಗ್ರಾಪಂ ಜನ ನಿರಾಳರಾಗಿ ನೀರು ಕುಡಿಯುತ್ತಿದ್ದಾರೆ. ನದಿಯಲ್ಲೇ ತೊಡಿದ ಬಾವಿಯಲ್ಲಿ ಉತ್ತಮ ಅಂತರ್ಜಲವಿದ್ದು, ಇಡೀ ಗ್ರಾಮಕ್ಕೆ ನೀರಿನ ಸಮಸ್ಯೆ ಇಲ್ಲದಂತಾಗಿದೆ.

ವಿಜಯವಾಣಿ ವರದಿಗೆ ಸ್ಪಂದನೆ: ಇತ್ತೀಚೆಗೆ ಮುಂಡ್ಕೂರು ಗ್ರಾಮದ ಪೊಸ್ರಾಲು ಕನ್ನಡಬೆಟ್ಟು ಎಂಬಲ್ಲಿ ಹಲವು ವರ್ಷಗಳಿಂದ ಖಾಸಗಿ ಜಾಗದ ಸಮಸ್ಯೆಯಿಂದ ನಳ್ಳಿ ನೀರಿನ ಸಂಪರ್ಕವಿಲ್ಲದ ಬಗ್ಗೆ ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು. ಕೂಡಲೇ ಮುಂಡ್ಕೂರು ಗ್ರಾಪಂ ಸ್ಥಳೀಯ ಖಾಸಗಿ ಮಾಲೀಕರ ಮನವೊಲಿಸಿ ಪೈಪ್‌ಲೈನ್ ಅಳವಡಿಸಿ ನಳ್ಳಿ ನೀರಿನ ಸಂಪರ್ಕ ಕಲ್ಪಿಸಿ ಶ್ಲಾಘನೆಗೆ ಪಾತ್ರವಾಗಿತ್ತು.

ಸ್ವಜಲಧಾರಾ ಪರಿಕಲ್ಪನೆ ಪರಿಣಾಮವಾಗಿ ಮುಂಡ್ಕೂರು ಗ್ರಾಮ ಪಂಚಾಯಿತಿಯಲ್ಲಿ ನೀರಿಗೆ ಸಮಸ್ಯೆ ಇಲ್ಲ. ಈ ಯೋಜನೆಗೆ ಸಹಕರಿಸಿದ ಗ್ರಾಮದ ಫಲಾನುಭವಿಗಳಿಗೆ ಕೃತಜ್ಞತೆಗಳು.
– ಸತ್ಯಶಂಕರ ಶೆಟ್ಟಿ, ಸ್ವಜಲಧಾರಾ ಯೋಜನೆ ಅನುಷ್ಠಾನ ರುವಾರಿ

ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇಲ್ಲ. ಅಗತ್ಯ ಬಿದ್ದವರಿಗೆ ತುರ್ತು ಸಂಪರ್ಕ ನೀಡಲಾಗುವುದು.
-ಶುಭಾ ಪಿ.ಶೆಟ್ಟಿ, ಮುಂಡ್ಕೂರು ಗ್ರಾಪಂ ಅಧ್ಯಕ್ಷೆ

ನೀರಿನ ಬಿಲ್ ಪಂಚಾಯಿತಿಯಲ್ಲಿ ಸದ್ಭಳಕೆಯಾಗುತ್ತಿದೆ. ಸ್ವಚ್ಛತಾ ಯೋಜನೆಗೂ ಈ ಆದಾಯ ಬಳಕೆಯಾಗುತ್ತಿದೆ.
-ಶಶಿಧರ್ ಆಚಾರ್ಯ, ಗ್ರಾಪಂ ಪಿಡಿಒ

Leave a Reply

Your email address will not be published. Required fields are marked *