ಬಿಸಿಲ ಬೇಗೆಗೆ ಬಹುಬೇಗ ಬತ್ತಿದ ನೀರು

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್

ಮೇ ಅಂತ್ಯದವರೆಗೂ ನೀರು ಶೇಖರಣೆಯಾಗುತ್ತಿದ್ದ ಬಾವಿ, ನದಿ, ಕೆರೆಗಳು ಈ ಬಾರಿ ಪ್ರಖರ ಬಿಸಿಲಿನ ಬೇಗೆಗೆ ಬಹುಬೇಗನೆ ಬತ್ತಿ ಹೋಗಿದ್ದು, ಉಡುಪಿ ಜಿಲ್ಲಾದ್ಯಂತ ನೀರಿಗಾಗಿ ಹಾಹಾಕಾರ ಎದ್ದಿದೆ.
ಪಟ್ಟಣ ಪ್ರದೇಶಗಳಲ್ಲಿ ಪುರಸಭೆ, ನಗರಸಭೆ ಹಾಗೂ ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ವತಿಯಿಂದ ಅಳವಡಿಸಲಾದ ನಳ್ಳಿ ನೀರು ಎರಡ್ಮೂರು ದಿನಕ್ಕೊಮ್ಮೆ ಬರುವಂತಾಗಿದೆ. ಉಳಿದಂತೆ ನದಿ ಮೂಲಗಳು, ಕೆರೆಗಳು… ಎಲ್ಲ ಜಲಮೂಲಗಳು ಬಹುಬೇಗನೆ ಬಿಸಿಲ ಬೇಗೆಗೆ ಬತ್ತಿ ಹೋಗಿದ್ದು, ಜನ ನೀರಿಗಾಗಿ ಪರದಾಡುವಂತಾಗಿದೆ.

ಸ್ಥಳೀಯಾಡಳಿತ ಹೈ ಅಲರ್ಟ್: ನೀರಿನ ಸಮಸ್ಯೆ ಅರಿತ ಬಹುತೇಕ ಗ್ರಾಮ ಪಂಚಾಯಿತಿಗಳು, ಪುರಸಭೆಗಳು ಈಗಾಗಲೇ ತಮ್ಮ ವ್ಯಾಪ್ತಿಯ ಕಾಲನಿಗಳಿಗೆ ಟ್ಯಾಂಕರ್ ಮೂಲಕ ನೀರು ನೀಡುವ ಯೋಜನೆ ರೂಪಿಸಿಕೊಂಡು ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಒದಗಿಸುತ್ತಿವೆ. ಆದರೂ ಈ ಬಾರಿ ಬಹುತೇಕ ಕಡೆ ನೀರಿನ ಸಮಸ್ಯೆ ಕಂಡುಬಂದಿದ್ದು, ಪೂರೈಕೆಯೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

ಮರಳಿನ ರಾಶಿಯೇ ಗೋಚರ: ಮೇ ಅಂತ್ಯದವರೆಗೂ ನೀರು ಕಾಣಸಿಗುತ್ತಿದ್ದ ನದಿಗಳಲ್ಲಿ ಈಗ ನೋಡಿದರೆ ಬರೀ ಮರಳಿನ ರಾಶಿ ಮಾತ್ರ ಕಾಣಸಿಗುತ್ತಿದೆ. ಜಿಲ್ಲಾದ್ಯಂತ ಸುಮಾರು ಮೂರು ಸಾವಿರಕ್ಕೂ ಅಧಿಕ ಸಣ್ಣ ಪುಟ್ಟ ಕೆರೆಗಳು, ಸಾವಿರಾರು ಬಾವಿಗಳ ನೀರು ಸಂಪೂರ್ಣ ಬತ್ತಿ ಹೋಗಿವೆ. ಈ ಹಿಂದೆ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ನೀರಿನ ಸಮಸ್ಯೆ ಕಂಡು ಬರುತ್ತಿದ್ದು ಈ ಬಾರಿ ಮಾತ್ರ ಗ್ರಾಮೀಣ ಭಾಗ, ಹಳ್ಳಿ ಪ್ರದೇಶಗಳಲ್ಲೂ ನೀರಿನ ಒರತೆ ಸಂಪೂರ್ಣ ಕುಸಿದಿದೆ. ಜಲಮೂಲ ಬರಿದಾಗುತ್ತಿರುವುದರಿಂದ ಕೃಷಿಕರು ಸಂಪೂರ್ಣ ಕಂಗಾಲಾಗಿದ್ದಾರೆ.

ಎರಡು ಮೂರು ದಿನಕೊಮ್ಮೆ ನೀರು: ಪಂಚಾಯಿತಿ ವತಿಯಿಂದ ಬಹುತೇಕ ಮಂದಿ ನಳ್ಳಿ ನೀರಿನ ಸಂಪರ್ಕ ಪಡೆದಿದ್ದರೂ ನಳ್ಳಿಯಲ್ಲಿ ನೀರು ಬರುವುದು ಮಾತ್ರ ಎರಡು ಮೂರು ದಿನಕೊಮ್ಮೆ. ಕೆಲವೊಂದು ಬಾರಿ ಅರ್ಧ ಗಂಟೆ ನೀರು ಬಂದರೆ ಪುನರಪಿ ನೀರು ಬರಬೇಕಾದರೆ ಮೂರು ದಿನ ಕಾಯಬೇಕು. ಅಪರೂಪಕೊಮ್ಮೆ ಒಂದು ಗಂಟೆ ನೀರು ಕೆಲವೊಂದು ಗ್ರಾಪಂ ವ್ಯಾಪ್ತಿಯಲ್ಲಿ ದೊರಕುತ್ತವೆ. ಕೆಲವೊಂದು ಸಂದರ್ಭ ರಾತ್ರಿ ನಿದ್ದೆ ಬಿಟ್ಟು 12 ಗಂಟೆಗೂ ನೀರು ತುಂಬಿಸಿದ ನಿದರ್ಶನ ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿದೆ. ಅದರಲ್ಲೂ ಎತ್ತರ ಪ್ರದೇಶದ ಬಹುತೇಕ ಮನೆಗಳಿಗೆ ನೀರು ಬಾರದೆ 10ರಿಂದ 15 ದಿನಗಳೇ ಕಳೆದಿವೆ. ಪ್ರತಿ ಬಾರಿಗಿಂತ ಈ ಬಾರಿ ಬಹುಬೇಗನೆ ಜಲಮೂಲ ಸಂಪೂರ್ಣ ಬತ್ತಿದ ಪರಿಣಾಮ ಇಡೀ ಜಿಲ್ಲಾದ್ಯಂತ ನೀರಿಗಾಗಿ ಹಾಹಾಕಾರ ಎದ್ದಿದೆ. ಪಂಚಾಯಿತಿಗಳು, ಪುರಸಭೆಗಳು ಅಧಿಕಾರಿಗಳು ನೀರಿನ ಸಮಸ್ಯೆಗಾಗಿ ತಾತ್ಕಾಲಿಕ ಪರಿಹಾರ ನೀಡುವ ಪ್ರಯತ್ನ ಮಾಡುತ್ತಿದ್ದರೂ ನೀರಿನ ಸಮಸ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ನಮ್ಮ ಮನೆಯ ಬಾವಿಯ ನೀರು ಇಲ್ಲಿಯವರೆಗೆ ಬತ್ತಿಲ್ಲ. ಆದರೆ ಈ ಬಾರಿಯ ಬೇಸಿಗೆಯ ಬಿಸಿಗೆ ಸಂಪೂರ್ಣ ಬತ್ತಿ ಹೋಗಿದೆ. ಕುಡಿಯುವ ನೀರಿಗಾಗಿ ನಾವು ಪರದಾಟ ನಡೆಸುವಂತಾಗಿದೆ.
ಸುಂದರ್ ಶೆಟ್ಟಿ ಕೃಷಿಕ ಕಾರ್ಕಳ

ಸಾಮಾನ್ಯವಾಗಿ ಬಹುತೇಕ ಕಡೆಗಳಲ್ಲಿ ಮೇ ಅಂತ್ಯದವರೆಗೂ ನೀರು ಇರುತಿತ್ತು. ಆದರೆ ಈ ಬಾರಿ ಬಹುಬೇಗನೆ ಬತ್ತಿದ್ದು ಇಡಿ ಜಿಲ್ಲಾದ್ಯಂತ ನೀರಿಗಾಗಿ ಹಾಹಾಕಾರ ಎದ್ದಿದೆ. ಮಳೆ ಬಂದರೆ ಮಾತ್ರ ಸದ್ಯಕ್ಕೆ ಪರಿಹಾರ.
ಜಾನಕಿ ಪೂಜಾರಿ

Leave a Reply

Your email address will not be published. Required fields are marked *