ಬೆಳ್ತಂಗಡಿಗೆ ದಿನಕ್ಕೆ ಒಂದೂವರೆ ಗಂಟೆ ನೀರು

ಮನೋಹರ ಬಳಂಜ ಬೆಳ್ತಂಗಡಿ
ಏರುತ್ತಿರುವ ತಾಪಮಾನದಿಂದ ಅಂತರ್ಜಲ ಕುಸಿತವಾಗಿರುವ ಮಧ್ಯೆ ನದಿಯಲ್ಲಿ ನೀರೂ ಬತ್ತುತ್ತಿದ್ದು, ಬೆಳ್ತಂಗಡಿ ವಾಯಪ್ತಿಯಲ್ಲಿ ದಿನದಲ್ಲಿ ಒಂದರಿಂದ ಒಂದೂವರೆ ಗಂಟೆ ಮಾತ್ರ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿದೆ.
ಮಾರ್ಚ್- ಏಪ್ರಿಲ್ ತನಕ ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಸೋಮಾವತಿ ನದಿ ಸಂಪೂರ್ಣ ಬತ್ತಿದೆ. ನದಿಯಲ್ಲಿ ನೀರಿಲ್ಲ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿತವಾಗಿ ಪ್ರತಿದಿನ ಒಂದರಿಂದ ಒಂದೂವರೆ ಗಂಟೆ ಮಾತ್ರ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದು, ಟ್ಯಾಂಕ್‌ಗಳಿಗೆ ನೀರು ಸಂಗ್ರಹಿಸದೆ ನೇರವಾಗಿ ಬಳಕೆದಾರರಿಗೆ ಸರಬರಾಜು ಮಾಡಲಾಗುತ್ತಿದೆ.

ದಿನಕ್ಕೆ ಐದು ಲಕ್ಷ ಲೀಟರ್ ಪೂರೈಕೆ: ಈ ಹಿಂದೆ 1.05 ಎಂಎಲ್‌ಡಿ ನೀರು ಪೂರೈಕೆ ಮಾಡಲಾಗುತ್ತಿದ್ದು, ಈಗ ಅದನ್ನು 0.65 ಎಂಎಲ್‌ಡಿಗೆ ಇಳಿಸಲಾಗಿದೆ. ಪ್ರತಿದಿನ ಒಬ್ಬ ವ್ಯಕ್ತಿಗೆ 130 (ಎಲ್‌ಪಿಸಿಡಿ) ಲೀಟರ್‌ನಂತೆ 7746 ಮಂದಿಗೆ 5ರಿಂದ 7 ಲಕ್ಷ ಲೀಟರ್ ನೀರು ಸರಬರಾಜು ಮಾಡಲಾಗುತ್ತಿತ್ತು. ಪ್ರಸ್ತುತ ಒಬ್ಬ ವ್ಯಕ್ತಿಗೆ 100 ಎಲ್‌ಪಿಸಿಡಿ (ಲೀಟರ್)ನಂತೆ 5 ಲಕ್ಷ ಲೀಟರ್ ನೀರು ಸರಬರಾಜು ಕಷ್ಟವಾಗಿದೆ. ಆದರೂ ಪಟ್ಟಣ ಪಂಚಾಯಿತಿ ಐದು ಲಕ್ಷ ಲೀಟರ್ ನೀರು ಪೂರೈಕೆ ಮಾಡುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿಯ 11 ವಾರ್ಡ್‌ಗಳಿಗೆ ಈಗಿರುವ 11 ಸರ್ಕಾರಿ ಬೋರ್‌ವೆಲ್ ಹಾಗೂ ಮೂರು ಖಾಸಗಿ ಕೊಳವೆ ಬಾವಿ ಆಶ್ರಯದಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬೆಳಗ್ಗೆ 6.30ರಿಂದ 8ರ ತನಕ ನೀರು ನೀಡಲಾಗುತ್ತಿದೆ. ಬರ ಪರಿಹಾರವಾಗಿ ಬಂದಿದ್ದ 15 ಲಕ್ಷ ರೂ. ಅನುದಾನದಲ್ಲಿ ಕುಡಿಯವ ನೀರಿಗೆ ಸಂಬಂಧಪಟ್ಟ ಯೋಜನೆ ಅನುಷ್ಠಾನಗೊಳಿಸಲಾಗಿದೆ.

ಮದರ್ ಟ್ಯಾಂಕ್‌ಗಿಲ್ಲ ನೀರು: ಬೆಳ್ತಂಗಡಿ ಕಲ್ಲಗುಡ್ಡೆಯಲ್ಲಿ ಐದು ಲಕ್ಷ ಲೀಟರ್ ನೀರು ಶೇಖರಣೆ ಸಾಮರ್ಥ್ಯದ ಮದರ್‌ಟ್ಯಾಂಕ್ ನಿರ್ಮಿಸಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕಳೆದ ವರ್ಷ ಈ ಟ್ಯಾಂಕ್ ಉದ್ಘಾಟಿಸಲಾಗಿತ್ತು. ಆದರೆ ನದಿಯಲ್ಲಿ ಅಷ್ಟು ಪ್ರಮಾಣದಲ್ಲಿ ನೀರಿಲ್ಲದಿರುವುದರಿಂದ ಇದುವರೆಗೆ ಟ್ಯಾಂಕ್‌ನಲ್ಲಿ ಒಮ್ಮೆಯೂ ನೀರು ಶೇಖರಣೆಯಾಗಿಲ್ಲ.

1455 ನೀರಿನ ಸಂಪರ್ಕ: ಪಟ್ಟಣ ಪಂಚಾಯಿತಿಯಲ್ಲಿ 1302 ಗೃಹ ಬಳಕೆಗೆ, 60 ಗೃಹೇತರ ಹಾಗೂ 93 ವಾಣಿಜ್ಯ ಸೇರಿದಂತೆ 1455 ಕುಡಿಯುವ ನೀರಿನ ಸಂಪರ್ಕ ನೀಡಲಾಗಿದೆ. ಬಳಕೆದಾರರು ನೀರಿನ ಅಭಾವದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿಯ ವಾಣಿಜ್ಯ ಸಂಕೀರ್ಣದ ಅಂಗಡಿ, ಹೋಟೆಲ್‌ಗಳು ಕೂಡ ನೀರಿನ ಅಭಾವ ಎದುರಿಸುತ್ತಿವೆ. ದಿನದಲ್ಲಿ ಬರುವ ಒಂದೂವರೆ ಗಂಟೆ ನೀರು ಪೂರೈಕೆಯಿಂದ ದಿನನಿತ್ಯದ ಕೆಲಸಗಳಿಗೂ ತೊಂದರೆಯಾಗಿದೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

ಉಪಯೋಗಕ್ಕೆ ಬಾರದ ಯೋಜನೆ: 2017ರ ಡಿಸೆಂಬರ್‌ನಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಸೋಮಾವತಿ ನದಿಯಿಂದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಮೂಲಕ ಬೆಳ್ತಂಗಡಿ ನಗರಕ್ಕೆ ಕುಡಿಯುವ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಜಾಕ್‌ವೆಲ್, ಶುದ್ಧೀಕರಣ ಘಟಕ, ಎರಡು ವಾಟರ್ ಟ್ಯಾಂಕ್, 11 ವಾರ್ಡ್‌ಗೂ ಪೈಪ್‌ಲೈನ್ ಮಾಡಲಾಗಿದೆ. ಆದರೂ ಇದರಿಂದ ನಗರದ ಜನರಿಗೆ ಪ್ರಯೋಜನ ಆಗಿಲ್ಲ. ನದಿಯಲ್ಲಿ ನೀರಿಲ್ಲ, ಜಾಕ್‌ವೆಲ್ ಹಾಗೂ 2.10 ಮಿಲಿಯ ಸಾಮರ್ಥ್ಯದ ಜಲ ಶುದ್ಧೀಕರಣ ಘಟಕ ಇದುವರೆಗೂ ಚಾಲನೆ ಆಗಿಲ್ಲ. 13 ಕೋಟಿ ರೂಪಾಯಿ ವೆಚ್ಚದ ಯೋಜನೆಯಿಂದ ನಗರದ ಜನರಿಗೆ ಬರಗಾಲದಲ್ಲಿ ಉಪಯೋಗಕ್ಕೆ ಬಂದಿಲ್ಲ.

ನದಿ ಹಾಗೂ ಕೊಳವೆಬಾವಿಯಲ್ಲಿ ಅಂತರ್ಜಲ ಕುಸಿತದಿಂದ ದಿನದಲ್ಲಿ ಒಂದೂವರೆ ಗಂಟೆ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆಯಾಗದೆ ಸಾಕಷ್ಟು ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು ನೀರು ಮಿತವಾಗಿ ಬಳಕೆ ಮಾಡಬೇಕು.
ಅರುಣ್ ಬಿ. ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಬೆಳ್ತಂಗಡಿ.

ಬರ ಪರಿಹಾರವಾಗಿ ಪಟ್ಟಣ ಪಂಚಾಯಿತಿಗೆ 15 ಲಕ್ಷ ರೂ. ಅನುದಾನ ಬಂದಿದ್ದು, ಅದರಲ್ಲಿ 9 ಯೋಜನೆಗಳನ್ನು ಹಾಕಿದ್ದು, 7 ಯೋಜನೆಗಳು ಪೂರ್ಣಗೊಂಡಿವೆ. ಒಂದು ಹೊಸ ಬೋರ್‌ವೆಲ್, ಒಂದು ಪೈಪ್‌ಲೈನ್, 2 ಟಿಸಿ, ಒಂದು ಪಂಪ್ ದುರಸ್ತಿ ಹಾಗೂ ಮೂರು ಬೋರ್‌ವೆಲ್ ಮರು ಶುದ್ಧೀಕರಣ ಮಾಡಲಾಗಿದೆ.
ಮಹಾವೀರ ಆರಿಗ ಇಂಜಿನಿಯರ್, ಪಪಂ ಬೆಳ್ತಂಗಡಿ


ಒಣಗಿವೆ ಅಡಕೆ ತೆಂಗಿನ ತೋಟ

ಪುರುಷೋತ್ತಮ ಭಟ್ ಬದಿಯಡ್ಕ
ಬೇಸಿಗೆ ಮಳೆ ಕೈಕೊಟ್ಟ ಬೆನ್ನಲ್ಲೆ ಮುಂಗಾರು ಕೂಡ ವಿಳಂಬಗೊಳ್ಳುತ್ತಿರುವುದು ಕಾಸರಗೋಡು ಜಿಲ್ಲೆಯನ್ನು ತೀವ್ರ ಬರಗಾಲದತ್ತ ಕೊಂಡೊಯ್ದಿದೆ. ಜಿಲ್ಲೆಯ ಬಹುತೇಕ ಜಲಮೂಲಗಳು ಬತ್ತಿ ಹೋಗಿವೆ. ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ಇಳಿಕೆಯಾಗಿರುವುದು ಕುಡಿಯುವ ನೀರಿನ ಸಮಸ್ಯೆ ಹೆಚ್ಚುವಂತೆ ಮಾಡಿದೆ.

ನೀರಿನ ಅಭಾವದಿಂದ ವ್ಯಾಪಕ ಕೃಷಿ ನಷ್ಟ ಉಂಟಾಗಿದೆ. ಜಿಲ್ಲೆಯ ಪ್ರಧಾನ ಕೃಷಿ ತೆಂಗು, ಅಡಕೆ ತೋಟಗಳು ಒಣಗಿ ಹೋಗಿವೆ. ಇನ್ನು ಒಂದು ವಾರ ಇದೇ ರೀತಿ ಸುಡು ಬಿಸಿಲು ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ.
ಜಿಲ್ಲೆಯ ಏಳು ಬ್ಲಾಕ್‌ಗಳಲ್ಲಿ ಅತಿ ಹೆಚ್ಚು ನೀರಿನ ಸಮಸ್ಯೆ ಉಂಟಾಗಿರುವುದು ಕಾಸರಗೋಡಿನಲ್ಲಿ. ಇಲ್ಲಿ ಅತಿ ಹೆಚ್ಚು ಕೊಳವೆ ಬಾವಿಗಳಿದ್ದರೂ ನೀರು ಸೌಲಭ್ಯ ಕಡಿಮೆ. ಜಿಲ್ಲೆಯಲ್ಲಿ 2017ರಿಂದ 2019ರ ಮಾರ್ಚ್ ತನಕ ಮಾತ್ರ ಔದ್ಯೋಗಿಕ ಲೆಕ್ಕಾಚಾರದಂತೆ 2412 ಕೊಳವೆಬಾವಿ ಕೊರೆಯಲಾಗಿದೆ. 13 ವರ್ಷಗಳಿಂದ ಕಾಸರಗೋಡು ಬ್ಲಾಕ್ ಮಟ್ಟದಲ್ಲೆ ಅಧಿಕೃತವಾಗಿ 12,000 ಕೊಳವೆಬಾವಿಗಳನ್ನು ಕೊರೆಯಲಾಗಿದೆ. ಈಗಲೂ ವಿವಿಧ ಪ್ರದೇಶಗಳಲ್ಲಿ ರಾತ್ರಿ ಹಗಲೆನ್ನದೆ ಕೊಳವೆಬಾವಿ ನಿರ್ಮಾಣ ನಡೆಯುತ್ತಲೇ ಇದೆ.
ಕೇಂದ್ರ ಜಲಮಂಡಳಿ ಅಧ್ಯಯನ ಪ್ರಕಾರ ಜಿಲ್ಲೆಯಲ್ಲಿ 1549 ಕೊಳವೆಬಾವಿಗಳಲ್ಲಿ ಶೇ.11ರಲ್ಲಿ ನೀರು 90 ಮೀಟರ್‌ಗಿಂತ ಆಳದಲ್ಲಿವೆ. ಮಂಜೇಶ್ವರ ಬ್ಲಾಕ್‌ನಲ್ಲಿ ನಡೆಸಿದ ಅಧ್ಯಯನದಲ್ಲಿ 575 ಕೊಳವೆಬಾವಿಗಳಲ್ಲಿ ಶೇ.13.45ರಷ್ಟು ಕೊಳವೆಬಾವಿಗಳು 90 ಮೀಟರ್‌ಕ್ಕಿಂತಲೂ ಆಳ ಹೊಂದಿದೆ.
ಜಿಲ್ಲೆಯಲ್ಲಿ ಲಭಿಸುವ ಮಳೆಯಲ್ಲಿ ಶೇ.40ರಷ್ಟೂ ಸಮುದ್ರಕ್ಕೆ ಹರಿಯುತ್ತಿದೆ. ಶೇ.20ರಷ್ಟು ಮಾತ್ರ ರಿಚಾರ್ಜ್ ಆಗಿ ಭೂಮಿಯಡಲು ಸೇರುತ್ತದೆ.

ಜಿಲ್ಲಾಡಳಿತದಿಂದ ಕ್ರಮ: ತೀವ್ರ ಬರ ಎದುರಾಗುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಖಾತ್ರಿಪಡಿಸಿದೆ. ಟ್ಯಾಂಕರ್‌ಗಳಲ್ಲಿ 36 ಗ್ರಾಮ ಪಂಚಾಯಿತಿ, ಮೂರು ನಗರಸಭೆಗಳಲ್ಲಿ ಕುಡಿಯುವ ನೀರು ಸರಬರಾಜು ನಡೆಯುತ್ತಿದೆ. ಅನುಮತಿ ಇಲ್ಲದೆ ಕೊಳವೆಬಾವಿ ಕೊರೆಯುವುದಕ್ಕೆ ಅನುಮತಿ ಇಲ್ಲ. ಹೊಳೆಯಿಂದ ಕೃಷಿ ಅಗತ್ಯಕ್ಕೆ ನೀರು ಬಳಕೆ ನಿಷೇಧಿಸಲಾಗಿದೆ.

ಕೃಷಿ ಹಾನಿ ಅವಲೋಕನ: ಬರದ ಹಿನ್ನೆಲೆಯಲ್ಲಿ ಕೃಷಿಕರ ಕೃಷಿ ನಾಶ ನಷ್ಟದ ಬಗ್ಗೆ ಅವಲೋಕನ ನಡೆಸಲಾಗುವುದು. ಅದರ ಆಧಾರದಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಕೃಷಿಕರಿಗೆ ಸಹಾಯ ನೀಡಲಾಗುವುದು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳೂ ಜಾನುವಾರು, ಆಡು ಸಹಿತ ಸಾಕು ಪ್ರಾಣಿಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಜಾಕ್‌ವೆಲ್‌ಗೆ ನೀರು ಹಾಯಿಸುವ ಕಾರ್ಯ

ಉಪ್ಪಿನಂಗಡಿ: ನೇತ್ರಾವತಿ ನದಿ ಬತ್ತಿ ಹೋಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಪಂಚಾಯಿತಿ ಕುಡಿಯುವ ನೀರಿನ ಯೋಜನೆಯ ಜಲಮೂಲಗಳೂ ಬತ್ತಲಾರಂಭಿಸಿದ್ದು, ಕುಡಿಯುವ ನೀರಿಗಾಗಿ ಪಂಚಾಯಿತಿ ಸಿಬ್ಬಂದಿ ನೇತ್ರಾವತಿ ನದಿ ಆಳ ಪ್ರದೇಶದ ನೀರನ್ನು ಪಂಪ್ ಮೂಲಕ ಜಾಕ್‌ವೆಲ್‌ಗೆ ಹಾಯಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಉಪ್ಪಿನಂಗಡಿ ಗ್ರಾಮದ ಗತಕಾಲದಿಂದಲೂ ನೀರು ಸರಬರಾಜಿಗೆ ಬಳಕೆಯಾಗುತ್ತಿದ್ದ ಕೂಟೇಲು ಜಾಕ್‌ವೆಲ್‌ನಲ್ಲಿ ಅಂತರ್ಜಲ ನೀರಿನ ಹರಿವು ನಿಂತು ಹೋದ ಕಾರಣ ಉಪ್ಪಿನಂಗಡಿ ಪೇಟೆಗೆ ನೀರು ಸರಬರಾಜಿಗೆ ಸಮಸ್ಯೆಯಾಗಿತ್ತು. ಇದರಿಂದ ಪರ್ಯಾಯ ಕ್ರಮದತ್ತ ಗಮನ ಹರಿಸಿದ ಪಂಚಾಯಿತಿ ಆಡಳಿತ ನೇತ್ರಾವತಿ ನದಿಯಲ್ಲಿ ಕೂಟೇಲು ಸಮೀಪ ಆಳ ಪ್ರದೇಶದಲ್ಲಿನ ನೀರನ್ನು ಪಂಪು ಮೂಲಕ ಜಾಕ್‌ವೆಲ್‌ಗೆ ಹಾಯಿಸಿ ಅಲ್ಲಿಂದ ನೀರು ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡುತ್ತಿದೆ. ನೇತ್ರಾವತಿ ನದಿ ಈ ಮಟ್ಟದಲ್ಲಿ ಸೊರಗಿರುವುದು ಇದೇ ಮೊದಲಾಗಿದ್ದು, ಪರಿಣಾಮ ಅಂತರ್ಜಲದಲ್ಲಿ ಭಾರಿ ಕುಸಿತವುಂಟಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಮಳೆ ಸುರಿಯದೆ ಹೋದಲ್ಲಿ ನೀರಿನ ತೀವ್ರ ಅಭಾವ ಉಂಟಾಗಲಿದೆ.

Leave a Reply

Your email address will not be published. Required fields are marked *