84 ಗ್ರಾಪಂಗಳಲ್ಲಿ ನೀರಿಲ್ಲ

ಅವಿನ್ ಶೆಟ್ಟಿ, ಉಡುಪಿ
ಜಿಲ್ಲೆಯಲ್ಲಿ ಬೇಸಿಗೆ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಕಳೆದ ತಿಂಗಳು 60 ಪಂಚಾಯಿತಿಗಳಲ್ಲಿದ್ದ ನೀರಿನ ಸಮಸ್ಯೆ 84ಕ್ಕೆ ಏರಿದೆ. ನೀರಿನ ಸಮಸ್ಯೆ ಇರುವ ಪಂಚಾಯಿತಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯ ನದಿ ಮೂಲಗಳು, ಬಾವಿ, ಕರೆ ಬಿಸಿಲ ಧಗೆಯಿಂದ ಬತ್ತಲು ಆರಂಭವಾಗಿರುವುದು ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟೆಂಡರ್ ಆಹ್ವಾನಿಸಿ ಕುಡಿಯುವ ನೀರು ಟ್ಯಾಂಕರ್ ಮೂಲಕ ಪೂರೈಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಕೆಲ ಪಂಚಾಯಿತಿ ವ್ಯಾಪ್ತಿಗಳಲ್ಲಿ ಖಾಸಗಿ ಪಂಪುಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.  ಉಡುಪಿ, ಕಾರ್ಕಳ, ಕುಂದಾಪುರ ಭಾಗದಿಂದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿ.ಎ, ಪಿಡಿಒ ಅವರಿಂದ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು, ತಹಸೀಲ್ದಾರ್‌ಗಳು ಪ್ರತಿ ದಿನ ನಿಗಾ ಇರಿಸುತ್ತಿದ್ದಾರೆ. ತಾಲೂಕು ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ನಿಭಾಯಿಸಲೆಂದೇ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ನೀರಿನ ಸಮಸ್ಯೆ ಎಲ್ಲೆಲ್ಲಿ?: ಉಡುಪಿ ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಜಮಾಡಿ, ತೆಂಕ, ಎರ್ಮಾಳು, ಹಾರಾಡಿ, ಕಡೆಕಾರು, ಬಿಲ್ಲಾಡಿ, ಕಲ್ಯಾಣಪುರ, ಕಟಪಾಡಿ, ಕಾರ್ಕಳ ಪಂಚಾಯಿತಿ ವ್ಯಾಪ್ತಿಯಲ್ಲಿ ಮರ್ಣೆ, ನಿಟ್ಟೆ, ಚಾರ, ಹೆಬ್ರಿ, ಕುಂದಾಪುರ ವ್ಯಾಪ್ತಿಯಲ್ಲಿ ಹಂಪಾರು, ಕಾರ್ವಾಡಿ, ಯಡ್ತರೆ, ಶಿರೂರು, ಬೈಂದೂರು ಶಂಕರನಾರಾಯಣ, ತ್ರಾಸಿ, ಹೆಮ್ಮಾಡಿ, ತಲ್ಲೂರು, ಕೊರ್ಗಿ, ಬಿಜೂರಿನಲ್ಲಿ ನೀರಿನ ಸಮಸ್ಯೆ ತಲೆದೂರಿದೆ. ಕಡೆಕಾರು, ಕಲ್ಮಾಡಿ ವ್ಯಾಪ್ತಿ, ಕಲ್ಯಾಣಪುರದ ಮೂಡುಕುದ್ರು, ಹೊನ್ನಪ್ಪ ಕುದ್ರು, ನಡುಕುದ್ರು, ಅರಮನೆ ಹಿತ್ಲಿನಲ್ಲಿ ಸೇರಿದಂತೆ ಸಮುದ್ರ ವ್ಯಾಪ್ತಿ ಗ್ರಾಪಂಗಳಲ್ಲಿ ಉಪ್ಪು ನೀರಿನ ಅಂಶದಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ.

ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಕೆ: ಗ್ರಾ.ಪಂ.ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದೆ. ಈ ಮೂಲಕ ಟ್ಯಾಂಕರ್ ನೀರು ಎಲ್ಲೆಲ್ಲಿ, ಯಾವ ಭಾಗಕ್ಕೆ ಪೂರೈಕೆಯಾಗುತ್ತಿದೆ ಎಂಬುದನ್ನು ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳು ಮಾನಿಟರ್ ಮಾಡುತ್ತಾರೆ. ಹೆಚ್ಚುವರಿ ಟ್ರಿಪ್ ಹೇಳಿ, ಬಿಲ್ ಪಡೆದುಕೊಳ್ಳುವುದು, ಸಮಸ್ಯೆ ಇರದ ಭಾಗಕ್ಕೂ ನೀರು ಪೂರೈಕೆ ಮಾಡಿ ಬಿಲ್ ಪಡೆಯುವುದು ಮೊದಲಾದ ನಕಲಿ ಪ್ರಕ್ರಿಯೆಗಳಿಗೆ ಕಡಿವಾಣ ಬೀಳಲಿದೆ. ಇದರಿಂದ ನಿರ್ದಿಷ್ಟ ವರದಿ ಲಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುರಸಭೆಗಳ ಪರಿಸ್ಥಿತಿ ನಿಯಂತ್ರಣ: ಕಾರ್ಕಳ, ಕಾಪು, ಕುಂದಾಪುರ ಪುರಸಭೆಗಳಲ್ಲಿ ನೀರಿನ ಸಮಸ್ಯೆ ನಿಯಂತ್ರಣದಲ್ಲಿದೆ. ಇಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿಲ್ಲ. ಕುಂದಾಪುರ ಪುರಸಭೆ ವ್ಯಾಪ್ತಿಗೆ ತೀವ್ರ ಬೇಸಿಗೆಯಲ್ಲಿಯು ನೀರಿನ ಕೊರತೆ ಕಾಡುವುದಿಲ್ಲ. 25 ವಾರ್ಡ್‌ಗಳಿರುವ ಕಾಪು ಪುರಸಭೆ ವ್ಯಾಪ್ತಿಯಲ್ಲಿ 13 ತೆರೆದ ಬಾವಿ, 19 ಬೋರ್‌ವೆಲ್‌ಗಳು ಇವೆ. ನೀರಿನ ಮೂಲಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಈ ಹಿಂದೆ 3 ಗಂಟೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ 1 ಗಂಟೆಗೆ ಇಳಿಸಲಾಗಿದೆ. 23 ವಾರ್ಡ್ ಇರುವ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ 15 ಬೋರ್‌ವೆಲ್, 12 ತೆರೆದ ಬಾವಿ ಇದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗಬಾರದು ಎಂಬ ಹಿನ್ನೆಲೆಯಲ್ಲಿ 4.3 ಎಂಎಲ್‌ಡಿ ಬೇಡಿಕೆ ಇರುವುದನ್ನು, 3.5 ಎಂಎಲ್‌ಡಿ ನೀರನ್ನು ಪೂರೈಸಲಾಗುತ್ತಿದೆ. ಸಾಲಿಗ್ರಾಮ ಪಟ್ಟಣ ಪಣಚಾಯಿತಿ ವ್ಯಾಪ್ತಿಯಲ್ಲಿ 2 ದಿನಕ್ಕೊಮ್ಮೆ ನೀರು ಕೊಡಲಾಗುತ್ತಿದೆ. ತೋಡುಕಟ್ಟು ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆ ಜನರನ್ನು ಕಾಡುತ್ತಿದೆ. 8 ತೆರೆದ ಬಾವಿಯ ನೀರಿನ ಮೂಲದಿಂದ 2 ದಿನಕ್ಕೊಮ್ಮೆ ನೀರನ್ನು ಬಿಡುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಜೆ ಡ್ಯಾಂ ದಿನಕ್ಕೆ 7ಸೆ.ಮೀ ಇಳಿಕೆ: ಉಡುಪಿ ನಗರ ಸಭೆ ವ್ಯಾಪ್ತಿಗೆ ಪೂರೈಕೆಯಾಗುವ ಸ್ವರ್ಣಾ ನದಿ ಬಜೆ ಡ್ಯಾಮ್‌ನಲ್ಲಿ ಏಳೆಂಟು ದಿನಕ್ಕಾಗುವಷ್ಟು ನೀರಿದೆ. ಸದ್ಯ ಡ್ಯಾಮ್‌ನಲ್ಲಿ ನೀರಿನ ಮಟ್ಟ ಸಂಪೂರ್ಣ ಇಳಿಕೆಯಾಗುತ್ತಿದೆ. ದಿನಕ್ಕೆ ಸರಾಸರಿ 7 ಸೆಂಟಿಮೀಟರ್‌ನಷ್ಟು ಇಳಿಕೆಯಾಗುತ್ತಿದೆ. ಮಂಗಳವಾರ ಕಾರ್ಕಳ ಭಾಗದಲ್ಲಿ ಮಳೆಯಾದ್ದರಿಂದ ಬುಧವಾರ 4 ಸೆಂಟಿಮೀಟರ್ ಮಾತ್ರ ಇಳಿದಿದೆ. ನಗರದಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ಕಲ್ಮಾಡಿ, ಅಜ್ಜರಕಾಡು, ಶಿರಿಬೀಡು, ಮಣಿಪಾಲ, ದೊಡ್ಡಣಗುಡ್ಡೆ ಮೊದಲಾದ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದೆ. ನಗರದ ಹೋಟೆಲ್ ಉದ್ಯಮ, ಕೈಗಾರಿಕೆಗಳಿಗೂ ನೀರಿನ ಬಿಸಿ ತಟ್ಟಿದೆ. ಮೂರು ದಿನಕ್ಕೊಮ್ಮೆ ಸಿಗುವ ನೀರಿನಿಂದ ನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಇತ್ತ ಮಳೆ ಬಾರದಿದ್ದರೇ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳಲಿದೆ. ಮಿತವಾಗಿ ನೀರನ್ನು ಬಳಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಉಡುಪಿ ನಗರ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿಲ್ಲ.

  • ಎಲ್ಲಿ ಎಷ್ಟು ನೀರಿನ ಸಮಸ್ಯೆ?
    ಉಡುಪಿ-33
    ಕಾರ್ಕಳ-6
    ಕುಂದಾಪುರ-49

ನೀರಿನ ಸಮಸ್ಯೆ ತೀವ್ರಗೊಂಡಿರುವ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಉಡುಪಿ ನಗರದಲ್ಲಿ ನೀರಿನ ಸಮಸ್ಯೆ ಕುರಿತಾಗಿ ಅಧಿಕಾರಿಗಳಿಂದ ಸಮಗ್ರ ವರದಿ ಕೇಳಿದ್ದೇನೆ. ಸಮಸ್ಯೆ ತೀವ್ರ ಇದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ ಕೊಡಲಾಗಿದೆ.
– ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ.

Leave a Reply

Your email address will not be published. Required fields are marked *