ಉಡುಪಿ ಇನ್ನೊಂದು ವಾರಕ್ಕಷ್ಟೇ ನೀರು

ಉಡುಪಿ ನಗರಕ್ಕೆ ನೀರು ಪೂರೈಸುವ ಹಿರಿಯಡಕ ಸ್ವರ್ಣಾ ನದಿಯ ಬಜೆ ಡ್ಯಾಂನಲ್ಲಿ ಇನ್ನೊಂದು ವಾರಕ್ಕೆ ಸಾಕಾಗುವಷ್ಟು ಮಾತ್ರ ನೀರಿದೆ. ಡ್ರೆಜ್ಜಿಂಗ್ ನಡೆಯುತ್ತಿರುವ ಪ್ರದೇಶದಲ್ಲಿ ನೀರಿನ ಮಟ್ಟ ತೀವ್ರವಾಗಿ ಇಳಿಕೆಯಾಗಿದೆ.

ಮೇ 5ರಂದು ಬಜೆ ಡ್ಯಾಂನಲ್ಲಿ ನೀರು ಖಾಲಿಯಾಗಿದ್ದು, ಮೇ 7ರಿಂದ ಸ್ವರ್ಣಾ ನದಿಯ ಏಳು ಕಿ.ಮೀ. ದೂರದ ಮಾಣೆಯಿಂದ ಡ್ರೆಜ್ಜಿಂಗ್ ಮೂಲಕ ಭಂಡಾರಿಬೆಟ್ಟು, ಪುತ್ತಿಗೆ ಮೂಲಕ ನೀರು ಹಾಯಿಸಿ ಡ್ಯಾಂನ ಜಾಕ್‌ವೆಲ್‌ಗೆ ಹರಿದು ಬರುವಂತೆ ಮಾಡಲಾಗಿತ್ತು. ಬಳಿಕ ನಗರದಲ್ಲಿ ಆರು ವಿಭಾಗಗಳಾಗಿ ವಿಂಗಡಿಸಿ ಆರು ದಿನಕ್ಕೊಮ್ಮೆ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿತ್ತು. ಮಾಣೆಯಲ್ಲಿ ನೀರು ಖಾಲಿಯಾಗಿದ್ದು, ಡ್ರೆಜ್ಜಿಂಗ್ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಭಂಡಾರಿಬೆಟ್ಟಿನಲ್ಲೂ ನೀರು ಖಾಲಿಯಾಗಿದೆ. ಸದ್ಯ ಡ್ಯಾಂನಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಪುತ್ತಿಗೆ ಮಠದ ಬಳಿ ಡ್ರೆಜ್ಜಿಂಗ್ ನಡೆಯುತ್ತಿದೆ. ಪ್ರತಿದಿನ 14 ಗಂಟೆಗಳ ಪಂಪಿಂಗ್ ಮಾಡಿ ನೀರು ಸರಬರಾಜು ಮಾಡಲಾಗುತ್ತಿದೆ.

‘ಭಂಡಾರಿಬೆಟ್ಟಿನ ಗುಂಡಿಯಲ್ಲಿ ನೀರು ಖಾಲಿಯಾಗಿದೆ. ಪುತ್ತಿಗೆಯಲ್ಲಿ ಎರಡು ಕಡೆ ನೀರು ಪಂಪಿಂಗ್ ಮಾಡಿ ಡ್ಯಾಂನತ್ತ ಹಾಯಿಸಲಾಗುತ್ತಿದೆ. ಸಾಬ್ರಗುಂಡಿ, ಬ್ರಹ್ಮನ ಗುಂಡಿ, ಪುತ್ತಿಗೆ ಮಠದ ಬಳಿ ಇರುವ ಗುಂಡಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. ಇನ್ನೂ ಹದಿನೈದು ದಿನ ಸುಧಾರಿಸಬಹುದು’ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *