ಸ್ವರ್ಣ ನದಿಯಲ್ಲಿ ನೀರಿಗಿಂತ ಮರಳೇ ಹೆಚ್ಚು!

ಆರ್.ಬಿ.ಜಗದೀಶ್ ಕಾರ್ಕಳ
ಪಶ್ಚಿಮಘಟ್ಟ ತಪ್ಪಲು ತೀರ ಪ್ರದೇಶವಾಗಿರುವ ಮಾಳ ಮಲ್ಲಾರು ಎಂಬಲ್ಲಿ ಉಗಮಿಸಿದ ಸ್ವರ್ಣ ನದಿಯ ಒಳ ಹರಿವು ಸಂಪೂರ್ಣ ಬತ್ತಿ ಹೋಗಿದೆ. ಇದರಿಂದ ಕಾರ್ಕಳ ನಗರ ವ್ಯಾಪ್ತಿಗೆ ನೀರು ಸರಬರಾಜು ಮಾಡಲಾಗುತ್ತಿರುವ ದುರ್ಗಾ ಗ್ರಾಮದ ಬಲ್ಮಗುಂಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೀರು ಸರಬರಾಜು ಘಟಕಕ್ಕೆ ಬೀಗ ಜಡಿಯಲಾಗಿದೆ.
ಮಾಳದಿಂದ ಬಲ್ಮಗುಂಡಿಯವರೆಗೆ ಸ್ವರ್ಣ ನದಿಯಲ್ಲಿ ನೀರಿನ ಪ್ರಮಾಣಕ್ಕಿಂತ ಮರಳು ಪ್ರಮಾಣವೇ ಹೆಚ್ಚಾಗಿದೆ. ಬತ್ತಿಹೋದ ನದಿಯಲ್ಲಿ ಎಲ್ಲೆಲ್ಲೂ ಮರಳಿನ ಗುಂಪೆಗಳೇ ಕಾಣಸಿಗುತ್ತಿವೆ. ಮರಳು ತೆಗೆಯದೇ ಹೋದಲ್ಲಿ ಮಂದಿನ ವರ್ಷಗಳಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಸ್ವರ್ಣ ನದಿಯಲ್ಲಿ ನೀರನ ಒಳ ಹರಿವು ಇನ್ನಷ್ಟು ಕಡಿಮೆಯಾಗಲಿದೆ.

ಸ್ವರ್ಣ ನದಿ ಒಳವು ಹರಿವು ನಿಂತು ಹೋಗಿರುವುದರಿಂದ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ಕಾರ್ಕಳ ಪುರಸಭಾ ಆಡಳಿತಕ್ಕೆ ಸಮಸ್ಯೆ ಎದುರಾಗಿದೆ. ಹಳೇ ಗಂಡನ ಪಾದವೇ ಗತಿ ಎಂಬಂತೆ ಐತಿಹಾಸಿಕ ಹಿನ್ನೆಲೆಯುಳ್ಳ ರಾಮಸಮುದ್ರ ನಾಮಾಂಕಿತದ ಬೃಹತ್ ಕೆರೆಯ ನೀರು ಶುದ್ಧೀಕರಿಸಿ ಕಾರ್ಕಳ ನಾಗರಿಕರಿಗೆ ನೀಡಬೇಕಾದ ಅನಿವಾರ್ಯತೆ ಎದುರಾಗಿದ್ದಂತೂ ಸತ್ಯ.

ಮುಖ್ಯಮಂತ್ರಿ ಕೊಡುಗೆ: ಕಾರ್ಕಳ ವಿಧಾನಸಭಾ ಕ್ಷೇತ್ರ ಮೂಲಕ ರಾಜ್ಯದ ಮುಖ್ಯಮಂತ್ರಿ ಗದ್ದುಗೇರಿದ ಎಂ.ವೀರಪ್ಪ ಮೊಯ್ಲಿಯವರು 1994ರಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ದುರ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡ್ಲಿ ಬಲ್ಮಗುಂಡಿಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲು ಕಾರಣರಾಗಿದ್ದರು. ಕೆಲ ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ತಲೆ ಎತ್ತಿದ್ದ ಜಲವಿದ್ಯುತ್ ಘಟಕದಿಂದಾಗಿ ಇದು ಕಿರು ಅಣೆಕಟ್ಟಾಗಿ ಮಾರ್ಪಾಡಾಗಿದೆ. ಇಲ್ಲಿ ಸಂಗ್ರಹವಾಗುವ ನೀರನ್ನು ರಾಮಸಮುದ್ರ ಸಂಪಿಗೆ ಹಾಯಿಸಿ ಅಲ್ಲಿ ಶುದ್ಧೀಕರಿಸಿ ಕಾರ್ಕಳದ ವಿವಿಧೆಡೆಗಳಿಗೆ ಕುಡಿಯುವ ಪೂರೈಕೆ ಮಾಡಲಾಗುತ್ತಿದೆ.

ಉಡುಪಿಗೂ ಆಸರೆಯಾಗಿದ್ದ ಸ್ವರ್ಣ: ಮಾಳ ಗ್ರಾಮದ ಮಲ್ಲಾರು, ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ, ಕಲ್ಯಾಣಿ, ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಗಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುತ್ತಿದ್ದು, ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆ ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ನದಿಯಾಗಿ ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರ ಸೇರುತ್ತದೆ. ಈ ನಡುವೆ ತೆಳ್ಳಾರಿನ ಮುಂಡ್ಲಿಯಲ್ಲಿ ಕಿರು ಅಣೆಕಟ್ಟು ನಿರ್ಮಿಸಿ ಕಾರ್ಕಳ ಪುರಸಭೆ ಹಾಗೂ ಹಿರಿಯಡ್ಕ ಬಜೆಯಲ್ಲಿ ನಿರ್ಮಿಸಿರುವ ಅಣೆಕಟ್ಟುನಲ್ಲಿ ಸಂಗ್ರಹವಾಗಿರುವ ನೀರು ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪೂರೈಕೆ ಮಾಡಲಾಗುತ್ತಿದೆ.

ಕೃಷಿಕರಿಗೆ ಹೆಚ್ಚು ಸಹಕಾರಿ: ಅರಣ್ಯ ಪ್ರದೇಶದ ಮೂಲಕ ಹರಿದು ಬರುವ ಸ್ವರ್ಣ ನದಿ ಕೆಲವು ಕಡೆ ಪ್ರಮುಖ ರಸ್ತೆಯ ಅಂಚಿನಲ್ಲೇ ಹಾದು ಹೋಗುತ್ತದೆ. ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ನದಿಯಲ್ಲಿ ಹೆಚ್ಚು ನೀರಿರುವುದಿಲ್ಲ. ನೀರು ನಿಲ್ಲುವ ಪ್ರದೇಶಗಳಾದ ಮಾಳ ಕಡಾರಿಯಲ್ಲಿ ಕಿಂಡಿ ಅಣೆಕಟ್ಟು, ದುರ್ಗದ ಮುಂಡ್ಲಿ ಹಾಗೂ ಹಿರಿಯಡ್ಕ ಬಜೆಯಲ್ಲಿ ಅಣೆಕಟ್ಟು ನಿರ್ಮಿಸಿ ಅದರಲ್ಲಿ ಸಂಗ್ರಹವಾಗುವ ನೀರು ಕುಡಿಯಲು ಉಪಯೋಗಿಸಲಾಗುತ್ತದೆ. ಕೆಲವು ಕಡೆ ರೈತರು ಪಂಪ್ ಉಪಯೋಗಿಸಿ ನೀರನ್ನು ಕೃಷಿ ಕಾಯಕಕ್ಕೆ ಬಳಸುತ್ತಿದ್ದಾರೆ. ಕಡುಬೇಸಿಗೆ ದಿನಗಳಲ್ಲಿ ಸ್ವರ್ಣ ನದಿಯ ಕೆಲವು ಭಾಗಗಳಲ್ಲಿ ಹೊಂಡ ತೋಡಿ ಅದರ ಮೂಲಕ ಕೃಷಿಕರು ತಮ್ಮ ತೋಟಗಳಿಗೆ ನೀರು ಬಳಸುತ್ತಿದ್ದಾರೆ.

ಬೃಹತ್ ಬಾವಿ ನಿರ್ಮಾಣ ಯೋಜನೆ ಅಗತ್ಯ: ಮುಂಡ್ಲಿ-ಬಲ್ಮಗುಂಡಿ ಪರಿಸರದಲ್ಲಿ ಬೃಹತ್ ಬಾವಿ ನಿರ್ಮಿಸಿದರೆ ಕಾರ್ಕಳ ಪುರಸಭಾ ವ್ಯಾಪ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಿದೆ. ಕೇರಳ ರಾಜ್ಯದಲ್ಲಿ ಹರಿಯುವ ಹೊಳೆ, ನದಿಯ ಪಕ್ಕದಲ್ಲಿ ಬೃಹತ್ ಬಾವಿಗಳನ್ನು ನಿರ್ಮಿಸಿ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಮಾದರಿಯಾಗಿಟ್ಟುಕೊಂಡು ಸಾಣೂರು ಗ್ರಾಮ ಪಂಚಾಯಿತಿ ಶಾಂಭವಿ ಹೊಳೆ ತಟದಲ್ಲಿ ಬೃಹತ್ ಬಾವಿ ನಿರ್ಮಿಸಿ ಯಶಸ್ಸು ಕಂಡಿದೆ. ಹೊಳೆಗಿಂತ ಎತ್ತರಿಸಿ ಬಾವಿಯ ಹೊರಾಂಗಣ ನಿರ್ಮಿಸುವುದರಿಂದ ಮಳೆಗಾಲದಲ್ಲಿ ಉಂಟಾಗುವ ನೆರೆಯಿಂದ ಮುಕ್ತಗೊಳ್ಳಲೂ ಸಾಧ್ಯವಿದೆ.

ರಾಮ ಸಮುದ್ರ ಕೆಸರುಮಯ: 1994ರ ಮುನ್ನ ಮುಂಡ್ಲಿ ಡ್ಯಾಂ ನಿರ್ಮಾಣ ಕಾಮಗಾರಿ ಪೂರ್ತಿಗೊಳ್ಳುವ ತನಕ ಕಾರ್ಕಳ ನಗರ ವ್ಯಾಪ್ತಿಯಲ್ಲಿ ಸಮಗ್ರ ಕುಡಿಯುವ ನೀರನ್ನು ರಾಮ ಸಮುದ್ರದಿಂದ ಪೂರೈಸಲಾಗುತ್ತಿತ್ತು. ಗೊಮ್ಮಟ್ಟ ಬೆಟ್ಟಕ್ಕೆ ಮತ್ತೊಂದು ಪಾರ್ಶ್ವದಲ್ಲಿ ಕಾಣಸಿಗುವ ರಾಮ ಸಮುದ್ರದಲ್ಲಿ ಮಳೆಗಾಲದ ವೇಳೆ ಸಂಗ್ರಹವಾಗುವ ಮಳೆ ನೀರು ಯಾವುದೇ ಋತುವಿನಲ್ಲೂ ಬತ್ತಿ ಹೋಗದೆ ಇರುವುದರಿಂದ ಪುರಸಭೆಗೆ ವರದಾನವಾಗಿದೆ. ಗಮನಾರ್ಹವೆಂದರೆ ಮುಂಡ್ಲಿಯಲ್ಲಿ ನೀರು ಬತ್ತಿ ಹೋದ ಹಾಗೂ ಅನಿವಾರ್ಯ ದಿನಗಳಲ್ಲಿ ಇದೇ ರಾಮ ಸಮುದ್ರ ಕೆರೆಯ ನೀರು ಶುದ್ಧೀಕರಿಸಿ ಕುಡಿಯಲು ಪೂರೈಕೆ ಮಾಡಲಾಗುತ್ತಿತ್ತು. ಸದ್ಯ ರಾಮ ಸಮುದ್ರ ಕೆರೆಯ ಆಳ ದಿನದಿಂದ ದಿನಕ್ಕೆ ಕುಗ್ಗತೊಡಗಿದೆ. ಕೆರೆಯಲ್ಲಿ ಹೆಚ್ಚುತ್ತಿರುವ ಹೂಳು ಇದಕ್ಕೆ ಕಾರಣವಾಗುತ್ತಿದೆ. ಮಿಯ್ಯರು ಗ್ರಾಮ ಪಂಚಾಯಿತಿ -ಕಾರ್ಕಳ ಪುರಸಭೆಯ ಗಡಿಭಾಗದಲ್ಲಿ ಇರುವ ರಾಮ ಸಮುದ್ರ ಕೆರೆಯ ಹೂಳೆತ್ತುವ ಕಾಮಗಾರಿ ನಡೆದಲ್ಲಿ ಪರಿಸರದ ಇತರ ಇನ್ನೂ ಕೆಲವು ಗ್ರಾಮಗಳಿಗೆ ಇದೇ ಕೆರೆಯ ನೀರು ಸದುಯೋಗ ಪಡಿಸಲು ಅನುಕೂಲವಾಗಲಿದೆ.

Leave a Reply

Your email address will not be published. Required fields are marked *