ಮನೋಹರ ಬಳಂಜ ಬೆಳ್ತಂಗಡಿ
ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗಳು ಭರ್ತಿಯಾಗದೆ ಖಾಲಿಯಿರುವ ಪರಿಣಾಮ ಸರ್ಕಾರದ ಯೋಜನೆಗಳು ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ತಲುಪುವಲ್ಲಿ ವಿಳಂಬವಾಗುತ್ತಿವೆ.
ಪ್ರಭಾರಿ ನೆಲೆಯಲ್ಲಿರುವ ಪಿಡಿಒಗಳು ಒತ್ತಡದಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ಅವಧಿಯೊಳಗೆ ಸೇವಾ ಕಾರ್ಯ ಲಭ್ಯವಾಗದೆ ಗ್ರಾಮೀಣ ಭಾಗದ ಜನರು ಗ್ರಾಮ ಪಂಚಾಯಿತಿಗಳಿಗೆ ಅಲೆದಾಡುವಂತಾಗಿದೆ. ತಾಲೂಕು ಪಂಚಾಯಿತಿ ಕಚೇರಿಗೆ 24 ಹುದ್ದೆಗಳು ಮಂಜೂರಾಗಿದ್ದು, 18 ಹುದ್ದೆ ಖಾಲಿ ಇವೆ. ತಾಲೂಕಿನ 48 ಗ್ರಾಪಂಗಳಿಗೆ 108 ಹುದ್ದೆಗಳು ಮಂಜೂರಾಗಿದ್ದು, 25 ಖಾಲಿ ಇವೆ.
ಗ್ರಾಪಂಗಳ ಅಭಿವೃದ್ಧಿ ನೆಲೆಯಲ್ಲಿ ಪಿಡಿಒಗಳ ಹುದ್ದೆ ಬಹುಮುಖ್ಯ ಪಾತ್ರ ವಹಿಸಿವೆ. ಬೆಳ್ತಂಗಡಿ ತಾಲೂಕಿನ 48 ಗ್ರಾಪಂ ಪೈಕಿ 42 ಗ್ರಾಪಂಗಳಲ್ಲಷ್ಟೆ ಕಾಯಂ ಪಿಡಿಒಗಳಿದ್ದಾರೆ. ಉಳಿದ 6 ಗ್ರಾಪಂಗಳಿಗೆ ಪ್ರಭಾರ ನೆಲೆಯಲ್ಲಿ ಸಮೀಪದ ಗ್ರಾಪಂಗಳ ಪಿಡಿಒಗಳನ್ನು ನೇಮಿಸಲಾಗಿದೆ. ಆರೋಗ್ಯ ಸಮಸ್ಯೆಯಾದಲ್ಲಿ, ಸರ್ಕಾರಿ ರಜೆ ಬಂದಾಗ ವಾರದಲ್ಲಿ ಮೂರು ದಿನ ಪಿಡಿಒಗಳು ಲಭ್ಯವಾಗುವುದು ಕಷ್ಟ ಎಂಬಂತಾಗಿದೆ. ಜತೆಗೆ ಪ್ರಭಾರ ಪಿಡಿಒಗಳಿಗೆ ತಮ್ಮ ಕಾಯಂ ಪಂಚಾಯಿತಿ ಕೆಲಸ ನಿರ್ವಹಿಸುವುದೂ ಸವಾಲಾಗಿದೆ. ಬೆಳ್ತಂಗಡಿ ಗ್ರಾಪಂ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಸರ್ಕಾರದ ಉದ್ಯೋಗ ಖಾತ್ರಿ, ಹಣಕಾಸು ಯೋಜನೆ ಅನುಷ್ಠಾನ ಸೇರಿದಂತೆ ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳುವಿಕೆಗೆ ಅಡ್ಡಿಯಾಗಿರುವುದರಿಂದ ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ.
6ರಲ್ಲಿ ಪ್ರಭಾರರ ಕಾರುಬಾರು: ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಒಟ್ಟು 48 ಗ್ರಾಪಂಗಳ ಪೈಕಿ 42 ಅಭಿವೃದ್ಧಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವುಗಳಲ್ಲಿ ಅರಸಿನಮಕ್ಕಿ, ಮಚ್ಚಿನ, ಬಂದಾರು, ಮಿತ್ತಬಾಗಿಲು, ಉಜಿರೆ, ಲಾಲ ಸೇರಿದಂತೆ 6 ಗ್ರಾಪಂಗಳಲ್ಲಿ ಪಿಡಿಒ ಪ್ರಭಾರ ಹುದ್ದೆಯಲ್ಲಿ ನಿಯೋಜಿಸಲಾಗಿದೆ.
12 ಗ್ರಾಪಂ ಕಾಯದರ್ಶಿಗಳು: ಗ್ರಾಪಂಗಳ ಜನಸಂಖ್ಯೆ ಹಾಗೂ ವಿಸ್ತೀರ್ಣದ ಆಧಾರದಲ್ಲಿ ಗ್ರೇಡ್ 1, ಗ್ರೇಡ್ 2 ಗುರುತಿಸಲಾಗಿದೆ. ಈ ಪೈಕಿ ಗ್ರೇಡ್ 1 ಗ್ರಾಪಂಗಳಲ್ಲಿ ಪಿಡಿಒಗಳ ಜತೆ ಕಾರ್ಯದರ್ಶಿಗಳು ಕರ್ತವ್ಯ ನಿರ್ವಹಿಸಬಹುದು. ಆದರೆ ಪ್ರಸಕ್ತ ಬೆಳ್ತಂಗಡಿ ತಾಲೂಕಿನ ಗ್ರಾಪಂಗಳಲ್ಲಿ 9 ಗ್ರೇಡ್-1 ಆಗಿದ್ದು, 39 ಗ್ರೇಡ್-2ಗೆ ಸೇರಿವೆ. ಗ್ರೇಡ್-1ರಲ್ಲಿ 8 ಮಂದಿ ಕಾರ್ಯದರ್ಶಿಗಳಿದ್ದು, 1 ಹುದ್ದೆ ಖಾಲಿ ಇದೆ. ಗ್ರೇಡ್-2ರಲ್ಲಿ 28 ಮಂದಿ ಕಾರ್ಯದರ್ಶಿಗಳಿದ್ದು, 11 ಹುದ್ದೆ ಖಾಲಿ ಇದೆ. 7 ಮಂದಿ ಗ್ರಾಪಂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಕೊರತೆ ಇದೆ.
ತಾಪಂ ಕಚೇರಿಯಲ್ಲೂ ಅವ್ಯವಸ್ಥೆ: ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೊರತೆ ನಡುವೆಯೇ ತಾಪಂ ಕಚೇರಿಯಲ್ಲಿ 18 ಹುದ್ದೆಗಳು ಖಾಲಿ ಬಿದ್ದಿವೆ. ವಿಸ್ತರಣಾಧಿಕಾರಿ 1, ಸಹಾಯಕ ಅಭಿಯಂತ-1, ಸಹಾಯಕ ನಿರ್ದೇಶಕರು-1, ಪಿಎ-1, ಪ್ರಧಾನ ಸಹಾಯಕರು-2, ಶೀಘ್ರ ಲಿಪಿಗಾರರು-1, ದ್ವಿ ದರ್ಜೆ ಸಹಾಯಕರು 3, ಬೆರಳಚ್ಚುಗಾರರು-2, ವಾಹನ ಚಾಲಕರು-2, ಗ್ರೂಪ್ ಡಿ 4 ಕಾಯಂ ಹುದ್ದೆಗಳು ಖಾಲಿ ಇದ್ದು ಕೆಲವಷ್ಟು ಹುದ್ದೆಗಳು ಪ್ರಭಾರಿಯಾಗಿ ನಿಯೋಜಿಸಲಾಗಿದೆ.
ಬೆಳ್ತಂಗಡಿ ಗ್ರಾಪಂಗಳಲ್ಲಿ 42 ಮಂದಿ ಪಿಡಿಒಗಳು ಕಾರ್ಯನಿರ್ವಹಿಸುತ್ತಿದ್ದು, ಉಳಿದ 6 ಗ್ರಾಪಂಗಳಿಗೆ ಪ್ರಭಾರ ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಹೊಸ ನೇಮಕಾತಿ ಮಾಡಿದಲ್ಲಿ ಅಭಿವೃದ್ಧಿಗೆ ವೇಗ ಸಿಗಲಿದೆ.
ಕೆ.ಇ.ಜಯರಾಮ್ ತಾಪಂ ಕಾರ್ಯನಿರ್ವಹಣಾಧಿಕಾರಿ