ತೊಪ್ಲು ಕಿಂಡಿ ಅಣೆಕಟ್ಟು ನಿಷ್ಪ್ರಯೋಜಕ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಹಕ್ಲಾಡಿ ಸುತ್ತಮುತ್ತ ಗ್ರಾಮದ ನೀರಿನ ಸಮಸ್ಯೆ ಹಾಗೂ ನೂರಾರು ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಪರಿಹಾರವಾಗಬೇಕಿದ್ದ ತೊಪ್ಲು ಕಿಂಡಿ ಅಣೆಕಟ್ಟು, ಕೆಲವು ಯುವಕರ ಹಣದಾಸೆಗೆ ಉಪ್ಪು ನೀರಿನ ಸಂಗ್ರಹವಾಗಿ ಬದಲಾಗಿದೆ!

ಕಿಂಡಿ ಅಣೆಕಟ್ಟಿನಲ್ಲಿ ಸಾಕಷ್ಟು ನೀರಿದ್ದರೂ ಮೀನುಬಾಕತನಕ್ಕೆ ಹಲಗೆ ತೆಗೆಯುವ ಮೂಲಕ ಸಿಹಿ ನೀರು ಹಿಡಿದಿಡುವ ಕಿಂಡಿ ಅಣೆಕಟ್ಟು ನೀರೆಲ್ಲ ಉಪ್ಪುಪ್ಪು. ಬಾವಿ, ಕೆರೆ, ಕೊಳವೆ ಬಾವಿಗಳು ನೀರೆತ್ತುವುದನ್ನು ನಿಲ್ಲಿಸಿ ಹಕ್ಲಾಡಿ ಗ್ರಾಪಂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದು, ತೊಪ್ಲು ಕಿಂಡಿ ಅಣೆಕಟ್ಟು ನಿರ್ವಹಣೆ ಸರಿಯಾಗಿ ಮಾಡಿದ್ದರೆ, ಹಕ್ಲಾಡಿ ಅಲ್ಲದೆ ವಂಡ್ಸೆ ಹೋಬಳಿಗೂ ನೀರು ಸಿಗುತ್ತಿತ್ತು.
ದಶಕದ ಹಿಂದೆ ತೊಪ್ಲು ಕಿಂಡಿ ಅಣೆಕಟ್ಟು ನಿರ್ಮಿಸಿದ್ದು, ಅಂದಿನಿಂದ ಇಂದಿನವರಗೆ ನೀರಾವರಿ ಇಲಾಖೆ ಅಧಿಕಾರಿಗಳು ಈ ಕಡೆ ತಲೆ ಹಾಕಿಯೂ ನೋಡಿಲ್ಲ. ಅಣೆಕಟ್ಟಿನ ಇಂದಿನ ಅವ್ಯವಸ್ಥೆಗೆ ಇಲಾಖೆ ಅಧಿಕಾರಿಗಳೇ ನೇರ ಹೊಣೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಅಣೆಕಟ್ಟು ಹಲಗೆ ರಾತ್ರಿ ತೆಗೆದು ನಿರಂತರ ಮೀನು ಹಿಡಿಯುತ್ತಿದ್ದರೂ, ಸಣ್ಣ ನೀರಾವರಿ ಇಲಾಖೆ ದೂರು ದಾಖಲಿಸುವುದು ಇರಲಿ ಸ್ಥಳಕ್ಕೂ ಬಾರದೆ ಜನಾಕ್ರೋಶ ವ್ಯಕ್ತವಾಗಿದೆ. ಅಣೆಕಟ್ಟು ಮತ್ತು ಹಲಗೆಗಳ ನಿರ್ವಹಣೆ ವಿಷಯದಲ್ಲಿ ಇಲಾಖೆ ನಿರ್ಲಕ್ಷೃ ವಹಿಸಿರುವುದೇ ಕುಡಿಯುವ ನೀರಿನ ಸಮಸ್ಯೆಗೆ ಮೂಲ ಕಾರಣ. ನೀರಾವರಿ ಇಲಾಖೆ ಕ್ರಮಕ್ಕೆ ಮುಂದಾಗದಿದ್ದರೆ ರಸ್ತೆ ಬಂದ್ ಮಾಡಿ ಧರಣಿ ನಡೆಸಬೇಕಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ವನ್ಯಜೀವಿಗಳ ಗೋಳು ಕೇಳುವವರಿಲ್ಲ: ಕುಂದಾಪುರ ತಾಲೂಕು ಬಳಸಿ ಖೇಟಕಿ, ಕುಬ್ಜಾ, ಚಕ್ರಾ, ವಾರಾಹಿ ಹಾಗೂ ಸೌಪರ್ಣಿಕಾ ನದಿ ಹರಿಯುತ್ತವೆ. ಪ್ರಸಕ್ತ ಯಾವ ನದಿಯಲ್ಲೂ ನೀರಿಲ್ಲ. ವನ್ಯಜೀವಿ, ಸರೀಸೃಪ, ಪಕ್ಷಿಗಳ ನೀರಿನ ಹಕ್ಕು ಕಿತ್ತುಕೊಳ್ಳಲಾಗಿದೆ. ರಾತ್ರಿ ಹೊತ್ತು ನದಿ ಪಾತ್ರಗಳನ್ನು ಸುತ್ತಿ ಬಂದರೆ ಹಿಂಡು ಹಿಂಡಾಗಿ ಬರುವ ಕಾಡುಕೋಣ, ಜಿಂಕೆ, ಕಾನ್ಕುರಿಗಳೂ ನೀರಿಗಾಗಿ ಅಲೆಯುತ್ತಿರುವುದು ಕಾಣಸಿಗುತ್ತವೆ. ಅರಣ್ಯ ಇಲಾಖೆ ಕಾಡಲ್ಲಿರುವ ಕೆರೆ, ಮದಗಗಳ ಪುನಶ್ಚೇತನ ಮಾಡದಿದ್ದರೆ, ಹನಿ ನೀರಿಗೂ ಕಾಡು ಪ್ರಾಣಿಗಳು ಪರದಾಡುವ ಸ್ಥಿತಿ ಬಂದಿದೆ. ಸ್ವಲ್ಪ ನೀರಿದ್ದ ಮದಗಕ್ಕೆ ಇಳಿದರೆ ಪ್ರಾಣಿಗಳು ಹೂಳಲ್ಲಿ ಹೂತು ಪ್ರಾಣಬಿಡಬೇಕು.

ನದಿ ಬತ್ತಲು ಕಾರಣ: ಸಣ್ಣ ನೀರಾವರಿ ಇಲಾಖೆ ಹೊಳೆ ನೀರೆತ್ತಲು ಒಪ್ಪಿಗೆ ಪತ್ರ ನೀಡುವ ಮೂಲಕ ಇಲಾಖೆಯೇ ನದಿ ನೀರು ಬರಿದಾಗಲು ಪ್ರೋತ್ಸಾಹ ನೀಡುತ್ತಿದೆ. ಕಮಲಶಿಲೆ ದೇವಸ್ಥಾನ ಸಮೀಪ ಕುಬ್ಜಾ ನದಿಯಲ್ಲಿ ಹೊಂಡ ಮಾಡಿ 15ಕ್ಕೂ ಅಧಿಕ ಯತ್ರಗಳ ಮೂಲಕ ನೀರೆತ್ತಿದರೆ ಹೊಳೆ ಹರಿಯುವುದಾದರೂ ಹೇಗೆ? ಚಕ್ರಾ ನದಿಯಲ್ಲಿ 60ಕ್ಕೂ ಮಿಕ್ಕ ಸಬ್‌ಮೆರಿನ್ ಮೋಟಾರ್ ಸೇರಿ ಅತಿ ಹೆಚ್ಚು ಅಶ್ವಶಕ್ತಿ ಮೂಲಕ ನೀರೆತ್ತಿ ಕೃಷಿಗೆ ಹಾಯಿಸಿ, ಚಕ್ರಾ ಹರಿಯುವುದನ್ನೇ ನಿಲ್ಲಿಸಿದ್ದಾರೆ.

ಸಣ್ಣ ನೀರಾವರಿ ಇಲಾಖೆ ತೊಪ್ಲು ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡದಿರುವುದನ್ನು ಮನಗೊಂಡು ಹಕ್ಲಾಡಿ ಗ್ರಾಪಂ ಕಿಂಡಿ ಅಣೆಕಟ್ಟು ನಿರ್ವಹಣೆ ಮಾಡುವಂತೆ ಮನವಿ ಮಾಡಿದ್ದರೂ, ಸ್ಪಂದನೆ ಲಭಿಸಿಲ್ಲ. ಕಿಂಡಿ ಅಣೆಕಟ್ಟು ನಿರ್ವಹಣೆ ಗ್ರಾಪಂಗೆ ನೀಡಬೇಕು. ಹಲಗೆ ತೆಗೆದು ಮೀನು ಹಿಡಿಯುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ.
ಸುಭಾಷ್ ಶೆಟ್ಟಿ ಹೊಳ್ಮಗೆ ಉಪಾಧ್ಯಕ್ಷ, ಗ್ರಾಪಂ ಹಕ್ಲಾಡಿ

ಕುದ್ರು ನಿವಾಸಿಗಳಿಗೆ ಜಲ ಸಂಕಷ್ಟ

ಹೇಮನಾಥ್ ಪಡುಬಿದ್ರಿ
ಸಮುದ್ರ ಹಾಗೂ ನದಿ ಭಾಗ ಹೊಂದಿರುವ ಹೆಜಮಾಡಿ ಗ್ರಾಮದ ಕುದ್ರು ನಿವಾಸಿಗಳು ಶುದ್ಧ ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ. ಅದರಲ್ಲೂ ನಡಿಕುದ್ರು, ಕೊಕ್ರಾಣಿ ಕುದ್ರು, ಪರಪಟ್ಟ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದಿದೆ.

ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ನಡಿಕುದ್ರು, ಚೆನ್ನಯ ಕುದ್ರು, ಸ್ವಾಮಿಲ್ ಕುದ್ರು, ಮೇಸ್ತ ಕುದ್ರು ಹಾಗೂ ಕೊಕ್ರಾಣಿ ಕುದ್ರು ಪ್ರದೇಶಗಳಿದ್ದು, ಇಲ್ಲಿಯ ಜನರಿಗೆ ಮಾರ್ಚ್ ತಿಂಗಳು ಬಂತೆಂದರೆ ಕುಡಿಯುವ ನೀರಿನ ಬವಣೆ ತಪ್ಪಿದ್ದಲ್ಲ. ಈ ಕುದ್ರುಗಳಲ್ಲಿ ಸುಮಾರು 125 ಮನೆಗಳಿದ್ದು, ನಳ್ಳಿ ನೀರಿನ ಸಂಪರ್ಕ ಮಾಡಲಾಗಿದೆ. ಪ್ರಸ್ತುತ ನಳ್ಳಿಯಲ್ಲಿ ಎರಡು ದಿನಕ್ಕೊಮ್ಮೆ ಅರ್ಧ ತಾಸು ನೀರು ಪೂರೈಸಲಾಗುತ್ತಿದೆ. ನಳ್ಳಿ ನೀರಿಲ್ಲದಿದ್ದರೆ ಇಲ್ಲಿನ ಜನರು ಕಿ.ಮೀಟರ್‌ಗಟ್ಟಲೆ ಸಾಗಿ ನೀರು ತರಬೇಕಾದ ಪರಿಸ್ಥಿತಿ ಇದೆ. ಈ ಭಾಗದ ಜನ ಹಾಗೂ ಜಾನುವಾರುಗಳಿಗೆ ನೀರಿಗಾಗಿ ಹಲವು ದಶಕಗಳಿಂದಲೂ ಪರದಾಡುತ್ತಿದ್ದಾರೆ.

ಹೆಜಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಐದು ತೆರೆದ ಬಾವಿಗಳಿದ್ದು, ಅದರಿಂದ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಪಂಪ್ ಮಾಡಿ ಪೂರೈಕೆ ಮಾಡಲಾಗುತ್ತಿದೆ. ಕುದ್ರು ಪ್ರದೇಶಗಳಲ್ಲಿ ಭೂಮಿ ಸಮತಟ್ಟಾಗಿಲ್ಲದೆ ಕೆಲವೆಡೆ ಹೊಂಡ ಮಾಡಿ ನಳ್ಳಿ ಸಂಪರ್ಕ ಕಲ್ಪಿಸಿದರೂ ನೀರು ಸರಿಯಾಗಿ ಹರಿದು ಬರುತ್ತಿಲ್ಲ. ಕಳೆದ ಬಾರಿ ಏಪ್ರಿಲ್, ಮೇ ತಿಂಗಳಲ್ಲಿ ಮಳೆಯಾದ ಪರಿಣಾಮ ಜನ ನೀರಿನ ಸಮಸ್ಯೆಯಿಂದ ಪಾರಾಗಿದ್ದರು. ಅಕ್ಟೋಬರ್‌ನಿಂದ ಈವರೆಗೆ ಮಳೆಯಾಗದೆ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಈ ಬಾರಿ ಮಾರ್ಚ್ ತಿಂಗಳಿನಲ್ಲೇ ಇದ್ದ ಬಾವಿಗಳೂ ಉಪ್ಪು ನೀರಿನ ಸಮಸ್ಯೆಗೆ ತುತ್ತಾಗಿ ಕುಡಿಯುವ ನೀರಿಗಾಗಿ ಪರದಾಡಬೇಕಾದ ಸ್ಥಿತಿ ಉಂಟಾಗಿದೆ.

ಗ್ರಾಪಂ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಎರಡು ದಿನಕ್ಕೊಮ್ಮೆ ಐದು ಸಾವಿರ ಲೀಟರ್ ನೀರು ಸಂಗ್ರಹ ಮಾಡಲಾಗುತ್ತಿದ್ದು, ಅದೂ ಕೂಡ ಸಮರ್ಪಕವಾಗಿ ಬಳಕೆಯಾಗುತ್ತಿದೆ. ಗ್ರಾಪಂ ಮುಂಭಾಗದಲ್ಲಿ ಕೊಳವೆ ಬಾವಿ ಕೊರೆದರೂ ಅದರಲ್ಲಿ ನೀರಿಲ್ಲ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಗ್ರಾಮದ ನೀರಿನ ಬವಣೆ ನೀಗಿಸಲು ಶಾಶ್ವತ ಯೋಜನೆ ರೂಪಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ.

ಗ್ರಾಪಂ ವ್ಯಾಪ್ತಿಯಲ್ಲಿ ಐದು ತೆರೆದ ಬಾವಿಗಳು ಹಾಗೂ ಎರಡು ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ನೀರಿನ ಬವಣೆ ಹೆಚ್ಚಾಗಿದ್ದು, ಬೇಡಿಕೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗಾಗಿ ಟೆಂಡರ್ ಆಹ್ವಾನಿಸಲಾಗಿದೆ. ಪಟಾರ ಎಂಬಲ್ಲಿ ಗ್ರಾಪಂ ಬಾವಿಗೆ ಹೊಂದಿಕೊಂಡು ಖಾಸಗಿ ಬಾವಿಯಿದ್ದು, ಈ ಬಾವಿಯ ನೀರನ್ನು ಟ್ಯಾಂಕರ್ ಮೂಲಕ ಮೂಲ್ಕಿ ಕಡೆಗೆ ಸಾಗಿಸುತ್ತಿರುವುದರಿಂದ ಅಂತರ್ಜಲ ಕುಸಿದು ನೀರು ಪೂರೈಸಲು ಅಡಚಣೆ ಉಂಟಾಗಿತ್ತು. ಖಾಸಗಿ ಬಾವಿಯ ನೀರನ್ನು ಸರಬರಾಜು ಮಾಡದಂತೆ ಕ್ರಮ ಕೈಗೊಂಡಿದ್ದು, ಅಲ್ಲಿನ ನೀರನ್ನು ಕೊಕ್ರಾಣಿ ಪ್ರದೇಶಕ್ಕೆ ಉಚಿತವಾಗಿ ಸರಬರಾಜು ಮಾಡಲಾಗುತ್ತಿದೆ.
ಮಮತಾ ವೈ. ಶೆಟ್ಟಿ ಹೆಜಮಾಡಿ ಗ್ರಾಪಂ ಪಿಡಿಒ

ಹಲವು ವರ್ಷಗಳಿಂದ ನಡಿಕುದ್ರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನಳ್ಳಿಯಲ್ಲಿ ಎರಡು, ಮೂರು ದಿನಕ್ಕೊಮ್ಮೆ ಅರ್ಧ ತಾಸು ನೀರು ಬರುತ್ತಿದೆ. ಅಲ್ಲದೆ ಎರಡು ದಿನಕ್ಕೊಮ್ಮೆ ಟ್ಯಾಂಕರ್ ಮೂಲಕ ನೀರು ಸರಬರಾಜಾಗುತ್ತಿದೆ. ಮನೆಯಲ್ಲಿ ಬಾವಿ ಇಲ್ಲ. ಸ್ನಾನ ಹಾಗೂ ಬಟ್ಟೆ ಒಗೆಯಲು ನೀರಿಗಾಗಿ ಬಾವಿ ಹುಡುಕಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ವಾರಕ್ಕೆರಡು ಬಾರಿ ತಲಾ 1000 ಲೀಟರ್ ಟ್ಯಾಂಕ್ ನೀರನ್ನು ದುಡ್ಡು ತೆತ್ತು ಟೆಂಪೋದಲ್ಲಿ ತಂದು ಮಾರು ದೂರ ಪೈಪು ಅಳವಡಿಸಿ ಮನೆಗೆ ಸರಬರಾಜು ಮಾಡುತ್ತಿದ್ದೇವೆ.
ಗೋಪಾಲ ಕುಕ್ಯಾನ್ ನಡಿಕುದ್ರು ನಿವಾಸಿ

Leave a Reply

Your email address will not be published. Required fields are marked *