ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ: ಹದಿನೈದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಅದನ್ನು ಸ್ಪೀಕರ್ ಕೂಡ ಅಂಗೀರಿಸಿದ್ದಾರೆ.

ಕಾಂಗ್ರೆಸ್​, ಸಮಾಜವಾದಿ ಪಾರ್ಟಿ(ಎಸ್​ಪಿ), ತೆಲುಗುದೇಶಂ (ಟಿಡಿಪಿ) ಮತ್ತು ನ್ಯಾಷನಲ್​ ಕಾನ್ಫರೆನ್ಸ್​ ಮಂಡಿಸಿರುವ ಈ ಗೊತ್ತುವಳಿಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ವಿಚಾರವಾಗಿ ಶೀಘ್ರದಲ್ಲೇ ಚರ್ಚೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಸ್ಪೀಕರ್​ ಸಮಿತ್ರಾ ಮಹಾಜನ್​ ತಿಳಿಸಿದ್ದಾರೆ.

ವಿಪಕ್ಷಗಳ ಅವಿಶ್ವಾಸ ಮಂಡನೆಯ ಕುರಿತು ಪ್ರತಿಕ್ರಿಯಿಸಿರುವ ಸಚಿವ ಅನಂತ್​ ಕುಮಾರ್​, “ವಿಪಕ್ಷಗಳಿಗೆ ನರೇಂದ್ರ ಮೋದಿ ಸರ್ಕಾರದ ಮೇಲೆ ವಿಶ್ವಾಸ ಇಲ್ಲದೇ ಇರಬಹುದು. ಆದರೆ, ದೇಶದ ನಾಗರಿಕರು ಈ ಸರ್ಕಾರದ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂಬುದನ್ನು ನಾನು ಲೋಕಸಭೆಯಲ್ಲಿಯೇ ಸ್ಪಷ್ಟಪಡಿಸಲು ಬಯಸುತ್ತೇನೆ,” ಎಂದು ಹೇಳಿದ್ದಾರೆ.

ಟಿಡಿಪಿ ಸಂಸದರ ಪ್ರತಿಭಟನೆ

ಲೋಕಸಭೆ ಅಧಿವೇಶನ ಆರಂಭಕ್ಕೂ ಮೊದಲು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಲೋಕಸಭೆಯ ಹೊರಗೆ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್​, ಟಿಡಿಪಿ, ಎಸ್​ಪಿ ನಾಯಕರು ಹೋರಾಟದ ಕುರಿತು ಪ್ರತ್ಯೇಕವಾಗಿ ಸಭೆ ನಡೆಸಿದರು.

ಎಲ್ಲ ವಿಷಯಗಳ ಬಗ್ಗೆ ಚರ್ಚೆ: ಮೋದಿ

ವಿಪಕ್ಷಗಳ ಪ್ರತಿಭಟನೆ ಮತ್ತು ಅವಿಶ್ವಾಸ ಗೊತ್ತುವಳಿಯ ಮುನ್ಸೂಚನೆಯ ನಡುವೆಯೂ ಲೋಕಸಭೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಧಿವೇಶನದಲ್ಲಿ ಹಲವು ವಿಚಾರಗಳು ಚರ್ಚೆಯಾಗಬೇಕಿವೆ. ದೇಶಕ್ಕೆ ಉಪಯುಕ್ತ ಎನಿಸುವ ವಿಷಯಗಳ ಕುರಿತು ಸದನದ ಸದಸ್ಯರು ಚರ್ಚಿಸಬಹುದು. ಇರುವ ಸಮಯವನ್ನು ನಾವು ರಚನಾತ್ಮಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಲೋಕಸಭೆಯ ಕಲಾಪಗಳು ಸುಲಲಿತವಾಗಿ ನಡೆಯಬೇಕು ಎಂದು ನಾನು ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ. ಹೀಗಾಗಿ ಪ್ರತಿಪಕ್ಷಗಳು ಎತ್ತುವ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂದು ಘೋಷಿಸಿದರು.

ಕಲಾಪ ಮುಂದೂಡಿಕೆ

ಇದಾದ ಕೆಲವೇ ಕ್ಷಣಗಳಲ್ಲಿ ರಾಜ್ಯಸಭೆಯ ಕಲಾಪಗಳು ಆರಂಭವಾದವು. ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟು ಟಿಡಿಪಿ ಸದಸ್ಯರು ರಾಜ್ಯಸಭೆಯಲ್ಲಿ ಘೋಷಣೆ ಕೂಗಲಾರಂಭಿಸಿದರು. ಇದರ ನಡುವೆ, ದೇಶಾದ್ಯಂತ ಸಂಭವಿಸಿರುವ ಗುಂಪು ಹಲ್ಲೆ, ದೊಂಬಿ ಪ್ರಕರಣಗಳನ್ನು ಮುಂದಿಟ್ಟು ಇತರ ಪಕ್ಷಗಳೂ ಹೋರಾಟಕ್ಕೆ ಮುಂದಾದವು. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯ ಕಲಾಪವನ್ನು ಸಭಾಧ್ಯಕ್ಷರು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.

ಇದೇ ವಿಚಾರವಾಗಿ ಇತ್ತ ಲೋಕಸಭೆಯಲ್ಲೂ ಸಮಾಜವಾದಿ ಪಕ್ಷ, ಟಿಡಿಪಿ ಸೇರಿದಂತೆ ಹಲವು ಪಕ್ಷಗಳು ಬಾವಿಗಿಳಿದು ಘೋಷಣೆ ಕೂಗಿದವು. ಮತ್ತು ತಮ್ಮ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕಲ್ಪಿಸಬೇಕಾಗಿ ಒತ್ತಾಯಿಸಿದವು. ಈ ಹಿನ್ನೆಲೆಯಲ್ಲಿ ಲೋಕಸಭೆ ಸ್ಪೀಕರ್​ ಸುಮಿತ್ರಾ ಮಹಜನ್​ ಅವರು ಅವಿಶ್ವಾಸ ಗೊತ್ತುವಳಿಗೆ ಅವಕಾಶ ಕಲ್ಪಿಸಿದರು. ಅಲ್ಲದೆ, ಗೊತ್ತುವಳಿಯನ್ನು ಅಂಗೀರಿಕಸಿದರು. ಅತಿ ಶೀಘ್ರದಲ್ಲೇ ಚರ್ಚೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಸ್ಪೀಕರ್​ ಸದನಕ್ಕೆ ತಿಳಿಸಿದರು.

ವಿಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿಗೆ 50 ಸಂಸದರು ಸಹಿ ಹಾಕಿದ್ದು, ಇನ್ನು ಹತ್ತು ದಿನಗಳಲ್ಲಿ ವಿಷಯದ ಮೇಲೆ ಚರ್ಚೆ ನಡೆಯುವ ಸಾಧ್ಯತೆಗಳಿವೆ.

ನಾಮನಿರ್ದೇಶಿತರ ಪ್ರಮಾಣವಚನ ಸ್ವೀಕರ

ವಿಪಕ್ಷಗಳ ಅವಿಶ್ವಾಸ, ಪ್ರತಿಭಟನೆಯ ನಡುವೆಯೂ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಶಾಸ್ತ್ರೀಯ ನೃತ್ಯಗಾರ್ತಿ ಸೋನಾಲ್​ ಮಾನ್​ಸಿಂಗ್​, ಲೇಖಕ ರಾಕೇಶ್​ ಸಿನ್ಹಾ, ಶಿಲ್ಪ ಕಲಾವಿದ ರಘುನಾಥ್​ ಮಹಾಪಾತ್ರ ರಾಜ್ಯಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.