ವಿಶ್ವಕಪ್​ಗೆ ಮುನ್ನ ರಿಲ್ಯಾಕ್ಸ್: ಅಭ್ಯಾಸ ಬೇಡ, ವಿಶ್ರಾಂತಿ ಮಾಡಿ ಎಂದು ಟೀಮ್ ಇಂಡಿಯಾ ಆಟಗಾರರಿಗೆ ಸೂಚನೆ

ನವದೆಹಲಿ: ಇಂಗ್ಲೆಂಡ್ ಆತಿಥ್ಯದ ಏಕದಿನ ವಿಶ್ವಕಪ್ ಟೂರ್ನಿಗೆ ಹೆಚ್ಚಿನ ದಿನ ಉಳಿದಿಲ್ಲ. ಎಲ್ಲ ತಂಡಗಳು ಕೊನೇ ಹಂತದ ಸಿದ್ಧತೆಗಾಗಿ ತಯಾರಾಗುತ್ತಿರುವ ವೇಳೆಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಟೀಮ್ ಮ್ಯಾನೇಜ್​ವೆುಂಟ್, ಹೆಚ್ಚಿನ ಅಭ್ಯಾಸ ನಡೆಸದಂತೆ ಸೂಚನೆ ನೀಡಿದೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಸರಣಿಯಲ್ಲಿ ನಿರತವಾಗಿದ್ದರೆ, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಕೂಡ ಸರಣಿಯಲ್ಲಿ ಭಾಗಿಯಾಗಿವೆ. ಇನ್ನು ಆಸೀಸ್ ತಂಡದ ಅಭ್ಯಾಸ ಶಿಬಿರ ಆರಂಭವಾಗಿ 15 ದಿನ ಕಳೆದಿವೆ. ದಕ್ಷಿಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್ ತಂಡಗಳು ಸಿದ್ಧತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಅಫ್ಘಾನಿಸ್ತಾನ ತಂಡ ಕೂಡ ದಕ್ಷಿಣ ಆಫ್ರಿಕಾದಲ್ಲಿ ಶಿಬಿರದಲ್ಲಿ ಭಾಗಿಯಾಗಿದೆ. ಆದರೆ, ಭಾರತ ತಂಡದ ಆಟಗಾರರಿಗೆ ಅಭ್ಯಾಸದ ಬದಲಾಗಿ ಹೆಚ್ಚಿನ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ಜಿದ್ದಾಜಿದ್ದಿನ ಟೂರ್ನಿಯಲ್ಲಿ ಪಾಲ್ಗೊಳ್ಳುವ ವೇಳೆ ಮನಸ್ಸು ಉಲ್ಲಾಸದಿಂದ ಇರಬೇಕು. ಅಭ್ಯಾಸ ಮಾಡಿ ಹೆಚ್ಚಿನ ಒತ್ತಡ ತಂದುಕೊಳ್ಳಬೇಡಿ. ಕೆಲ ದಿನಗಳ ಮಟ್ಟಿಗೆ ಕ್ರಿಕೆಟ್ ಮರೆತು ಆಪ್ತರು, ಸ್ನೇಹಿತರ ಜತೆ ಕಾಲ ಕಳೆಯಿರಿ ಎಂದು ಟೀಮ್ ಮ್ಯಾನೇಜ್​ವೆುಂಟ್ ತಿಳಿಸಿದೆ ಎಂದು ವರದಿಯಾಗಿದೆ.

ಮೇ 21ರಂದು ಮುಂಬೈನಲ್ಲಿ ವಿಶ್ವಕಪ್ ತಂಡ ಒಗ್ಗೂಡುವ ಮುನ್ನ ಎಲ್ಲ ಆಟಗಾರರು ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು. ಮೇ 22ರಂದು ತಂಡ ಲಂಡನ್​ಗೆ ಪ್ರಯಾಣ ಬೆಳೆಸಲಿದೆ ಎಂದು ತಿಳಿಸಲಾಗಿದೆ. ‘ಐಪಿಎಲ್ ಬಳಿಕ ತರಬೇತಿಯಿಂದ ರೆಸ್ಟ್ ತೆಗೆದುಕೊಳ್ಳುವಂತೆ ಆಟಗಾರರಿಗೆ ತಿಳಿಸಿದ್ದೇವೆ. ಕುಟುಂಬ, ಆಪ್ತರ ಜತೆ ಈ ದಿನಗಳನ್ನು ಕಳೆದು, ಉಲ್ಲಾಸದೊಂದಿಗೆ ಮತ್ತೆ ತಂಡವನ್ನು ಕೂಡಿಕೊಳ್ಳಬೇಕು’ ಎಂದು ಟೀಮ್ ಮ್ಯಾನೇಜ್​ವೆುಂಟ್​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅದರಂತೆ ರೋಹಿತ್ ಶರ್ಮ, ಪತ್ನಿ ರಿತಿಕಾ ಹಾಗೂ ಕುಟುಂಬದ ಜತೆ ಮಾಲ್ಡಿವ್ಸ್ ಪ್ರವಾಸ ಕೈಗೊಂಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೋವಾ ಪ್ರವಾಸದಲ್ಲಿದ್ದರೆ, ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮ ಜೆಕ್ ಗಣರಾಜ್ಯದ ಪ್ರೇಗ್​ಗೆ ತೆರಳಿದ್ದಾರೆ. ಮೇ 19ರಂದು ಎಲ್ಲ ಆಟಗಾರರು ಭಾರತಕ್ಕೆ ವಾಪಸಾಗಲಿದ್ದಾರೆ.

ಆಟಗಾರರ ಟ್ರ್ಯಾಕ್​ ವ್ಯವಸ್ಥೆ

ವಿಶ್ರಾಂತಿ ತೆಗೆದುಕೊಳ್ಳುವಂತೆ ಬಿಸಿಸಿಐ ಹೇಳಿದ್ದರೂ, ಆಟಗಾರನ ಪ್ರತಿ ಚಲನವಲನದ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ. ಕೇಂದ್ರ ಗುತ್ತಿಗೆ ಯಲ್ಲಿರುವ ಎಲ್ಲ ಆಟಗಾರರಿಗೆ ಜಿಪಿಎಸ್ ಸಾಧನ ನೀಡಲಾಗಿದೆ. ಪ್ರತಿ ಆಟಗಾರ ಎಲ್ಲಿದ್ದಾರೆ ಎನ್ನುವುದನ್ನು ಟ್ರಾ್ಯಕ್ ಮಾಡಬಹುದಾಗಿದೆ.

ಈ ಬಾರಿ ಯೋಯೋ ಟೆಸ್ಟ್ ಇರಲ್ಲ

ಐಪಿಎಲ್​ನಿಂದಾಗಿ ವಿಶ್ವಕಪ್ ತಂಡದ ಸಿದ್ಧತೆಯ ಮೇಲೆ ಪರಿಣಾಮ ಬೀರಿದೆ. ಹಾಲಿ ತಂಡದ ಆಟಗಾರರ ಫಿಟ್ನೆಸ್ ವಿಚಾರವಾಗಿ ತೀರಾ ಪ್ರಮುಖವಾಗಿರುವ ಯೋಯೋ ಟೆಸ್ಟ್ ಕೂಡ ಐಪಿಎಲ್ ಕಾರಣ ದಿಂದಾಗಿ ನಡೆಸಿಲ್ಲ. ಐಪಿಎಲ್ ಮುಗಿದ 10 ದಿನಗಳ ಒಳಗಾಗಿ ಯೋಯೋ ಟೆಸ್ಟ್ ನಡೆಸುವುದು ಸಾಧ್ಯವಿರ ಲಿಲ್ಲ. ಇದು ಎಂಡ್ಯುರೆನ್ಸ್ ಟೆಸ್ಟ್. ಆಟಗಾರರು ಫ್ರೆಶ್ ಆಗಿ ಇದರಲ್ಲಿ ಭಾಗಿ ಯಾಗ ಬೇಕಿರುತ್ತದೆ. ಐಪಿಎಲ್​ನಂಥ ಟೂರ್ನಿ ಆಡಿ ದಣಿದಿ ರುವ ಆಟಗಾರರಿಗೆ ಇದನ್ನು ನಡೆಸುವುದು ಸರಿಯಲ್ಲ ಎಂದು ಬಿಸಿಸಿಐ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಶ್ವಕಪ್​ಗೆ ಕೇದಾರ್ ಜಾಧವ್ ಫಿಟ್

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗ ಐಪಿಎಲ್​ನ ಅಂತಿಮ ಲೀಗ್ ಪಂದ್ಯದ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಆಲ್ರೌಂಡರ್ ಕೇದಾರ್ ಜಾಧವ್ ವಿಶ್ವಕಪ್​ಗೆ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ಟೀಮ್ ಇಂಡಿಯಾ ಫಿಸಿಯೋ ಪ್ರಕಟಿಸಿದ್ದಾರೆ. 34 ವರ್ಷದ ಜಾಧವ್ ಗಾಯದ ಕಾರಣದಿಂದಾಗಿ ವಿಶ್ವಕಪ್​ನಲ್ಲಿ ಪಾಲ್ಗೊಳ್ಳುವ ಬಗ್ಗೆ ಅನುಮಾನಗಳಿದ್ದವು. ಆದರೆ, ವೈದ್ಯರು ಎರಡು ವಾರದ ವಿಶ್ರಾಂತಿಯಲ್ಲಿ ಅವರು ಫಿಟ್ ಆಗಲಿದ್ದಾರೆ ಎಂದಿದ್ದ ಕಾರಣ ಬಿಸಿಸಿಐ ಕೂಡ ಜಾಧವ್ ಫಿಟ್ನೆಸ್ ವರದಿಗೆ ಕಾದಿತ್ತು. ಟೀಮ್ ಇಂಡಿಯಾ ಫಿಸಿಯೋ ಪ್ಯಾಟ್ರಿಕ್ ಫರ್ಹಾಟ್, ಜಾಧವ್​ರ ಫಿಟ್ನೆಸ್ ವರದಿಯನ್ನು ನೀಡಿದ್ದು ಮಾತ್ರವಲ್ಲ ವಿಶ್ವಕಪ್ ತಂಡಕ್ಕೆ ಫಿಟ್ ಎಂದು ಹೇಳಿದ್ದಾರೆ. ಗುರುವಾರ ಮುಂಬೈನಲ್ಲಿ ಅವರ ಫಿಟ್ನೆಸ್ ಪರೀಕ್ಷೆ ನಡೆದಿತ್ತು. ಐಸಿಸಿ ನಿಯಮದ ಪ್ರಕಾರ, ಮೇ 23ರ ಒಳಗಾಗಿ 15 ಸದಸ್ಯರ ತಂಡದಲ್ಲಿ ಆಯಾ ಕ್ರಿಕೆಟ್ ಮಂಡಳಿ ತನ್ನ ತಂಡದಲ್ಲಿ ಐಸಿಸಿ ಒಪ್ಪಿಗೆ ಇಲ್ಲದೆ ಬದಲಾವಣೆ ಮಾಡಬಹುದಾಗಿದೆ. ಜಾಧವ್ ಫಿಟ್ ಆಗದೇ ಇದ್ದಲ್ಲಿ, ರಿಷಭ್ ಪಂತ್​ರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳಿದ್ದವು. ವಿಶ್ವಕಪ್​ನಲ್ಲಿ ಭಾರತ ತಂಡ ಮೇ 25 ಹಾಗೂ 28ರಂದು ಕ್ರಮವಾಗಿ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ.

Leave a Reply

Your email address will not be published. Required fields are marked *