ಸುರತ್ಕಲ್ ಸದ್ಯಕ್ಕಿಲ್ಲ ಸ್ಥಳೀಯರಿಗೆ ಸುಂಕ

ಮಂಗಳೂರು: ಸುರತ್ಕಲ್ ಮುಕ್ಕದ (ಎನ್‌ಐಟಿಕೆ) ಟೋಲ್‌ಗೇಟ್‌ನಲ್ಲಿ ತಾತ್ಕಾಲಿಕವಾಗಿ ಸ್ಥಳೀಯ ವಾಹನಗಳಿಗೆ ಸುಂಕ ವಿನಾಯಿತಿ ಸಿಗಲಿದೆ.
ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಕಾರ್ಯದರ್ಶಿ ವೈಭವ ದಾಂಗೆ, ಎನ್‌ಎಚ್‌ಎಐ ಪ್ರಾದೇಶಿಕ ಅಧಿಕಾರಿ ಆರ್.ಕೆ.ಸೂರ್ಯವಂಶಿ, ಎನ್‌ಎಚ್‌ಎಐ ಯೋಜನಾ ನಿರ್ದೇಶಕರಾದ ಲಿಂಗೇ ಗೌಡ ಮತ್ತಿತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಂಸದ ನಳಿನ್‌ಕುಮಾರ್ ಕಟೀಲು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಸುರತ್ಕಲ್ ಟೋಲ್‌ಗೇಟನ್ನು ಅಲ್ಲಿಂದ ತೆರವು ಮಾಡಿ, ಬ್ರಹ್ಮರಕೂಟ್ಲು ಟೋಲ್‌ಗೇಟ್ ವಿಲೀನ ಸಾಧ್ಯತೆ ಪ್ರಸ್ತಾಪ ಪರಿಶೀಲಿಸಲಾಗುತ್ತಿದೆ. ತಿಂಗಳೊಳಗೆ ಸ್ವತಃ ಸಚಿವ ಗಡ್ಕರಿಯವರೇ ನಿರ್ಧಾರ ಕೈಗೊಳ್ಳಲಿದ್ದಾರೆ. ಅಲ್ಲಿಯವರೆಗೂ ಹಿಂದಿನಂತೆಯೇ ಸ್ಥಳೀಯರಿಗೆ ವಿನಾಯಿತಿ ಮುಂದುವರಿಯಲಿದೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಸೂಚನೆ: ಸುರತ್ಕಲ್ ಟೋಲ್ಗೇಟ್ ಮುಂದುವರಿಕೆ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೂ ಯಥಾಸ್ಥಿತಿ ಕಾಪಾಡಿಕೊಳ್ಳಲು ಗುತ್ತಿಗೆದಾರರಿಗೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಕೂಡ ಸೂಚನೆ ನೀಡಿದ್ದಾರೆ.
ಗುರುವಾರ ನಾಗರಿಕರ ಟೋಲ್‌ಗೇಟ್ ಹೋರಾಟ ಸಮಿತಿ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸುರತ್ಕಲ್ ಟೋಲ್‌ಗೇಟ್‌ನ್ನು ಹೆಜಮಾಡಿ ಟೋಲ್‌ಗೇಟ್ ಜತೆ ವಿಲೀನಗೊಳಿಸುವ ಪ್ರಸ್ತಾವ ಕಾರ್ಯಸಾಧ್ಯವಲ್ಲ. ಟೋಲ್‌ಗೇಟ್ ರದ್ದುಗೊಳಿಸುವುದೇ ಪರಿಹಾರ ಎಂದು ನಾನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದು, ಸದ್ಯ ಇದು ಪರಿಶೀಲನೆಯಲ್ಲಿದೆ. ರಾಜ್ಯ ಸರ್ಕಾರ ಎರಡು ಟೋಲ್‌ಗೇಟ್‌ಗಳ ವಿಲೀನಕ್ಕೆ ಅನುಮೋದನೆ ನೀಡಿದರೂ ವಾಸ್ತವವಾಗಿ ಇದು ಕಾರ್ಯಸಾಧ್ಯವಲ್ಲ. ಈ ಪ್ರಸ್ತಾಪ ಸದ್ಯ ಪ್ರಾಧಿಕಾರದಲ್ಲೇ ಇದೆ ಎಂದು ತಿಳಿಸಿದರು.

ಸ್ಥಳೀಯ ಕೆಎ19 ಹಾಗೂ ಕೆಎ20 ನೋಂದಣಿಯ ಕಾರುಗಳು ಹಾಗೂ ಇತರ ಕಡೆಯಿಂದ ಇಲ್ಲಿಗೆ ಉದ್ಯೋಗಕ್ಕೆಂದು ಬರುವವರ ಕಾರಿನ ಮಾಲೀಕರು ತಮ್ಮ ಸ್ಥಳೀಯ ಗುರುತು ಚೀಟಿ ತೋರಿಸಿದರೆ ಅವರಿಗೂ ರಿಯಾಯಿತಿ ನೀಡಬೇಕು ಎಂದು ಸಮಿತಿ ಪರವಾಗಿ ಯತೀಶ್ ಬೈಕಂಪಾಡಿ ಆಗ್ರಹಿಸಿದರು.
ಪ್ರಮುಖರಾದ ಗೌರವ್ ಹೆಗ್ಡೆ, ಆರ್ಚಿಬಾಲ್ಡ್ ಮಿನೆಜಸ್, ಸತೀಶ್ ಬೋಳಾರ್, ಶ್ರೀನಿವಾಸ ಕಾಮತ್, ಐಸಾಕ್ ವಾಸ್ ಮುಂತಾದವರಿದ್ದರು.

ಹಕ್ಕೊತ್ತಾಯ ಸಭೆ ನಿರ್ಣಯ: ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಮಾ.1ರಿಂದ ಸ್ಥಳೀಯ ಕೆಎ 19 ನೋಂದಣಿ ವಾಹನಗಳಿಗೆ ಟೋಲ್ ನೀಡಬೇಕೆಂಬ ಹೊಸ ಗುತ್ತಿಗೆದಾರರ ಸೂಚನೆಯನ್ನು ವಿರೋಧಿಸಿ ಟೋಲ್ ನೀಡದಿರಲು ಹಾಗೂ ಈ ಬಗ್ಗೆ ಒತ್ತಡ ಹೇರಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲು ಗುರುವಾರ ಟೋಲ್ ಬಳಿ ನಡೆದ ಹಕ್ಕೊತ್ತಾಯ ಸಭೆಯಲ್ಲಿ ನಿರ್ಧರಿಸಲಾಯಿತು. ಮಾಜಿ ಶಾಸಕ ಕೆ.ವಿಜಯ ಕುಮಾರ್ ಶೆಟ್ಟಿ, ಕೆ.ಅಭಯಚಂದ್ರ ಜೈನ್, ಮಿಥುನ್ ರೈ, ಹರಿಕೃಷ್ಣ ಪುನರೂರು, ಮುನೀರ್ ಕಾಟಿಪಳ್ಳ ಮತ್ತಿತರರಿದ್ದರು.