ಸ್ಥಳೀಯ ವಾಹನಕ್ಕಿಲ್ಲ ಟೋಲ್ ಸಚಿವೆ ಜಯಮಾಲ ಹೇಳಿಕೆ

ಪಡುಬಿದ್ರಿ: ಹೆಜಮಾಡಿಯಲ್ಲಿ ಸ್ಥಳೀಯ ವಾಹನಗಳಿಗೆ ಎಂದಿಗೂ ಟೋಲ್ ಸಂಗ್ರಹಕ್ಕೆ ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಸ್ವಾಗತಿಸಲು ಹೆಜಮಾಡಿಗೆ ಆಗಮಿಸಿದ್ದ ಅವರು, ಹೆಜಮಾಡಿ ಒಳ ರಸ್ತೆಯಲ್ಲಿ ಟೋಲ್ ನಿರ್ಮಿಸಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ಭಾಗದಲ್ಲಿ ಕೆಲವು ಘನ ವಾಹನಗಳು ಮುಖ್ಯರಸ್ತೆಯಲ್ಲಿ ಸಾಗದೆ ಟೋಲ್ ವಂಚಿಸಿ ಒಳ ರಸ್ತೆಯಲ್ಲಿ ಸಾಗುತ್ತಿದ್ದವು. ಅದನ್ನು ನಿಯಂತ್ರಿಸಲು ಒಳ ರಸ್ತೆಗೆ ಟೋಲ್ ಅಳವಡಿಸಲಾಗಿದೆ. ಇದರಿಂದ ಸ್ಥಳೀಯರಿಗೆ ಯಾವುದೇ ತೊಂದರೆಯಿಲ್ಲ. ಒಂದು ವೇಳೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹ ಮಾಡಿದರೆ, ಅದರ ವಿರುದ್ಧ ಹೋರಾಟ ನಡೆಸಲು ತಾನೂ ಸಿದ್ಧಳಿದ್ದೇನೆ ಎಂದರು.
ಟೋಲ್‌ಗೇಟ್ ಬಳಿ ಗೂಡಂಗಡಿಯಿಟ್ಟು ವ್ಯಾಪಾರ ನಡೆಸುತ್ತಿರುವ ಮಹಿಳೆಯರು ಗೂಡಂಗಡಿ ತೆರವು ಮಾಡದಂತೆ ಸಚಿವರಲ್ಲಿ ಮನವಿ ಮಾಡಿದರು. ಅವರನ್ನು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸಮ್ಮುಖ ಕರೆದು, ವ್ಯಾಪಾರ ಮಾಡಿ ಕಷ್ಟದಿಂದ ಜೀವನ ಸಾಗಿಸುವ ಇವರಿಗೆ ಬದಲಿ ವ್ಯವಸ್ಥೆ ಕಲ್ಪಿಸಿ. ಯಾವುದೇ ರೀತಿ ತೊಂದರೆ ಮಾಡದಿರಿ ಎಂದು ಸೂಚನೆ ನೀಡಿದರು.