ಉತ್ತರಪ್ರದೇಶ ಮಾತ್ರವಲ್ಲ ಯಾವುದೇ ರಾಜ್ಯದಲ್ಲೂ ಕಾಂಗ್ರೆಸ್‌ನೊಂದಿಗೆ ಮೈತ್ರಿಯಿಲ್ಲ!

ಲಖನೌ: ಮುಂಬರುವ ಲೋಕಸಭಾ ಚುನಾವಣೆಲೆಯಲ್ಲಿ ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಉತ್ತರ ಪ್ರದೇಶ ಸೇರಿದಂತೆ ಯಾವುದೇ ರಾಜ್ಯಗಳಲ್ಲೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

ಬಿಎಸ್‌ಪಿಯ ಪ್ರಮುಖ ನಾಯಕರೊಂದಿಗೆ ನಡೆದ ಸಭೆ ಬಳಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂದು ನಡೆದ ಸಭೆಯಲ್ಲಿ ಬಿಎಸ್‌ಪಿಯು ಕಾಂಗ್ರೆಸ್‌ನೊಂದಿಗೆ ಯಾವುದೇ ರಾಜ್ಯದಲ್ಲಿಯೂ ಚುನಾವಣೆಗಾಗಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದೆ ಎಂದು ಹೇಳಿದ್ದಾರೆ.

ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷಗಳು ಪ್ರಾಮಾಣಿಕ ಉದ್ದೇಶ ಮತ್ತು ಪರಸ್ಪರ ಗೌರವಗಳಿಂದಾಗಿ ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಉತ್ತರಾಖಂಡ್‌ನಲ್ಲಿ ಮೈತ್ರಿ ಮಾಡಿಕೊಂಡಿವೆ. ರಾಜ್ಯದ ಸಾಮಾಜಿಕ ಬದಲಾವಣೆ ಮತ್ತು ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಹೊಂದಿರುವ ಮೊದಲ ಮತ್ತು ಪರಿಪೂರ್ಣ ಮೈತ್ರಿ ನಮ್ಮದು ಎಂದು ಅವರು ಹೇಳಿದ್ದಾರೆ.

ಹಲವು ಪಕ್ಷಗಳು ಬಿಎಸ್‌ಪಿಯೊಂದಿಗೆ ಮೈತ್ರಿಗಾಗಿ ಉತ್ಸುಕವಾಗಿವೆ. ಆದರೆ ಮಾಯಾವತಿ ಕೇವಲ ಪಕ್ಷದ ಲಾಭಕ್ಕಾಗಿ, ಚುನಾವಣೆ ಲಾಭಕ್ಕಾಗಿ ಏನನ್ನೂ ಮಾಡುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉತ್ತರಪ್ರದೇಶದ ಬದ್ಧವೈರಿಗಳೆಂದೇ ಬಿಂಬಿತವಾಗಿದ್ದ ಬಿಎಸ್‌ಪಿ ಮತ್ತು ಎಸ್‌ಪಿ ಏಪ್ರಿಲ್‌ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಮೈತ್ರಿ ಮಾಡಿಕೊಂಡಿದ್ದು, ಕಾಂಗ್ರೆಸ್‌ನಿಂದ ಎರಡೂ ಪಕ್ಷಗಳು ದೂರವೇ ಉಳಿದಿವೆ. (ಏಜೆನ್ಸೀಸ್)