ಭಾರತ ಸೂಚಿಸಿರುವ 22 ತಾಣಗಳಲ್ಲಿ ಉಗ್ರರ ಶಿಬಿರಗಳಿಲ್ಲ, ಪುಲ್ವಾಮಾ ಮಾಹಿತಿ ಕುರಿತು ಪಾಕ್​ ಪ್ರತಿಕ್ರಿಯೆ

ನವದೆಹಲಿ: ಪುಲ್ವಾಮಾ ಆತ್ಮಾಹುತಿ ದಾಳಿ ಕುರಿತು ಭಾರತ ಕೊಟ್ಟಿರುವ ಮಾಹಿತಿಯನ್ನು ಆಧರಿಸಿ 54 ಜನರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಅವರು ಯಾರೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಆ ದಾಖಲೆಯಲ್ಲಿ ಭಾರತ ತಿಳಿಸಿರುವ 22 ತಾಣಗಳಲ್ಲಿ ಯಾವುದೇ ರೀತಿಯ ಉಗ್ರರ ಶಿಬಿರಗಳು ಕಾರ್ಯಾಚರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಪಾಕ್​ ವಿದೇಶಾಂಗ ಕಚೇರಿಯು ಈ ಮಾಹಿತಿಯನ್ನು ನೀಡಿದೆ. ಪಾಕ್​ ಅಧಿಕಾರಿಗಳು ದಾಖಲೆಯಲ್ಲಿ ತಿಳಿಸಿರುವ ಎಲ್ಲ 22 ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿ ಎಲ್ಲೂ ಕೂಡ ಉಗ್ರರ ಶಿಬಿರಗಳಿಲ್ಲ. ಒಂದು ವೇಳೆ ಯಾರಾದರೂ ಬಯಸಿದರೆ, ಈ ಎಲ್ಲ ತಾಣಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅವಕಾಶ ಮಾಡಿಕಿಒಡಲಾಗುವುದು ಎಂದು ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14ರಂದು ಉಗ್ರನೊಬ್ಬ ನಡೆಸಿದ್ದ ಆತ್ಮಾಹುತಿ ದಾಳಿಯಲ್ಲಿ ಸಿಆರ್​ಪಿಎಫ್​ನ 40 ಯೋಧರು ಹುತಾತ್ಮರಾಗಿದ್ದರು. ಜೈಷ್​ ಎ ಮೊಹಮ್ಮದ್​ ಈ ದಾಳಿಯ ಹೊಣೆಹೊತ್ತುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ಘಟನೆಗೆ ಜೈಷ್​ ಎ ಮೊಹಮ್ಮದ್​ ಸಂಘಟನೆಯನ್ನು ಹೊಣೆಯಾಗಿಸಿ, ಅಗತ್ಯ ಸಾಕ್ಷ್ಯಾಧಾರಗಳೊಂದಿಗೆ ಪಾಕಿಸ್ತಾನಕ್ಕೆ ನೀಡಿತ್ತು. (ಏಜೆನ್ಸೀಸ್​)