ಮುಷ್ಕರಕ್ಕೆ 2ನೇ ದಿನವೂ ಸಿಗದ ಬೆಂಬಲ

 

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಬುಧವಾರ ಎರಡನೇ ದಿನದ ಮುಷ್ಕರಕ್ಕೆ ಜನರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳೂರು ನಗರದಲ್ಲಿ ಬುಧವಾರ ಏಕಕಾಲಕ್ಕೆ ಎರಡು ಮುಷ್ಕರಕ್ಕೆ ಕರೆ ನೀಡಲಾಗಿತ್ತು. ಒಂದೆಡೆ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ, ಬೆಲೆಯೇರಿಕೆ ಇತ್ಯಾದಿ ವಿಚಾರ ಮುಂದಿರಿಸಿ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರು. ಇದೇ ದಿನದಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದಲೂ ವಿಜಯ ಬ್ಯಾಂಕ್‌ನ್ನು ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಳಿಸುವುದನ್ನು ವಿರೋಧಿಸಿ ಮಂಗಳೂರು ನಗರ ಬಂದ್‌ಗೆ ಕರೆ ನೀಡಲಾಗಿತ್ತು.

ಆದರೆ ನಗರದಲ್ಲಿ ಎಂದಿನಂತೆ ಬಸ್, ಆಟೊ ಸಹಿತ ಎಲ್ಲ ವಾಹನಗಳೂ ಸಂಚರಿಸಿದವು. ಕೇರಳದಲ್ಲಿ ಮುಷ್ಕರ ನಡೆದ ಹಿನ್ನೆಲೆಯಲ್ಲಿ ಮಂಗಳೂರು- ಕಾಸರಗೋಡು ಮಧ್ಯೆ ಮಾತ್ರವೇ ಬಸ್ ಸಂಚಾರ ಪೂರ್ಣ ಸ್ಥಗಿತವಾಗಿತ್ತು. ಮಂಗಳೂರು ನಗರದ ಬಂದರು ಪ್ರದೇಶದಲ್ಲಿ ತಲೆಹೊರೆ ಕಾರ್ಮಿಕರು, ಹಮಾಲಿಗಳೂ ಬಂದ್‌ಗೆ ಬೆಂಬಲ ಕೊಟ್ಟಿದ್ದರಿಂದ ಆ ಪ್ರದೇಶದಲ್ಲಿ ಅಂಗಡಿಗಳೂ ಮುಚ್ಚಿದ್ದವು. ಉಳಿದಂತೆ ನಗರ ಸಹಜವಾಗಿತ್ತು.

ಉಡುಪಿಯಲ್ಲೂ ನೀರಸ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಬುಧವಾರ 2ನೇ ದಿನವೂ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಸಗಿ, ಸಿಟಿ ಹಾಗೂ ಸರ್ಕಾರಿ ಬಸ್ ಸಂಚಾರ ಎಂದಿನಂತಿದ್ದು, ವ್ಯಾಪಾರ ವಹಿವಾಟು ಸಹಜ ಸ್ಥಿತಿಯಲ್ಲಿತ್ತು. ಕೆಲವು ಬ್ಯಾಂಕ್‌ಗಳು ಮುಚ್ಚಿದ್ದವು. ಬ್ಯಾಂಕು, ವಿಮೆ, ಬಿಎಸ್ಸೆನ್ನೆಲ್, ಅಂಚೆ, ಕಟ್ಟಡ, ಹೆಂಚು, ಅಂಗನವಾಡಿ, ಅಕ್ಷರ ದಾಸೋಹ, ಆಶಾ ಕಾರ್ಯಕರ್ತರು, ಗೋಡಂಬಿ, ಆಟೋ ಮತ್ತಿತರ ವಿಭಾಗಗಳಿಗೆ ಸೇರಿದ ಕಾರ್ಮಿಕರು 2ನೇ ದಿನದ ಮುಷ್ಕರದಲ್ಲಿ ಭಾಗವಹಿಸಿದ್ದರು.  ಕಾರ್ಮಿಕ ಸಂಘಟನೆಗಳು ಉಡುಪಿ ಮತ್ತು ಕುಂದಾಪುರದಲ್ಲಿ ಪ್ರತಿಭಟನೆ ನಡೆಸಿದವು.

ಪುಟಗೋಸಿ ಪ್ರತಿಭಟನೆ: ಉಡುಪಿ ಪ್ರಧಾನ ಅಂಚೆಕಚೇರಿ ಮುಂಭಾಗ ಬುಧವಾರ ಅಂಚೆ ನೌಕರರೊಬ್ಬರು ಪುಟಗೋಸಿ ಪ್ರತಿಭಟನೆ ಮಾಡಿದ್ದಾರೆ. ವಿನೂತನ ರೀತಿಯಲ್ಲಿ ಪ್ರತಿಭಟಿಸಿ, ಕೇಂದ್ರದ ನೀತಿಗಳ ಕುರಿತು ಅಂಚೆ ನೌಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂಚೆ ನೌಕರರ ಕುರಿತು ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಪ್ರಧಾನ ಅಂಚೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪುಟಗೋಸಿ ಧರಿಸಿ, ಕಿವಿಗೆ ಹೂವಿಟ್ಟುಕೊಂಡು ಕೇಂದ್ರದ ನೀತಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ನೌಕರರನ್ನು ಪುಟಗೋಸಿ ರೀತಿಯಲ್ಲಿ ನಿಲ್ಲಿಸಿದೆ. ಕಿವಿಗೆ ಹೂವಿಟ್ಟು ಯಾಮಾರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.