ರಫೇಲ್​ಗೆ ಸಂಬಂಧಿಸಿದ ಕಾಂಗ್ರೆಸ್​ ಆಡಿಯೋ ಸುಳ್ಳು ಎಂದ ಪರಿಕ್ಕರ್​

ಪಣಜಿ: ರಫೇಲ್ ಹಗರಣದ ದಾಖಲೆಗಳಿಗೆ ಸಂಬಂಧಿಸಿದಂತೆ ಮನೋಹರ್​ ಪರಿಕ್ಕರ್​ ಅವರ ಹೇಳಿಕೆ ಸಂಬಂಧಿಸಿದಂತೆ ಗೋವಾದ ಸಚಿವ ವಿಶ್ವಜಿತ್​ ರಾಣೆ ಮತ್ತು ಅನಾಮಧೇಯ ವ್ಯಕ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋವನ್ನು ಪರಿಕ್ಕರ್​ ಅವರು ನಿರಾಕರಿಸಿದ್ದಾರೆ. ಅಲ್ಲದೆ, ಅದು ತಿರುಚಲ್ಪಟ್ಟದ್ದು ಎಂದು ಟ್ವೀಟ್​ ಮಾಡಿದ್ದಾರೆ.

“ರಫೇಲ್​ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲವೂ ನನ್ನ ಫ್ಲ್ಯಾಟ್​ನಲ್ಲಿವೆ. ನನ್ನ ಬೆಡ್​ರೂಂನಲ್ಲಿಟ್ಟಿದ್ದೇನೆ ” ಎಂದು ರಕ್ಷಣಾ ಇಲಾಖೆ ಮಾಜಿ ಸಚಿವ ಮನೋಹರ್​ ಪರಿಕ್ಕರ್​ ಹೇಳಿದ್ದಾರೆ ಎಂಬ ಸಂಭಾಷಣೆಯುಳ್ಳ ಗೋವಾದ ಸಚಿವ ವಿಶ್ವಜಿತ್​ ರಾಣೆ ಅವರ ಆಡಿಯೋವೊಂದನ್ನು ಕಾಂಗ್ರೆಸ್​ ಇಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿತ್ತು.

ಇದರ ಬೆನ್ನಿಗೇ ಟ್ವೀಟ್​ ಮಾಡಿರುವ ಗೋವಾ ಸಿಎಂ ” ರಫೇಲ್​ ಒಪ್ಪಂದದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದು ಮತ್ತು ಕಾಂಗ್ರೆಸ್​ನ ಸುಳ್ಳುಗಳು ಸುಪ್ರೀಂಕೋರ್ಟ್​ ತೀರ್ಪುನಿಂದ ಬಹಿರಂಗಗೊಂಡ ನಂತರ ಹತಾಷೆಗೊಂಡು ಕಾಂಗ್ರೆಸ್​ ಇಂಥ ತಿರುಚಲ್ಪಟ್ಟ ಆಡಿಯೋಗಳನ್ನು ಬಿಡುಗಡೆ ಮಾಡುತ್ತಿದೆ. ರಫೇಲ್​ಗೆ ಸಂಬಂಧಿಸಿದ ಅಂಥ ಯಾವುದೇ ಚರ್ಚೆ ಕ್ಯಾಬಿನೆಟ್​ ಸಭೆಯಲ್ಲಿ ಆಗಿಲ್ಲ, ” ಎಂದು ಅವರು ತಮ್ಮ ಟ್ವೀಟ್​ನಲ್ಲಿ ಸ್ಪಷ್ಟಪಡಿಸಿದ್ದಾರೆ.