ಹಳ್ಳಿಯಲ್ಲ ಇದು ಕಗ್ಗತ್ತಲ ಹುಬ್ಬಳ್ಳಿ!

blank

ಆನಂದ ಅಂಗಡಿ ಹುಬ್ಬಳ್ಳಿ

ಉತ್ತರ ಕರ್ನಾಟಕದ ಹೆಬ್ಬಾಗಿಲು, ವಾಣಿಜ್ಯ ನಗರಿ ಎಂದೆಲ್ಲ ಕರೆಯಿಸಿಕೊಳ್ಳುವ ಹುಬ್ಬಳ್ಳಿಯ ಅರ್ಧಕ್ಕೂ ಹೆಚ್ಚು ರಸ್ತೆಗಳು ಕತ್ತಲೆಯಲ್ಲಿ ಮುಳುಗಿವೆ.

ಸುಮಾರು ಒಂದೂವರೆ ತಿಂಗಳುಗಳಿಂದ ಬೀದಿದೀಪಗಳು ಬೆಳಗಿಲ್ಲ. ಈ ಅವ್ಯವಸ್ಥೆಯಿಂದ ಹುಬ್ಬಳ್ಳಿ ಪ್ರವೇಶಿಸುವ ಮುಖ್ಯ ರಸ್ತೆಗಳೂ ಹೊರತಾಗಿಲ್ಲ. ಹುಬ್ಬಳ್ಳಿ ಕತ್ತಲಮಯವಾಗಿದ್ದರೂ ಜನಪ್ರತಿನಿಧಿಗಳಾಗಲಿ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲಿ ಗಮನ ಹರಿಸದಿರುವುದು ಅಚ್ಚರಿಯ ಸಂಗತಿ.

ಡ್ರಗ್ಸ್ ಸಾಗಾಟ, ಸೇವನೆ, ಅಕ್ರಮ ವ್ಯವಹಾರ, ಕಾನೂನು ಬಾಹಿರ ಚಟುವಟಿಕೆಗಳಿಗೆ ಹುಬ್ಬಳ್ಳಿಯ ಈ ಕತ್ತಲು ಜಗತ್ತು ಮತ್ತಷ್ಟು ಪ್ರೋತ್ಸಾಹ ನೀಡುವಂತಾಗಿದೆ. ಹುಬ್ಬಳ್ಳಿ ಪ್ರವೇಶಿಸುವ ಪ್ರಮುಖ ರಸ್ತೆಗಳಾದ ಗೋಕುಲ ಬಳಿಯ ದೇಶಪಾಂಡೆ ಫೌಂಡೇಷನ್​ನಿಂದ ತಾರಿಹಾಳವರೆಗಿನ ರಸ್ತೆ, ಸುಳ್ಳ ರಸ್ತೆ, ಗದಗ ರಸ್ತೆ, ಗಬ್ಬೂರ ಬೈಪಾಸ್ ಸಾಗುವ ರಸ್ತೆ, ಸಾಯಿನಗರ ರಸ್ತೆಗಳ ಬೀದಿ ದೀಪಗಳು ಬೆಳಗುತ್ತಿಲ್ಲ.

ಆಮೆಗತಿಯಲ್ಲಿ ಸಾಗುತ್ತಿರುವ ಫ್ಲೈ ಓವರ್ ಕಾಮಗಾರಿಯೂ ಕೆಲ ಮಾರ್ಗದಲ್ಲಿ ಬೀದಿದೀಪಗಳು ಬೆಳಗದೆ ಇರಲು ಪ್ರಮುಖ ಕಾರಣ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಇದ್ದ ವಿದ್ಯುತ್ ಕಂಬಗಳನ್ನು ತೆಗೆದು ಹಾಕಲಾಗಿದೆ. ಇದಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಲ್ಲ. ಚನ್ನಮ್ಮ ವೃತ್ತದಿಂದ ದೇಸಾಯಿ ವೃತ್ತದವರೆಗಿನ ರಸ್ತೆ, ಇಂದಿರಾ ಗಾಜಿನ ಮನೆ ಪಕ್ಕ, ಹೊಸೂರು ವೃತ್ತಗಳ ಸುತ್ತ ಕತ್ತಲೆಯದ್ದೇ ಸಾಮ್ರಾಜ್ಯ. ಹೀಗಾಗಿ, ಈ ಪ್ರದೇಶದಲ್ಲಿ ರಾತ್ರಿ ಹೊತ್ತು ಅನೈತಿಕ ಚಟುವಟಿಕೆ, ಕಾನೂನು ಬಾಹಿರ ಕಾರ್ಯಗಳು ನಡೆದರೂ ತಕ್ಷಣ ಬೆಳಕಿಗೆ ಬರುವುದೇ ಇಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂಬರುವ ದೀಪಾವಳಿ ಹಬ್ಬವನ್ನೂ ಹುಬ್ಬಳ್ಳಿಯವರು ಕತ್ತಲಲ್ಲೇ ಆಚರಿಸುವುದು ಅನಿವಾರ್ಯ.

ಎಲ್​ಇಡಿ ಎಲ್ಲಿ ?

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್​ಇಡಿ ಅಳವಡಿಸುವ ಯೋಜನೆ ಇದುವರೆಗೆ ಜಾರಿಗೆ ಬಂದಿಲ್ಲ. 2022ರಲ್ಲಿಯೇ ಎಲ್​ಇಡಿ ಪ್ರೊಜೆಕ್ಟ್ ಸಿದ್ಧಪಡಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೂಲಗಳ ಪ್ರಕಾರ ಈ ಯೋಜನೆಯ ಫೈಲ್ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಕಚೇರಿಯಲ್ಲೇ ಕಳೆದ ಎರಡು ವರ್ಷಗಳಿಂದ ಇದೆ. ಇದಕ್ಕೆ ಹಸಿರು ನಿಶಾನೆ ಸಿಕ್ಕಿಲ್ಲ. ಈ ಯೋಜನೆ ಜಾರಿಗೊಂಡರೆ ಪಾಲಿಕೆ ವ್ಯಾಪ್ತಿಯ 75 ಸಾವಿರ ವಿದ್ಯುತ್ ಕಂಬಗಳಲ್ಲಿ ಎಲ್​ಇಡಿ ಬಲ್ಬ್​ಗಳು ರಾರಾಜಿಸುತ್ತವೆ. ಇದರಿಂದ ಹೆಚ್ಚು ಬೆಳಕು ರಸ್ತೆ ಮೇಲೆ ಬೀಳುವ ಜತೆಗೆ ವಿದ್ಯುತ್ ಬಿಲ್ ಸಹ ಕಡಿಮೆ ಬರುತ್ತದೆ. ನಗರಾಭಿವೃದ್ಧಿ ಇಲಾಖೆಯಿಂದ ಈ ಯೋಜನೆ ಅನುಮೋದನೆಗೊಂಡ ನಂತರ ಪಾಲಿಕೆ ಟೆಂಡರ್ ಕಾರ್ಯಕ್ಕೆ ಚಾಲನೆ ನೀಡುತ್ತದೆ. ಪಿಪಿಪಿ ಆಧಾರದ ಈ ಯೋಜನೆಯಡಿ ಗುತ್ತಿಗೆದಾರರು ಬೀದಿದೀಪಗಳಲ್ಲಿ ಎಲ್​ಇಡಿ ಲೈಟ್ ಅಳವಡಿಸಿ, 7 ವರ್ಷ ನಿರ್ವಹಣೆ ಮಾಡಬೇಕು. ನಂತರ ಪಾಲಿಕೆಗೆ ಹಸ್ತಾಂತರಿಸಬೇಕು.

ಬಿಆರ್​ಟಿಎಸ್ ಇಕ್ಕೆಲಗಳ ಬೀದಿದೀಪ

ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿ-ಧಾರವಾಡ ಮಧ್ಯೆ ನಿರ್ವಿುಸಿರುವ ಬಿಆರ್​ಟಿಎಸ್ ರಸ್ತೆಯಲ್ಲಂತೂ ಬೀದಿ ದೀಪಗಳಿಲ್ಲದೇ ಅದೆಷ್ಟೋ ದಿನಗಳು ಕಳೆದಿವೆ. ಈ ರಸ್ತೆ ಇಕ್ಕೆಲಗಳಲ್ಲಿನ ಬೀದಿದೀಪಗಳ ನಿರ್ವಹಣೆ ಜವಾಬ್ದಾರಿ ಬಿಆರ್​ಟಿಎಸ್​ನವರದ್ದೇ ಆಗಿದೆ. ಇಲ್ಲಿನ ಬೀದಿದೀಪಗಳು ಇದುವರೆಗೆ ಮಹಾನಗರ ಪಾಲಿಕೆಗೆ ಹಸ್ತಾಂತರಗೊಂಡಿಲ್ಲ.

ದೇಶಪಾಂಡೆ ಫೌಂಡೇಶನ್​ನಿಂದ ತಾರಿಹಾಳವರೆಗಿನ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಇಲ್ಲ. ಕಂಬ ಹಾಗೂ ವಿದ್ಯುತ್ ದೀಪ ಅಳವಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಲ್​ಇಡಿ ಪ್ರೊಜೆಕ್ಟ್ ಫೈಲ್ ಸರ್ಕಾರದ ಬಳಿ ಇದೆ. ಕೆಲ ದಿನಗಳಲ್ಲಿ ಸರ್ಕಾರ ಅನುಮತಿ ನೀಡುವ ನಿರೀಕ್ಷೆ ಇದೆ.

-ಎಸ್.ಎನ್. ಗಣಾಚಾರಿ, ಕಾರ್ಯನಿರ್ವಾಹಕ ಇಂಜಿನಿಯರ್, ಹು-ಧಾ ಮಹಾನಗರ ಪಾಲಿಕೆ

ಬೀದಿದೀಪಗಳ ನಿರ್ವಹಣೆಯನ್ನು ವಲಯವಾರು ಗುತ್ತಿಗೆ ನೀಡಲಾಗಿದೆ. ಆದರೂ, ಈ ಕುರಿತು ಮತ್ತೊಮ್ಮೆ ಪರಿಶೀಲಿಸುತ್ತೇನೆ.

– ರಾಮಪ್ಪ ಬಡಿಗೇರ, ಹು-ಧಾ ಮೇಯರ್

Share This Article

ಮಂಗಳನ ಸಂಚಾರದಿಂದ ರೂಪುಗೊಳ್ಳಲಿದೆ ಮಂಗಳ-ಪುಷ್ಯ ಯೋಗ! ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನಗಳು ಹಾಗೂ ಗ್ರಹಗಳ ಸಂಚಾರವೂ ವ್ಯಕ್ತಿಯು ಜನಿಸಿದ…

ನಿಮ್ಮನೆ ಮುದ್ದಿನ ನಾಯಿ ನಿಮ್ಮ ಮುಖವನ್ನು ನೆಕ್ಕುತ್ತದೆಯೇ? ಇರಲಿ ಎಚ್ಚರ.. Dog Licking Human Face

Dog Licking Human Face: ಆಧುನಿಕ ಜೀವನದಲ್ಲಿ ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಮರಿಗಳನ್ನು ಮನೆ…

ತಾಮ್ರದ ಉಂಗುರ ಧರಿಸುವುದು ಒಳ್ಳೆಯದಾ? ಕೆಟ್ಟದ್ದಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Copper Ring

Copper Ring : ಅನೇಕ ಜನರು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಕೆಲವರಿಗೆ ಇದು ಫ್ಯಾಶನ್​ ಆಗಿದ್ದಾರೆ,…