ಹಾಕಿ ಟೂರ್ನಿಗಿಲ್ಲ ಮೈದಾನ

ಭರತ್ ಶೆಟ್ಟಿಗಾರ್ ಮಂಗಳೂರು

ಸ್ಟೇಟ್‌ಬ್ಯಾಂಕ್ ಬಳಿಯ ನಗರದ ಪ್ರಮುಖ ಹಾಕಿ ಮೈದಾನ ಬಸ್ ನಿಲ್ದಾಣವಾಗಿ ಮಾರ್ಪಾಡಾಗಿ ದಶಕಗಳೇ ಕಳೆದಿವೆ. ಈ ನಡುವೆ ಸಣ್ಣ ಮಟ್ಟದಲ್ಲಿ ಹಾಕಿ ಟೂರ್ನಿಗಳು ನಡೆಯುತ್ತಿದ್ದ ಲಾಲ್‌ಭಾಗ್ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿಯೂ ಈ ಬಾರಿ ಪಂದ್ಯಾವಳಿ ಆಯೋಜಿಸಲು ಅಸಾಧ್ಯವಾಗಿದೆ.
ಫೆ.18ರಿಂದ 20ರವರೆಗೆ ಜಿಲ್ಲಾ ಮಟ್ಟದ ಮುಕ್ತ ಹಾಕಿ ಟೂರ್ನಿ ಆಯೋಜಿಸಲು ಹಾಕಿ ದಕ್ಷಿಣ ಕನ್ನಡ ದಿನಾಂಕ ನಿಗದಿಪಡಿಸಿದೆ. ಆದರೆ ಪ್ರಸ್ತುತ ಪಂದ್ಯಾವಳಿ ನಡೆಸಲು ಮೈದಾನ ಇಲ್ಲದಂತಾಗಿದೆ. ಪ್ರತಿ ವರ್ಷ ಪಂದ್ಯಾವಳಿ ಆಯೋಜಿಸಲಾಗುತ್ತಿದ್ದ ಕರಾವಳಿ ಉತ್ಸವ ಮೈದಾನದಲ್ಲಿ ಒಳಾಂಗಣ ಕಬಡ್ಡಿ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. ಅತ್ತ ಸ್ವಂತ ಕ್ರೀಡಾಂಗಣ ಇಲ್ಲದೆ, ಇತ್ತ ತಾತ್ಕಾಲಿಕವಾಗಿ ಆಟಕ್ಕೆ ಉಪಯೋಗಿಸುತ್ತಿದ್ದ ಕ್ರೀಡಾಂಗಣವೂ ಹೋಗಿ ಗಾಯದ ಮೇಲೆ ಬರೆ ಹಾಕಿದಂತಾಗಿದೆ.

ಖಾಸಗಿಯವರ ಮೊರೆ: ಹಾಕಿ ಪಂದ್ಯಾವಳಿ ಆಯೋಜಿಸಲು ಮೈದಾನದ ಇಲ್ಲದಿರುವುದರಿಂದ ಹಾಕಿ ದಕ್ಷಿಣ ಕನ್ನಡ ಖಾಸಗಿಯವರ ಮೊರೆ ಹೋಗಿದೆ. ಈ ಬಾರಿ ಅತ್ತಾವರ ಕೆಎಂಸಿ ಮೈದಾನದಲ್ಲಿ ಪಂದ್ಯಾಟ ಆಯೋಜಿಸಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ, ಈ ಬಾರಿ ಅವಕಾಶ ಕೊಟ್ಟಿದ್ದಾರೆ. ಮುಂದಿನ ವರ್ಷ ಬೇರೆ ಜಾಗ ನೋಡಬೇಕಿದೆ ಹಾಕಿ ತರಬೇತಿಗೆ ಮೈದಾನದ ಕೊರತೆಯುಂಟಾಗಿದ್ದು, ಇದಕ್ಕೂ ಖಾಸಗಿಯವರನ್ನು ಅವಲಂಬಿಸಬೇಕಾಗಿದೆ. ಎರಡು ವರ್ಷ ಆಯೋಜಿಸಿದ ಬಾಲಕ-ಬಾಲಕಿಯರ ಮಿನಿ ಹಾಕಿ ಪಂದ್ಯಾವಳಿಯೂ ನಡೆದಿಲ್ಲ ಎನ್ನುತ್ತಾರೆ ಹಾಕಿ ಅಸೋಸಿಯೇಶನ್ ಸದಸ್ಯ ಡಾ. ಜೆರಾಲ್ಡ್ ಸಂತೋಷ್ ಡಿಸೋಜ.

ಕಬಡ್ಡಿ ಸ್ಟೇಡಿಯಂ ನಿರ್ಮಾಣ: ಮಹಾನಗರ ಪಾಲಿಕೆ ಕರಾವಳಿ ಉತ್ಸವ ಮೈದಾನದಲ್ಲಿ ಕಬಡ್ಡಿ ಕ್ರೀಡಾಂಗಣಕ್ಕೆ ನಿರ್ಮಿಸಲು ಮುಂದಾಗಿದೆ. 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣ 3 ಕೋರ್ಟ್, ಒಂದು ಸಾವಿರಕ್ಕೂ ಅಧಿಕ ಆಸನದ ಗ್ಯಾಲರಿ, ಶೌಚಗೃಹ, ವಿಶ್ರಾಂತಿ ಕೊಠಡಿ ಸೌಲಭ್ಯ ಹೊಂದಲಿದೆ. ಇದು ಹಾಕಿ ಆಟಗಾರರ ವಿರೋಧಕ್ಕೆ ಕಾರಣವಾಗಿದೆ. ಕಬಡ್ಡಿಗೆ ಉರ್ವ ಮಾರ್ಕೆಟ್ ಬಳಿ ಒಳಾಂಗಣ ಸ್ಟೇಡಿಯಂ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದು, ಅಲ್ಲಿ ಸ್ಟೇಡಿಯಂದ ನಿರ್ಮಾಣವಾಗುವಾಗ ಕರಾವಳಿ ಉತ್ಸವ ಮೈದಾನದಲ್ಲಿ ನಿರ್ಮಾಣದ ಅಗತ್ಯವೇನು?. ಸದ್ಯ ಮ್ಯಾಟ್ ಹಾಕಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯಾಟ ಆಯೋಜಿಸಬಹುದು. ಆದರೆ ಹಾಕಿ ಒಳಾಂಗಣದಲ್ಲಿ ಆಡಲು ಸಾಧ್ಯವಿಲ್ಲ, ಮೈದಾನವೇ ಬೇಕು ಎಂಬುದು ಹಾಕಿ ಅಸೋಸಿಯೇಶನ್ ಸದಸ್ಯರ ಮಾತಾಗಿದೆ.

ಈ ಬಾರಿ ಮಹಿಳಾ ಹಾಕಿ: ಅಲೋಶಿಯಸ್ (ಎ), (ಬಿ), ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಹ್ಯಾದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಎನ್‌ಐಟಿಕೆ ಸುರತ್ಕಲ್, ಮಂಗಳೂರು ವಿವಿ ಕ್ಯಾಂಪಸ್ ತಂಡಗಳು ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಜತೆಗೆ ಈ ಬಾರಿ ಧವಳಾ ಕಾಲೇಜು, ಆಳ್ವಾಸ್, ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಮಹಿಳಾ ತಂಡಗಳೂ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಕರಾವಳಿ ಉತ್ಸವ ಮೈದಾನದಲ್ಲಿ ಮಿನಿಹಾಕಿ, ಕೋಚಿಂಗ್ ಕ್ಯಾಂಪ್ ಸೇರಿದಂತೆ ಜಿಲ್ಲಾ ಮಟ್ಟದ ಹಾಕಿ ಪಂದ್ಯಾಟ ನಡೆಸಲಾಗುತ್ತಿತ್ತು. ಈ ಬಾರಿ ಇದ್ದ ಸಣ್ಣ ಮೈದಾನವೂ ನಮ್ಮ ಕೈಬಿಟ್ಟು ಹೋಗಿದೆ. ಈ ಬಾರಿ ಕೆಎಂಸಿಯವರು ಅವಕಾಶ ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾಣುತ್ತಿದೆ.
ಡಾ. ಜೆರಾಲ್ಡ್ ಸಂತೋಷ್ ಡಿಸೋಜ ಹಾಕಿ ದ.ಕ. ಪದಾಧಿಕಾರಿ