ಹೆಣ್ಣುಮಕ್ಕಳಿಗೆಲ್ಲಿದೆ ರಕ್ಷಣೆ?

| ವರುಣ ಹೆಗಡೆ/ಅವಿನಾಶ ಮೂಡಂಬಿಕಾನ

ಬೆಂಗಳೂರು: ಅಭಿವೃದ್ಧಿ ಕಾರಣಗಳಿಗೆ ವಿಶ್ವಭೂಪಟದಲ್ಲಿ ಗುರುತಿಸಿಕೊಳ್ಳುತ್ತಿರುವ ಕರ್ನಾಟಕ, ಮಹಿಳೆಯರ ನಾಪತ್ತೆ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕುಖ್ಯಾತಿಗೂ ಸಿಲುಕುತ್ತಿದೆ. ವೇಶ್ಯಾವಾಟಿಕೆ ಜಾಲ, ಪ್ರೀತಿ-ಪ್ರೇಮ, ಕೌಟುಂಬಿಕ ಕಲಹದಂತಹ ಕಾರಣಗಳಿಗೆ ರಾಜ್ಯದಲ್ಲಿ ಪ್ರತಿನಿತ್ಯ 40 ಹೆಣ್ಮಕ್ಕಳು ಕಣ್ಮರೆಯಾಗುತ್ತಿದ್ದರೆ, ಮತ್ತೊಂದೆಡೆ ಸರಾಸರಿ 3 ಕಂದಮ್ಮಗಳು ಲೈಂಗಿಕ ದೌರ್ಜನ್ಯಕ್ಕೀಡಾಗುತ್ತಿರುವ ಆಘಾತಕಾರಿ ಅಂಕಿಅಂಶಗಳು ಬೆಳಕಿಗೆ ಬಂದಿವೆ.

ನಾಪತ್ತೆಯಾಗುವ ಹೆಣ್ಣು ಮಕ್ಕಳ ಪೈಕಿ 14ರಿಂದ 40 ವರ್ಷ ಒಳಗಿನವರೇ ಹೆಚ್ಚು. ಸಾಮಾಜಿಕ ಮಾಧ್ಯಮಗಳ ಗೀಳು, ಸಿನಿಮಾ ಮತ್ತು ಧಾರಾವಾಹಿಗಳ ಪ್ರಭಾವದಿಂದಾಗಿ ಪ್ರೀತಿ-ಪ್ರೇಮದ ಪಾಶಕ್ಕೆ ಸಿಲುಕಿ ಮನೆ ಬಿಟ್ಟು ಹೋಗಿ ಮದುವೆಯಾಗಿ ವಾಪಸಾಗುವುದು ಒಂದೆಡೆಯಾದರೆ, ಉದ್ಯೋಗ ಹಾಗೂ ಹಣದ ಆಮಿಷವೊಡ್ಡಿ ಹೆಣ್ಮಕ್ಕಳನ್ನು ಕರೆದೊಯ್ದು ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕಿಸುವ ಜಾಲಗಳೂ ಸಕ್ರಿಯವಾಗಿವೆ.

ಶವವಾದ್ರೂ ಗೊತ್ತಾಗಲ್ಲ!: 2018 ಸೆಪ್ಟೆಂಬರ್​ವರೆಗೆ ರಾಜ್ಯದಲ್ಲಿ 1,640 ಅಪರಿಚಿತ ಶವಗಳು ಸಿಕ್ಕಿವೆ. 2017ರಲ್ಲಿ 1,897 ಅಪರಿಚಿತ ಶವ ಪತ್ತೆ ಪ್ರಕರಣ ಬೆಳಕಿಗೆ ಬಂದಿವೆ. ಇವುಗಳಲ್ಲಿ ಅರ್ಧಕ್ಕರ್ಧ ಮಹಿಳೆಯರ ಶವಗಳಾಗಿರುತ್ತವೆ. ಸದ್ಯ ಪೊಲೀಸರು ಅಪರಿಚಿತ ಶವಗಳ ವಾರಸುದಾರರಿಗಾಗಿ ಒಂದು ಕಾಲಾವಧಿವರೆಗೆ ಹುಡುಕಾಟ ನಡೆಸಿ, ಪತ್ತೆಯಾಗದಿದ್ದರೆ ಅಂತ್ಯಸಂಸ್ಕಾರ ನಡೆಸುತ್ತಾರೆ. ಇದರ ಬದಲು ಕಣ್ಮರೆ ಆಗಿರುವ ಯುವತಿಯರು ಹಾಗೂ ಅಪರಿಚಿತ ಶವಗಳ ಕ್ರಮಬದ್ಧ ಹೋಲಿಕೆ ನಡೆಸುವ ವ್ಯವಸ್ಥೆ ಜಾರಿಗೆ ತಂದರೆ, ಅನೇಕ ಪ್ರಕರಣಗಳು ಇತ್ಯರ್ಥವಾಗುವ ಸಾಧ್ಯತೆ ಇರುತ್ತದೆ.

ಹೆಣ್ಣುಮಕ್ಕಳ ಜಿಲ್ಲಾವಾರು ನಾಪತ್ತೆ ವಿವರ

# ಉತ್ತರ ಕನ್ನಡ: ಜ.1ರಿಂದ ಅಕ್ಟೋಬರ್​ಗೆ 176 ಮಂದಿ ನಾಪತ್ತೆ.

# ಶಿವಮೊಗ್ಗ: ಎರಡು ವರ್ಷದಲ್ಲಿ 689 ನಾಪತ್ತೆ ಪ್ರಕರಣ ದಾಖಲು. ಇದರಲ್ಲಿ ಶೇ.60 ಪ್ರೇಮ ಪ್ರಕರಣಗಳೇ ಆಗಿವೆ.

# ಚಿಕ್ಕಮಗಳೂರು: 2018ರಲ್ಲಿ 162 ನಾಪತ್ತೆ ಪ್ರಕರಣ ದಾಖಲು. 113 ಪ್ರಕರಣ ಪತ್ತೆಯಾಗಿವೆ.

# ರಾಮನಗರ: 2018ರಲ್ಲಿ 196 ಪ್ರಕರಣಗಳು ದಾಖಲಾಗಿದ್ದು, 83 ಪ್ರಕರಣಗಳು ಪತ್ತೆಯಾಗಿವೆ.

# ಬೆಂ.ಗ್ರಾಮಾಂತರ: 3 ವರ್ಷದಲ್ಲಿ 642 ನಾಪತ್ತೆ ಪ್ರಕರಣ. 449 ಕೇಸ್ ಪತ್ತೆಯಾಗಿವೆ.

# ದಾವಣಗೆರೆ: 2018 ಜುಲೈ ಅಂತ್ಯಕ್ಕೆ 160 ಪ್ರಕರಣ. 153 ಪತ್ತೆಯಾಗಿವೆ.

# ಉಡುಪಿ: 2018ರಲ್ಲಿ 62 ಮಂದಿ ನಾಪತ್ತೆ, 54 ಮಂದಿ ಪತ್ತೆ.

# ದಕ್ಷಿಣ ಕನ್ನಡ : 2018 ಅಕ್ಟೋಬರ್​ವರೆಗೆ 78 ಮಂದಿ ನಾಪತ್ತೆ.

# ಮಂಡ್ಯ: ಜನವರಿಯಿಂದ ಅಕ್ಟೋಬರ್​ವರೆಗೆ 307 ಜನ ನಾಪತ್ತೆ. ಇದರಲ್ಲಿ 18 ವರ್ಷದೊಳಗಿನ 67 ಬಾಲಕಿಯರಿದ್ದಾರೆ.

# ಮಡಿಕೇರಿ: 2018ರಲ್ಲಿ 102 ನಾಪತ್ತೆ ಪ್ರಕರಣ ದಾಖಲು.

# ಹುಬ್ಬಳ್ಳಿ-ಧಾರವಾಡ: ಜ.1ರಿಂದ ಅಕ್ಟೋಬರ್​ವರೆಗೆ 68 ಮಹಿಳೆಯರು ನಾಪತ್ತೆ. 15 ಬಾಲಕಿಯರ ಅಪಹರಣ

# ಚಿಕ್ಕಬಳ್ಳಾಪುರ: ಕಳೆದ 2 ವರ್ಷದಲ್ಲಿ ಮುಂಬೈ ವೇಶ್ಯಾವಾಟಿಕೆ ಜಾಲಕ್ಕೆ ಐವರ ಮಾರಾಟ.

# ಬೆಳಗಾವಿ: 2018ರಲ್ಲಿ 168 ಮಹಿಳೆಯರು ಕಾಣೆ. ಮಹಾರಾಷ್ಟ್ರ, ಗೋವಾಕ್ಕೆ ರವಾನೆ.

ನಾಪತ್ತೆಗೆ ಕಾರಣ

  1. ಪ್ರೀತಿಸಿ ಮನೆಬಿಟ್ಟು ಓಡಿಹೋಗುವುದು
  2. ಮಾನವ ಕಳ್ಳಸಾಗಣೆ ಜಾಲಕ್ಕೆ ಸಿಕ್ಕಿಕೊಳ್ಳುವುದು
  3. ಕೌಟುಂಬಿಕ ಕಲಹ, ಅನೈತಿಕ ಸಂಬಂಧದ ಹಿನ್ನೆಲೆ
  4. ಇಷ್ಟವಿಲ್ಲದ ಮದುವೆ, ವರದಕ್ಷಿಣೆ ಕಿರುಕುಳ
  5. ಪಾಲಕರ ಶಿಸ್ತಿನಿಂದ ಬೇಸತ್ತು ಪರಾರಿ
  6. ಉದ್ಯೋಗ, ಹಣದ ಆಮಿಷಕ್ಕೆ ಸಿಲುಕಿ ವೇಶ್ಯಾವಾಟಿಕೆ ಜಾಲಕ್ಕೆ ಬೀಳುವುದು

ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. 60 ದಿನದೊಳಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕೆಂಬ ನಿಯಮವನ್ನು ಪಾಲಿಸಲಾಗುತ್ತಿದೆ.

| ಡಾ.ಎಂ.ಎ.ಸಲೀಂ ಎಡಿಜಿಪಿ (ಅಪರಾಧ)

ಕಾನೂನಿನ ಅಡಿಯಲ್ಲಿ ತಪ್ಪಿತಸ್ಥರಿಗೆ ಶೀಘ್ರವಾಗಿ ಶಿಕ್ಷೆಯಾಗದಿರುವುದೇ ಅತ್ಯಾಚಾರ ಪ್ರಕರಣ ಹೆಚ್ಚಲು ಕಾರಣ. ಈಗ ಜನರಲ್ಲಿ ಜಾಗೃತಿ ಮೂಡುವ ಜತೆಗೆ ಮಕ್ಕಳಲ್ಲಿ ಸಹ ಯಾವುದು ಒಳ್ಳೆಯ ಹಾಗೂ ಯಾವುದು ಕೆಟ್ಟ ಸ್ಪರ್ಶ ಎನ್ನುವುದು ಅರಿವಿಗೆ ಬರುತ್ತಿದೆ.

| ವೈ.ಮರಿಸ್ವಾಮಿ ಅಧ್ಯಕ್ಷ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗ

ಕಂದಮ್ಮಗಳ ಮೇಲೆ ದೌರ್ಜನ್ಯ

2014ರಿಂದ 2018ರವರೆಗೆ ರಾಜ್ಯದಲ್ಲಿ 5220 ಬಾಲಕಿಯರ ಮೇಲೆ ಅತ್ಯಾಚಾರ ನಡೆದಿರುವುದು ಆರ್​ಟಿಐ ಮಾಹಿತಿಯಿಂದ ಬಹಿರಂಗವಾಗಿದೆ. ಅಷ್ಟೇ ಅಲ್ಲ, ಕಾಮುಕರು 28 ಮಕ್ಕಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. 2014ರಲ್ಲಿ 1015 ಮಕ್ಕಳ ಮೇಲೆ ಅತ್ಯಾಚಾರ ನಡೆದಿದ್ದು, 6 ಬಾಲಕಿಯರನ್ನು ರೇಪ್ ಮಾಡಿ ಸಾಯಿಸಲಾಗಿದೆ. 2015ರಲ್ಲಿ 1013 (8 ಸಾವು), 2016ರಲ್ಲಿ 1192 (3 ಸಾವು), 2017ರಲ್ಲಿ 1274 (7 ಸಾವು), 2018ರಲ್ಲಿ ಮೊದಲ 7 ತಿಂಗಳಲ್ಲಿ 726 (4 ಸಾವು) ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ.

ಎಲ್ಲೆಲ್ಲಿ ಅತ್ಯಾಚಾರ: · ಮನೆಯಲ್ಲಿ ಯಾರು ಇಲ್ಲದಾಗ ಸಂಬಂಧಿಗಳಿಂದಲೇ ಕೃತ್ಯ· ಅಕ್ಕಪಕ್ಕದವರು ಮನೆಗೆ ಕರೆದು ದೌರ್ಜನ್ಯ · ಶಾಲಾ ಬಸ್ಸು ಹಾಗೂ ಆಟೋ ಚಾಲಕರಿಂದ · ಮಕ್ಕಳು ಶಾಲೆಗೆ ತೆರಳುವ ವೇಳೆ ನಿರ್ಜನ ಪ್ರದೇಶ

ಹೊಸ ಕೇಸ್​ಗಳ ಸರಣಿ: ಮಕ್ಕಳ ಅತ್ಯಾಚಾರ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪೋಕ್ಸೋ ವಿಶೇಷ ನ್ಯಾಯಾಲಯ ಸ್ಥಾಪಿಸಿದ್ದು, ಸದ್ಯ 964 ಪ್ರಕರಣಗಳು ವಿಚಾರಣಾ ಹಂತದಲ್ಲಿದೆ. 3 ವರ್ಷಗಳ ಹಿಂದೆ ಆರಂಭವಾದ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವನ್ನು ಇತ್ಯರ್ಥಪಡಿಸುವಷ್ಟರಲ್ಲಿ ಮತ್ತೆ ಅಷ್ಟೇ ಪ್ರಮಾಣದಲ್ಲಿ ಪ್ರಕರಣ ದಾಖಲಾಗುತ್ತಿವೆ. ಕನಿಷ್ಠ ತಿಂಗಳಿಗೆ 4 ರಂತೆ ಪ್ರಕರಣ ವಿಚಾರಣೆಗೆ ಬರುತ್ತವೆ.

ರೇಪ್​ಗೆ ಶಿಕ್ಷೆ ಏನು?: · 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಮರಣ ದಂಡನೆ. · 18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಕನಿಷ್ಠ 10 ವರ್ಷ ಕಠಿಣ ಶಿಕ್ಷೆ. · 16 ವರ್ಷದೊಳಗಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರೆ ಕನಿಷ್ಠ 20 ವರ್ಷ ಶಿಕ್ಷೆ. · ಪೊಲೀಸರು ಮಕ್ಕಳ ಮೇಲೆ ದೌರ್ಜನ್ಯ ಎಸಗಿರುವುದು ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಶಿಕ್ಷೆ.

5 ವರ್ಷದಲ್ಲಿ ಹೆಚ್ಚು ರೇಪ್ ನಡೆದ ಜಿಲ್ಲೆ

1.ಬೆಂಗಳೂರು 1232

2.ಬೆಳಗಾವಿ 279

3.ಶಿವಮೊಗ್ಗ 269

4.ಕಲಬುರ್ಗಿ 188

5.ದಾವಣಗೆರೆ 182

6.ಚಿಕ್ಕಬಳ್ಳಾಪುರ 170

7.ಹಾಸನ 168

8.ತುಮಕೂರು 166

9.ಬಳ್ಳಾರಿ 161

10.ಮಂಡ್ಯ 160