ಗ್ರಾಮೀಣ ಸಂಚಾರ ಸಂಕಷ್ಟ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ 

ನಡೆದಾಡುವ ವಿಶ್ವಕೋಶ ದಿ.ಡಾ.ಶಿವರಾಮ ಕಾರಂತ ಸಂಚರಿಸಿದ ರಸ್ತೆ, ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ ಹಾಗೂ ಮೊಟ್ಟಮೊದಲ ಬಾರಿ ಪಂಚಾಯಿತಿ ಮಟ್ಟದಲ್ಲಿ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡುವ ಮೂಲಕ ಗಮನ ಸೆಳೆದ ಕೋಟದ ಗ್ರಾಮೀಣ ರಸ್ತೆಗಳು ಪಂಚಾಯತ್‌ರಾಜ್ ವ್ಯವಸ್ಥೆಯನ್ನೇ ಅಣಕಿಸುವಷ್ಟು ಹಾಳು ಬಿದ್ದು ಹೋಗಿವೆ.

ಮುಂಗಾರು ಆಗಮನದೊಂದಿಗೆ ರಸ್ತೆಗಳ ಬಣ್ಣ ಬದಲಾಗಿದೆ. ಪಾದಚಾರಿಗಳ ಸಂಚಾರ ನಿತ್ಯ ನರಕ. ಶಾಲಾ ಮಕ್ಕಳಂತೂ ರಸ್ತೆಯಲ್ಲಿ ಯಾವ ವಾಹನ ಬರುತ್ತದೋ, ಮತ್ತೆಲ್ಲಿ ಕೆಸರು ನೀರು ತಾಕುತ್ತದೋ ಎಂಬ ಆತಂಕದಲ್ಲೇ ಸಂಚಾರ ಮಾಡಬೇಕು. ಇದೇನು ಕೆಸರು ಗದ್ದೆಯೋ… ರಸ್ತೆಯೋ… ಎನ್ನುವಷ್ಟರ ಮಟ್ಟಿಗೆ ಹದಗೆಟ್ಟಿದೆ.

ಮಣೂರು ಪಡುಕರೆ, ಕೊಮೆ, ಕೊರವಡಿ ರಸ್ತೆ ಗೋಳು ನರಕ ಸದೃಶ್ಯ. ಎಷ್ಟೇ ಪ್ರತಿಭಟನೆ ನಡೆಸಿದರೂ, ಹೋರಾಟದ ಮೂಲಕ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ. ರಸ್ತೆಗಳ ಸ್ಥಿತಿಗತಿ ಬಗ್ಗೆ ಮಾಧ್ಯಮಗಳು ಎಚ್ಚರಿಸಿದರೂ ರಸ್ತೆ ಚಿತ್ರಣ ಬದಲಾಗಿಲ್ಲ. ರಸ್ತೆ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಶಾಸಕರಿಗೆ ಹಾಗೂ ಗ್ರಾಪಂ ಪ್ರತಿನಿಧಿಗಳಿಗೆ ಮನವರಿಕೆ ಮಾಡಿದ್ದರೂ, ರಸ್ತೆಗೆ ತಾತ್ಕಾಲಿಕ ಡಾಂಬರು ಕಾಮಗಾರಿ ಅಥವಾ ಕ್ರಷರ್ ಮಣ್ಣು ಹಾಕಿ ವ್ಯವಸ್ಥೆ ಕಲ್ಪಿಸುವ ಅವಕಾಶ ಇದ್ದರೂ ಯಾವುದೂ ಆಗಿಲ್ಲ.

ಅವ್ಯವಸ್ಥೆ ಅಗರವಾದ ರಸ್ತೆಗಳು ಕೋಟ, ತೆಕ್ಕಟ್ಟೆ ಹಾಗೂ ಕುಂಭಾಶಿ ಗ್ರಾಪಂ ಒಳಪಟ್ಟಿದೆ. ಕೋಟ ಪಡುಕರೆ ಶಾಲಾ ಕಾಲೇಜು ಸುತ್ತಲಿರುವ ಕರಾವಳಿ ರಸ್ತೆ ಸ್ಥಿತಿ ಕೂಡ ಇದೇ ರೀತಿಯಲ್ಲಿದೆ.
ಕೋಡಿ ಕನ್ಯಾಣದಿಂದ ಕುಂದಾಪುರ ಕೋಡಿ ತಲೆವರೆಗೆ ಕರಾವಳಿ ರಸ್ತೆಯನ್ನು ಅವಲಂಬಿಸಿದ್ದು, ಈ ರಸ್ತೆ ಅಲ್ಲಲ್ಲಿ ಕೆಲವೊಂದು ಕಡೆ ಕಾಂಕ್ರೀಟೀಕರಣಗೊಂಡರೂ ಶೇ.60ರಷ್ಟು ಡಾಂಬರ್ ರಸ್ತೆಯಾಗಿಯೇ ಉಳಿದಿದೆ. ಅಲ್ಲದೆ ಹೆಚ್ಚಿನ ಭಾಗಗಳು ಹೊಂಡಮಯವಾಗಿದೆ.

ಕೃತಕ ನೆರೆಗೆ ಸ್ಥಳೀಯರೇ ಕಾರಣ: ಬುಧವಾರ ಸಾಯಂಕಾಲ ಸುರಿದ ಭಾರಿ ಮಳೆಗೆ ಕುಂಭಾಶಿ, ತೆಕ್ಕಟ್ಟೆ ಗ್ರಾಪಂ ವ್ಯಾಪ್ತಿಯ ಕರಾವಳಿ ರಸ್ತೆ ನೀರುಮಯವಾಗಿತ್ತು. ನೀರು ಮನೆಗಳಿಗೆ ನುಗ್ಗಿ ಜನರನ್ನು ಪರದಾಡುವಂತೆ ಮಾಡಿತು. ಈ ಅವಾರಂತರಕ್ಕೆ ಒಂದು ರೀತಿಯಲ್ಲಿ ಸ್ಥಳೀಯರೇ ಕಾರಣ. ಏಕೆಂದರೆ ಸ್ಥಳೀಯರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಚರಂಡಿ ಮುಚ್ಚಿ ಮನೆಗೆ ದಾರಿಮಾಡಿಕೊಂಡಿದ್ದಾರೆ. ಮಳೆ ನೀರಿನ ಅವಾಂತರ ಮನಗಂಡ ಕುಂಭಾಶಿ, ತೆಕ್ಕಟ್ಟೆ ಗ್ರಾಪಂ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿ ಕೊರವಡಿ ಮತ್ತು ಕೊಮೆ ಗಡಿ ಭಾಗಕ್ಕೆ ಭೇಟಿ ನೀಡಿ ರಸ್ತೆಯಲ್ಲಿ ಹಾದುಹೋಗುವ ನೀರಿನ ಕುರಿತಾಗಿ ಸ್ಥಳೀಯರಲ್ಲಿ ಮಾತುಕತೆ ನಡೆಸಿದರು. ಆದರೆ ಪ್ರಯೋಜ ಶೂನ್ಯವಾಗಿತ್ತು. ಸ್ಥಳೀಯರೇ ಪಂಚಾಯಿತಿ ಬೋರ್ಡ್ ಹಾಗೂ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ರಸ್ತೆಯಲ್ಲಿ ಹರಿಯುವ ನೀರು ನಮ್ಮ ವಠಾರಕ್ಕೆ ಹೋಗಲು ಬಿಡುವುದಿಲ್ಲ ಎಂಬ ಷರತ್ತು ವಿಧಿಸಿದ ಹಿನ್ನೆಲೆಯಲ್ಲಿ ವಾಪಸ್ ತೆರಳಿದರು. ಇದರಿಂದ ಸಮಸ್ಯೆ ಹಾಗೇ ಉಳಿದಿದೆ.

ಈ ಭಾಗದ ರಸ್ತೆ ಹಾಗೂ ಚರಂಡಿ ಅವ್ಯವಸ್ಥೆ ಬಗ್ಗೆ ಶಾಸಕರು ಗಮನ ಹರಿಸಲಿ. ಕರಾವಳಿಯ ರಸ್ತೆಗಳ ಬಗ್ಗೆ ನಿರ್ಲಕ್ಷ್ಯ ಸಲ್ಲ. ಮಳೆಗೆ ನಮ್ಮ ಮನೆ ಜಲಾವೃತವಾಗಿತ್ತು. ರಸ್ತೆಯ ನೀರು ಏಕಾಏಕಿ ನುಗ್ಗಿದ ಪರಿಣಾಮ ಈ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಯಥಾಸ್ಥಿತಿ ಹರಿದು ಹಂಚಿ ಹೋಗುವ ನೀರಿಗೆ ಅಲ್ಲಲ್ಲಿ ತಡೆಯೊಡ್ಡಿದ್ದಾರೆ. ಇದರಿಂದ ಈ ಸ್ಥಿತಿ ನಿರ್ಮಾಣಗೊಂಡಿದೆ.
ಮೇಸ್ತ್ರಿ ಕೃಷ್ಣ ಪೂಜಾರಿ, ಕೊರವಡಿ

ಮಳೆ ಅವಾಂತರದ ಕುರಿತು ಕುಂಭಾಶಿ ಕರಾವಳಿ ರಸ್ತೆ ಭಾಗದ ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ಆದರೆ ಸುತ್ತಮುತ್ತಲಿನ ನಿವಾಸಿಗಳು ತಮ್ಮ ಜಾಗದಲ್ಲಿ ಹರಿಯುವ ನೀರಿಗೆ ತಡೆಯೊಡ್ಡಿದ್ದಾರೆ. ಸರಿಪಡಿಸಲು ಬಿಡದೆ ಪಂಚಾಯಿತಿಯನ್ನೇ ಬೆದರಿಸುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಬೇಕಾದೀತು.
ಜೈರಾಮ ಶೆಟ್ಟಿ, ಕುಂಭಾಶಿ ಗ್ರಾಪಂ ಅಭಿವೃದ್ಧಿ ಅಧಿಕಾರಿ

Leave a Reply

Your email address will not be published. Required fields are marked *