ಕೇಂದ್ರ ಹಣಕಾಸು ಸಚಿವಾಲಯದ ನಾರ್ತ್​ ಬ್ಲಾಕ್​ನಲ್ಲಿ ಪತ್ರಕರ್ತರ ಪ್ರವೇಶಕ್ಕೆ ನಿರ್ಬಂಧವಿಲ್ಲ, ಹೆಚ್ಚುವರಿ ಸೌಲಭ್ಯ ಲಭ್ಯ

ನವದೆಹಲಿ: ಕೇಂದ್ರ ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್​ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಹಣಕಾಸು ಸಚಿವಾಲಯವಿರುವ ನಾರ್ತ್​ ಬ್ಲಾಕ್​ಗೆ ಪತ್ರಕರ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂಬ ವದಂತಿಗೆ ಸಚಿವಾಲಯದ ಅಧಿಕಾರಿಗಳು ತೆರೆ ಎಳೆದಿದ್ದಾರೆ. ಇದು ಪ್ರವೇಶ ನಿರ್ಬಂಧವಲ್ಲ. ಬದಲಿಗೆ ಅಲ್ಲಿದ್ದ ದುರವಸ್ಥೆಗಳನ್ನು ಸರಿಪಡಿಸಿ, ಪತ್ರಕರ್ತರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ಪ್ರಯತ್ನ ಇದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿತ್ತ ಸಚಿವ ನಿರ್ಮಲಾ ಸೀತಾರಾಮನ್​ ಅವರ ನಿರ್ದೇಶನದ ಮೇರೆಗೆ ನಾರ್ತ್​ ಬ್ಲಾಕ್​ನ ಗೇಟ್​ ನಂ.2ರಲ್ಲಿ ಎಸಿ ಸೌಲಭ್ಯವುಳ್ಳ ನಿರೀಕ್ಷಣಾ ಕೊಠಡಿಯನ್ನು ಸ್ಥಾಪಿಸಲಾಗಿದೆ. ಇಲ್ಲಿ, ನೀರು, ಚಹಾ, ಕಾಫಿ ಮತ್ತಿತರ ತಿಂಡಿ ಪದಾರ್ಥಗಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ, ಮೊಬೈಲ್​ಫೋನ್​, ಲ್ಯಾಪ್​ಟಾಪ್​ ಸೇರಿ ವಿದ್ಯುನ್ಮಾನ ಉಪಕರಣಗಳ ಚಾರ್ಜಿಂಗ್​ ವ್ಯವಸ್ಥೆಯ ಜತೆಗೆ ಆರಾಮವಾಗಿ ವಿರಮಿಸಲು ಅನುವಾಗುವಂತೆ ಸೀಟುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪಿಐಬಿ ಮಾನ್ಯತೆಯ ಕಾರ್ಡ್​ ಹೊಂದಿರುವ ಪತ್ರಕರ್ತರು ಪೂರ್ವಭಾವಿಯಾಗಿ ಅನುಮತಿ ಪಡೆದು ಸಚಿವಾಲಯದ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿದೆ. ಇದನ್ನು ಹೊರತುಪಡಿಸಿ ಬೇರಾವುದೇ ನಿರ್ಬಂಧಗಳನ್ನು ಹೇರಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *