ಜನಪ್ರತಿನಿಧಿಗಳಿಗೆ ಸ್ಪಂದಿಸದ ಅಧಿಕಾರಿಗಳು

ಉಡುಪಿ: ಸಾರ್ವಜನಿಕ ಸಂಬಂಧಿತ ಸರ್ಕಾರಿ ಕೆಲಸಗಳ ಮಾಹಿತಿ ಕೇಳಿದರೆ ಅಥವಾ ಸಲಹೆ ನೀಡಿದರೆ ನಮ್ಮನ್ನು ತುಚ್ಛವಾಗಿ ಕಾಣಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಪಂ 15ನೇ ಸಾಮಾನ ್ಯಸಭೆಯಲ್ಲಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹೆಬ್ರಿ-ಉಡುಪಿ ನರ್ಮ್ ಬಸ್ ಸಂಚಾರ ಸಂಬಂಧಿಸಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದಾಗ ದರ್ಪದಿಂದ ಪ್ರತಿಕ್ರಿಯಿಸಿದರು. ಲೆಟರ್‌ನಲ್ಲಿ ಬರೆದುಕೊಡಿ, ನಾನು ಮೇಲಿನ ಅಧಿಕಾರಿಯೆಂದು ಉತ್ತರಿಸಿದರು ಎಂದು ಸದಸ್ಯ ಮೈರ್ಮಾಡಿ ಸುಧಾಕರ್ ಶೆಟ್ಟಿ ಆರೋಪಿಸಿದರು. ಜಿಪಂ ಸದಸ್ಯ ಸುಮಿತ್ ಶೆಟ್ಟಿ ಬೈಲೂರು ಮಾತನಾಡಿ, ಬೈಲೂರು ಪಿಡಿಒ ಸರಿಯಾಗಿ ಸ್ಪಂದಿಸುವುದಿಲ್ಲ. ಉಡಾಫೆಯಿಂದ ವರ್ತಿಸುತ್ತಾರೆ ಎಂದು ಆರೋಪಿಸಿದರು. ಎಲ್ಲ ಸದಸ್ಯರು ಅಧಿಕಾರಿಗಳ ವರ್ತನೆಗೆ ಖಂಡನೆ ವ್ಯಕ್ತಪಡಿಸಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಅಧ್ಯಕ್ಷ ದಿನಕರ ಬಾಬು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧೂ ಬಿ. ರೂಪೇಶ್‌ರಿಗೆ ಸೂಚಿಸಿದರು.

ಜಿಪಂನಲ್ಲಿ ನಡೆಯುವ ಸಭೆಗಳಿಗೆ ಸಂಬಂಧಿಸಿ ಸರಿಯಾಗಿ ನೋಟಿಸ್ ಬರುವುದಿಲ್ಲ. ಸಂಧ್ಯಾ ಸುರಕ್ಷಾ ಸೇರಿದಂತೆ ಕಂದಾಯ ಇಲಾಖೆ ಸಂಬಂಧಿಸಿದ ಯೋಜನೆಗಳ ಪರಿಹಾರ ಧನ ಫಲಾನುಭವಿಗಳಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಸದಸ್ಯ ಜನಾರ್ದನ್ ತೋನ್ಸೆ ದೂರಿದರು.
ಸರ್ಕಾರ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಕಡ್ಡಾಯ ಜಾರಿಗೆ ತಂದರೂ ಕೆಲ ಪಂಚಾಯಿತಿಗಳು ಮಾತ್ರ ಅನುಷ್ಠಾನಗೊಳಿಸಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಸುಮಿತ್ ಶೆಟ್ಟಿ ಬೈಲೂರು ಆಗ್ರಹಿಸಿದರು.

 ಜಿಂಕೆಗೆ ಬೇಲಿ ಹಾಕಿ: ಅರಣ್ಯಗಳ ಮಧ್ಯೆ ಹಾದು ಹೋದ ಮುಖ್ಯ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸುವುದು ಕಷ್ಟವಾಗುತ್ತಿದೆ. ಜಿಂಕೆಗಳು ಒಮ್ಮೆಲೆ ರಸ್ತೆ ದಾಟುವುದರಿಂದ ವಾಹನ ಸವಾರರು ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಲಿ ವ್ಯವಸ್ಥೆ ಮಾಡಿ ಪರಿಹಾರ ಕಂಡುಕೊಳ್ಳುವಂತೆ ಜನಾರ್ದನ ತೋನ್ಸೆ ಬೈಲೂರು ಅರಣ್ಯಾಧಿಕಾರಿಗಳಿಗೆ ಸಲಹೆ ನೀಡಿದರು. ವನ್ಯಜೀವಿ ಅರಣ್ಯ ಭಾಗದಲ್ಲಿ ಬೇಲಿ ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಕಳಪೆ ರಸ್ತೆ ತನಿಖೆಗೆ ನಿರ್ಣಯ: ಕೊಕ್ಕರ್ಣೆ ಗ್ರಾಪಂ ವ್ಯಾಪ್ತಿ ಕೋಟಂಬೈಲು ಪ್ರದೇಶದಲ್ಲಿ 4 ವರ್ಷ ಹಿಂದೆ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಏಕಪಥ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಅವ್ಯವಹಾರ ನಡೆದಿದೆ. ಈ ಬಗ್ಗೆ ಕಳೆದ ಸಭೆಯಲ್ಲಿ ತನಿಖೆ ನಡೆಸಲು ಆಗ್ರಹಿಸಿದ್ದೆ, ಇನ್ನು ಕ್ರಮವಾಗಿಲ್ಲ ಎಂದು ಸುಧಾಕರ್ ಶೆಟ್ಟಿ ಮೈರ್ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಯಲಿ ಎಂದು ಜನಾರ್ದನ್ ತೋನ್ಸೆ ಆಗ್ರಹಿಸಿದರು. ಜಿ.ಪಂ. ಅಧ್ಯಕ್ಷರು, ಸಿಇಒ, ಸಂಬಂಧಪಟ್ಟ ಜಿ.ಪಂ. ಸದಸ್ಯರ ನೇತೃತ್ವದಲ್ಲಿ ಸಮಿತಿ ರಚಿಸಿ ಪರಿಶೀಲನೆ ನಡೆಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ಉದಯ ಕೋಟ್ಯಾನ್, ಶಶಿಕಾಂತ್ ಪಡುಬಿದ್ರಿ, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಮತ್ತು ಶಾಸಕರಾದ ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕೆ.ರಘುಪತಿ ಭಟ್ ಉಪಸ್ಥಿತರಿದ್ದರು.

ಬಡವರಿಗಿಲ್ಲ 94ಸಿ ಜಾಗ: 94ಸಿ ಅಡಿಯಲ್ಲಿ ಬಡವರಿಗೆ ಭೂಮಿ ನೀಡಲು ತಹಸೀಲ್ದಾರ್, ವಿಎಗಳು ಹಿಂದೇಟು ಹಾಕುತ್ತಿದ್ದಾರೆ. 94ಸಿ ಡಿಯಲ್ಲಿ ಅಗತ್ಯ ಭೂಮಿ ಲಭ್ಯವಿದ್ದರೂ ಸ್ಥಳ ಪರಿಶೀಲನೆ ಮಾಡದೆ ಕಚೇರಿಯಲ್ಲೇ ವರದಿ ಬರೆದು ಬಡವರಿಗೆ ಭೂಮಿ ಸಿಗದಂತೆ ಮಾಡಲಾಗುತ್ತಿದೆ. ಕುಂದಾಪುರ ತಾಲೂಕಿನಾದ್ಯಂತ ಉಳ್ಳವರಿಗೆ ಮಾತ್ರ 94ಸಿ ಅಡಿಯಲ್ಲಿ ಭೂಮಿ ಸಿಗುತ್ತಿದೆ. ಬಡವರು ಅರ್ಜಿ ಹಾಕಿ ವರ್ಷ ಕಳೆದರೂ ಭೂಮಿ ಸಿಗುತ್ತಿಲ್ಲ. ಎಂದು ಜಿಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ ತಹಸೀಲ್ದಾರ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಸಭೆಯಲ್ಲಿದ್ದ ಕುಂದಾಪುರ ತಹಸೀಲ್ದಾರ್, ತಾನು ಇತ್ತೀಚೆಗೆ ಬಂದಿದ್ದು, 94ಸಿಗೆ ಸಂಬಂಧಿಸಿ ಈ ಹಿಂದೆ ನಡೆದ ವಿಧಾನಗಳು ತನಗೆ ಗೊತ್ತಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಆಕ್ಷೇಪಿಸಿದ ಸದಸ್ಯರು, ಅಕ್ರಮ ಗೊತ್ತಿದೆ, ಅರ್ಜಿ ಹಾಕಿದವರಿಗೆ ಜಾಗ ಕೊಡಿ ಎಂದು ಹೇಳಿದರು.
ದೇವಸ್ಥಾನಕ್ಕೆ ಆಸ್ಪತ್ರೆ ಆಡಳಿತ!: ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ದೇವಸ್ಥಾನವಿದೆ. ಆ ದೇವಳ ಸರ್ಕಾರದ ಪ್ರತ್ಯೇಕ 4 ಸೆಂಟ್ಸ್ ಜಾಗದಲ್ಲಿದೆ. ಆದರೆ ಆಸ್ಪತ್ರೆಯವರೇ ಸಮಿತಿ ರಚಿಸಿ ದೇವಳ ನಡೆಸುತ್ತಿದ್ದಾರೆ. ಅದರಲ್ಲಿ ಬಂದ ದುಡ್ಡನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಆರೋಪಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಿಇಒ ಸಿಂಧೂ ಬಿ.ರೂಪೇಶ್ ಡಿಎಚ್‌ಒಗೆ ಸೂಚಿಸಿದರು.