ಮರಳು ದಂಧೆ ನಿರಂತರ

 ಕುಂದಾಪುರ: ವಾರಾಹಿ ನದಿ ತಟದಲ್ಲಿ ಜೆಸಿಬಿ ಬಳಸಿ ಮರಳು ತೆಗೆಯುತ್ತಿದ್ದರೆ, ಅಧಿಕಾರಿಗಳು ರಸ್ತೆ ಮಾಡಲು ಜೆಸಿಬಿ ಬಳಸಲಾಗಿದೆ ಎಂದು ಷರಾ ಬರೆದಿದ್ದಾರೆ! ನದಿಯಲ್ಲಿ ಮರಳು ಗಣಿ ನಡೆಯುತ್ತಿಲ್ಲ ಎಂದು ತೋರಿಸಲು ವಾರಾಹಿ ನದಿಯ ಮತ್ತೊಂದು ಕಡೆಯ ಚಿತ್ರ ಹಾಕಿ ಮೇಲಿನ ಅಧಿಕಾರಿಗಳಿಗೆ ತೋರಿಸಿ ಅಕ್ರಮ ಮರಳುಗಾರಿಕೆ ಸಮರ್ಥಿಸಿಕೊಳ್ಳುವ ಸರ್ಕಸ್ ಕೂಡ ನಡೆಯುತ್ತಿದೆ.

ಮೊಳಹಳ್ಳಿ ಗ್ರಾಮ ಮರಾತೂರು ವಾರಾಹಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಸಾಕ್ಷಿ ಸಹಿತ ವಿಜಯವಾಣಿ ಇತ್ತೀಚೆಗೆ ಬಯಲಿಗೆಳೆದಿತ್ತು. ಆದರೆ, ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದ್ದ ಅಧಿಕಾರಿಗಳು ಮೇಲಿನ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದಂಧೆಕೋರರಿಗೆ ರಕ್ಷಣೆ ಮಾಡುತ್ತಿದ್ದಾರೆ.

ಮರಾತೂರು ವಾರಾಹಿ ನದಿ ತೀರದಲ್ಲಿ ನಿಯಮ ಬಾಹಿರವಾಗಿ ಮರಳುಗಾರಿಕೆ ನಡೆಯುತ್ತಿದೆ. ಯಂತ್ರಗಳ ಮೂಲಕ ಮರಳು ತೆಗೆಯಬಾರದು ಎಂದಿದ್ದರೂ, ನೂರಾರು ಲೋಡ್ ಮರಳನ್ನು ಯಂತ್ರದ ಮೂಲಕ ಸಂಗ್ರಹಿಸಿ ಸ್ಟಾಕ್ ಮಾಡಲಾಗಿದೆ. ನದಿಯ ದಿಬ್ಬ ಗುರುತಿಸಿ, ಮಾನವ ಶಕ್ತಿ ಬಳಸಿ, ಮರಳು ತೆಗೆಯಬೇಕೆಂಬ ನಿಯಮವಿದ್ದರೂ, ಅದನ್ನು ಉಲ್ಲಂಘಿಸಿ ರಾತ್ರಿ ವೇಳೆ ಹಿಟಾಚಿ ಬಳಸಿ ಮರಳು ತೆಗೆಯಲಾಗುತ್ತಿದೆ. ಹಗಲು ಕಾರ್ಮಿಕರಿಂದ ಕೆಲಸ ಮಾಡಿಸಿ ಅಧಿಕಾರಿಗಳ ಹಾಗೂ ಸ್ಥಳೀಯರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಜೆಸಿಬಿ ಮೂಲಕ ಇಡೀ ನದಿ ದಂಡೆ ಬಗೆದು ನದಿ ಪಾತ್ರ ಹಳ್ಳ ಹತ್ತಿಸುವ ಕೆಲಸ ಮಾಡಲಾಗುತ್ತಿದೆ.

ಮರಳು ತೆಗೆಯಲು ಪರವಾನಗಿ ಇಲ್ಲ: ಉಡುಪಿ ಜಿಲ್ಲೆಯ ಯಾವ ಪ್ರದೇಶದಲ್ಲೂ ಕೆಂಪುಕಲ್ಲು, ಶಿಲೆಕಲ್ಲು ಗಣಿಗೆ ಅವಕಾಶ ನೀಡಿಲ್ಲ. ಉಡುಪಿ ತಾಲೂಕಿನ 10 ಕಡೆ ಮಾತ್ರ ಮರಳು ತೆಗೆಯಲು ಪರವಾನಗಿ ನೀಡಲಾಗಿದ್ದು, ಇದರಲ್ಲಿ ಮರಾತೂರು ಸೇರಿಲ್ಲ. ಮರಳು ತೆಗೆಯಲು ಯಾರಿಂದಲೂ ಹಣ ಕಟ್ಟಿಸಿಕೊಂಡಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೆಮೋ ನೀಡಿದೆ. ಹಾಗಿದ್ದರೂ ದಂಧೆಕೋರರು ನಿರಾತಂಕವಾಗಿ ಇಲ್ಲಿ ಮರಳು ತೆಗೆದು ಸಾಗಿಸುತ್ತಿದ್ದು, ಅಧಿಕಾರಿಗಳ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ ಎಂಬುದು ಸ್ಥಳೀಯರ ವಾದ. ಕುಂದಾಪುರ ಸಿಆರ್‌ಜಡ್ ಸೂಕ್ಷ್ಮ ವಲಯವಾಗಿದ್ದರಿಂದ ಸಿಆರ್‌ಜಡ್, ನಾನ್ ಸಿಆರ್‌ಜಡ್ ವ್ಯಾಪ್ತಿಯಲ್ಲಿ ಮರಳು ಗಣಿಗೆ ಪರವಾನಗಿ ಕೊಟ್ಟಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ಸ್ಪಷ್ಟಪಡಿಸಿದೆ.

ಮೊಳಹಳ್ಳಿ ಗ್ರಾಮ ಸ.ನ.249ರಲ್ಲಿ 2.50 ಎಕರೆ ವಿಸ್ತೀರ್ಣ ಮರಳು ಬ್ಲಾಕ್ ಸಂಖ್ಯೆ 14ರ ಹೆಸರಿನ ಪರವಾನಗಿ ನಾಮಫಲಕ ಹಾಕಿ ಮರಳು ತೆಗೆಯುತ್ತಿದ್ದ ಸ್ಥಳದಲ್ಲಿ ಲಗತ್ತಿಸಲಾಗಿದೆ. ರಾತ್ರಿ ನಿಯಮ ಮೀರಿ ಜೆಸಿಬಿಯಿಂದ ಮರಳು ತೆಗೆಯಲಾಗುತ್ತಿದೆ. ಹಗಲು ವೇಳೆ ಕೆಲವು ಕಾರ್ಮಿಕರು ನದಿಯಿಂದ ಮರಳು ಸಂಗ್ರಹಿಸಿ ಜಿಪಿಎಸ್ ಅಳವಡಿಸದ ಟಿಪ್ಪರ್‌ನಲ್ಲಿ ಸಾಗಿಸುತ್ತಿದ್ದಾರೆ. ಭೂಮಾಪಕರೊಬ್ಬರು ಇದರಲ್ಲಿ ಶಾಮೀಲಾಗಿದ್ದು, ಮೊಳಹಳ್ಳಿ ಗ್ರಾಮ ನಕ್ಷೆಯ ಒಂದು ಮೂಲೆಯಲ್ಲಿ ಸ.ನ.249 ಎಂದು ನಮೂದಿಸಿ ಮರಳು ಬ್ಲಾಕ್ 14ರ ನಕ್ಷೆ ತಯಾರಿಸಿದ್ದಾರೆ ಎಂದು ಸ್ಥಳೀಯ ಕೃಷಿಕರೊಬ್ಬರು ಆಪಾದಿಸಿದ್ದಾರೆ. ಮರಳು ದಿಬ್ಬವಿರುವ ಪ್ರದೇಶಕ್ಕೂ ಸರ್ವೇ ಸಂಖ್ಯೆಗೂ ಸಂಬಂಧವೇ ಇಲ್ಲ! ಅಸಲಿಗೆ 249 ಸ.ನ.ಮೊಳಹಳ್ಳಿ ವ್ಯಾಪ್ತಿಗೆ ಬರುವುದಿಲ್ಲ! ಗ್ರಾಮಸ್ಥರು ಮರಳು ಗಣಿಗೆ ಸಂಬಂಧಿತ ಇಲಾಖೆಗಳಿಗೆ ಮನವಿ ಸಲ್ಲಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರೂ ಅಕ್ರಮ ಮಾತ್ರ ನಿಂತಿಲ್ಲ. ಮರಳುಗಾರಿಕೆ ನಿಲ್ಲಿಸುವ ಪ್ರಕಟಣೆ ಅಧಿಕಾರಿಗಳಿಂದ ನೀಡಲಾಗಿದ್ದರೂ ಕ್ಯಾರೇ ಎನ್ನದೆ ದಂಧೆಕೊರರು ರಾತ್ರಿ ಪಾಳಿಯಲ್ಲಿ ಮರಳು ತೆಗೆದು ಸಾಗಿಸುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಅತಿ ಸೂಕ್ಷ್ಮಪ್ರದೇಶ, ಹಸಿರು ಕಾನನ, ಪ್ರಾಣಿಪಕ್ಷಿಗಳಿಗೆ ಅಪಾಯ ತರುವ ಗಣಿಗಾರಿಕೆ ವಾರಾಹಿ ತೀರದಲ್ಲಿ ಕೂಡದು. ಯಂತ್ರದ ಮೂಲಕ ನದಿ ಒಡಲು ಬಗೆಯುವುದಲ್ಲದೆ ನೂರಾರು ಸೂಕ್ಷ್ಮಜೀವಿಗಳ ಆವಾಸಸ್ಥಾನ ನದಿ ಪಾತ್ರ ಯಂತ್ರಗಳ ಮೂಲಕ ಬೆಲೆ ಕಟ್ಟಲಾಗದ ಸಂಪತ್ತು ನಾವು ಕಳೆದುಕೊಳ್ಳುತ್ತಿದ್ದೇವೆ ಎಂಬ ಅರಿವಿಲ್ಲದಿರುವುದು ಬೇಸರದ ಸಂಗತಿ. ನದಿ ಪಾತ್ರದ ವಿಸ್ತರಣೆ ಮಳೆಗಾಲದಲ್ಲಿ ಮತ್ತೊಂದು ಅನಾಹುತಕ್ಕೆ ಕಾರಣವಾಗಲಿದ್ದು, ನದಿ ಆಳ ಹೆಚ್ಚುವುದರಿಂದ ನೀರಿನ ಸಮಸ್ಯೆಗೂ ಕಾರಣವಾಗುತ್ತದೆ.
ಜೆ.ಪಿ.ಶೆಟ್ಟಿ ಸ್ಥಳೀಯ ನಿವಾಸಿ

Leave a Reply

Your email address will not be published. Required fields are marked *