ದ.ಕ. ಶಾಲೆ ದಸರಾ ರಜೆ ಅಬಾಧಿತ

ಮಂಗಳೂರು: ದಸರಾ ಸಂಭ್ರಮ ಅನುಭವಿಸುವುದಕ್ಕೆ ದಕ್ಷಿಣ ಕನ್ನಡದ ಶಾಲಾ ವಿದ್ಯಾರ್ಥಿಗಳಿಗೆ ಯಾವ ಅಡ್ಡಿಯೂ ಇಲ್ಲ. ಒಂದು ವಾರ ರಜೆ ಕಡಿತದ ಆದೇಶ ಹಿಂದಕ್ಕೆ ಪಡೆಯಲಾಗುವುದು. ಎಂದಿನಂತೆ ರಾಜ್ಯದ ಇತರ ಕಡೆಯಂತೆಯೇ ದಕ್ಷಿಣ ಕನ್ನಡದಲ್ಲೂ ಅಕ್ಟೋಬರ್ 7ರಿಂದ 21ರವರೆಗೆ ರಜೆ ಇರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಮಾನ್ಯವಾಗಿ ದಸರಾ ರಜೆಗೆ ಹಲವು ತಿಂಗಳ ಮೊದಲೇ ರಜೆ ಅವಧಿಯ ಪ್ರವಾಸ, ಕೌಟುಂಬಿಕ ಕಾರ್ಯಕ್ರಮಗಳನ್ನು ಪಾಲಕರು ಹಾಕಿಕೊಂಡಿರುತ್ತಾರೆ. ರಜೆ ಕಡಿತಗೊಳಿಸಿದರೆ ಅವರಿಗೆ ತೊಂದರೆಯಾಗುತ್ತದೆ. ಇದನ್ನು ಗಮನಿಸಿ ಎಂದಿನಂತೆಯೇ ರಜೆ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಬೇರೆ ರೀತಿಯಲ್ಲಿ ರಜೆ ಸರಿದೂಗಿಸಲು ಸೂಚಿಸಿದ್ದೇನೆ ಎಂದು ತಿಳಿಸಿದರು.

ಈ ಬಾರಿಯ ಮಳೆಗಾಲದಲ್ಲಿ ಭಾರಿ ಮಳೆ ಕಾರಣದಿಂದ ಹಲವು ಬಾರಿ ರಜೆ ಕೊಡಲಾಗಿತ್ತು. ತರಗತಿಗಳನ್ನು ಸರಿದೂಗಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 7 ದಿನ ರಜೆ ಕಡಿತಗೊಳಿಸಿ ಅ.7ರ ಬದಲು 14ರಿಂದ 21ರವರೆಗೆ ಮಾತ್ರವೇ ರಜೆ ಕೊಡಲು ಸೆಪ್ಟೆಂಬರ್ ಮೊದಲವಾರ ಜಿಲ್ಲಾಧಿಕಾರಿ ಆದೇಶಿಸಿದ್ದರು.

ಕಂದಾಯ ಸಮಸ್ಯೆಗೆ ಸಭೆ/ಅದಾಲತ್: ಕರಾವಳಿ ಜಿಲ್ಲೆಗಳಲ್ಲಿ ಭೂಪರಿವರ್ತನೆ ಕುರಿತು ಆಗುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಲು ಕಂದಾಯ ಸಚಿವರು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಉಸ್ತುವಾರಿ ಸಚಿವರು, ಉನ್ನತ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಜಿಲ್ಲೆಯಲ್ಲಿ ಭೂಪರಿವರ್ತನೆ, ನೋಂದಣಿ ಸಮಸ್ಯೆ ಸಾಕಷ್ಟು ಬಗೆಹರಿದಿದೆ. ನಗರ ವ್ಯಾಪ್ತಿಯಲ್ಲಿ 11ಇ ನಕ್ಷೆ ಬದಲು ಯುಪಿಒಆರ್ ನಕ್ಷೆಯನ್ನೇ ಕಡ್ಡಾಯಗೊಳಿಸಲಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ 11ಇ ನಕ್ಷೆಯನ್ನು ರದ್ದುಪಡಿಸಲು ಸಾಧ್ಯವಿಲ್ಲ. ಈ ಎಲ್ಲ ವಿಚಾರ ಬಗ್ಗೆ ಕಂದಾಯ ಸಮಸ್ಯೆಗಳನ್ನೂ ಸೇರಿಸಿಕೊಂಡಂತೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿ ಕಂದಾಯ ಸಮಸ್ಯೆ ಬಗೆಹರಿಸುವ ಉದ್ದೇಶದಲ್ಲಿ ಕಂದಾಯ ಅದಾಲತ್ ಕೈಗೊಳ್ಳಲಾಗುವುದು, ಗ್ರಾಮೀಣ ಭಾಗದಲ್ಲಿ ಆರ್‌ಟಿಸಿ ದೋಷಗಳಿರುತ್ತವೆ. ಅದನ್ನು ಕಾಲಮಿತಿಯೊಳಗೆ ಶಾಶ್ವತವಾಗಿ ಇತ್ಯರ್ಥಗೊಳಿಸಬೇಕಿದೆ. ಇದಕ್ಕಾಗಿ ತಹಸೀಲ್ದಾರ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡವನ್ನೂ ರಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮುಲ್ಲರಪಟ್ಣ ಸೇತುವೆಗೆ 50 ಕೋಟಿ ರೂ.: ಮುಲ್ಲರಪಟ್ಣದಲ್ಲಿ ಕುಸಿದಿರುವ ಸೇತುವೆ ದುರಸ್ತಿಗೆ ಬದಲು ಹೊಸದಾಗಿ ಸೇತುವೆ ನಿರ್ಮಿಸುವುದಕ್ಕೆ ಉದ್ದೇಶಿಸಲಾಗಿದೆ. ಈ ಬಗ್ಗೆ ಲೋಕೋಪಯೋಗಿ ಸಚಿವರ ಜತೆ ಚರ್ಚಿಸಿದ್ದು, ಹೊಸ ಸೇತುವೆಗೆ 50 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಹೊಸ ಸೇತುವೆ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದವರು ಕೈಗೊಳ್ಳಲಿದ್ದಾರೆ ಎಂದು ಖಾದರ್ ತಿಳಿಸಿದರು.

ಗುರುಪುರ ಸೇತುವೆ: ಗುರುಪುರ ನದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನ ಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಿರ್ಮಿಸಲಿದ್ದಾರೆ. 37.84 ಕೋಟಿ ರೂ.ನ ಹೊಸ ಸೇತುವೆ ನಿರ್ಮಾಣಗೊಳ್ಳಲಿದ್ದು, ಹಳೆಯ ಸೇತುವೆಯನ್ನು ಉಳಿಸಿಕೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಅ.15ರೊಳಗೆ ಮರಳು: ಜಿಲ್ಲೆಯ ಸಿಆರ್‌ಝಡ್ ವಲಯದಲ್ಲಿನ ನದಿಗಳಿಂದ ಮರಳು ತೆಗೆಯುವುದಕ್ಕೆ, ಆ ಮೂಲಕ ಜನರಿಗೆ ಕಡಿಮೆ ದರದಲ್ಲಿ ಮರಳು ಲಭ್ಯವಾಗುವಂತೆ ಬೇಕಾದ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರೇ ಸೂಚನೆ ನೀಡಿದ್ದಾರೆ. ನಾನ್ ಸಿಆರ್‌ಝಡ್ ಪ್ರದೇಶದ ಮರಳು ತೆಗೆಯುವುದಕ್ಕೆ ಟೆಂಡರ್ ಷರತ್ತುಗಳನ್ನು ಒಂದಷ್ಟು ಸಡಿಲಿಸಲು ಸೂಚಿಸಲಾಗಿದೆ. ಇದರಿಂದಾಗಿ ಸ್ಥಳೀಯ ಗುತ್ತಿಗೆದಾರರಿಗೇ ಮೊದಲ ಆದ್ಯತೆ ಸಿಗಲಿದ್ದು, ಠೇವಣಿ ಮೊತ್ತವೂ ಇಳಿಕೆಯಾಗಲಿದೆ, ಹೆಚ್ಚು ಮಂದಿ ಟೆಂಡರ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಖಾದರ್ ತಿಳಿಸಿದ್ದಾರೆ.