ಹೊಣೆಗಾರಿಕೆ ಅಧಿಕ ಸಿಬ್ಬಂದಿ ಕಡಿತ!

ಹರೀಶ್ ಮೋಟುಕಾನ ಮಂಗಳೂರು
ಅರಣ್ಯ ಇಲಾಖೆಯಲ್ಲಿ ಎರಡು ದಶಕದ ಹಿಂದೆ ಕಾಡು ಕಾಯುವುದಷ್ಟೇ ಸಿಬ್ಬಂದಿ ಕೆಲಸವಾಗಿತ್ತು. ಈಗ ರಸ್ತೆಗೆ ಮರ ಬಿದ್ದರೂ, ತೋಟಕ್ಕೆ ಆನೆ ನುಗ್ಗಿದರೂ ಅರಣ್ಯ ಅಧಿಕಾರಿಗಳು ದೌಡಾಯಿಸಬೇಕು. ವಿಪರ್ಯಾಸ ಅಂದರೆ ದಟ್ಟಕಾಡು, ಅದರಲ್ಲಿಯೂ ಪಶ್ಚಿಮ ಘಟ್ಟ ತಪ್ಪಲು ಅರಣ್ಯ ಪ್ರದೇಶ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲಾಖೆಯಲ್ಲಿ ಇರುವುದು ಕೇವಲ 183 ಸಿಬ್ಬಂದಿ.
ಅರಣ್ಯ ಸಂರಕ್ಷಣೆಗೆಂದು ಜಿಲ್ಲೆಗೆ ಮಂಜೂರಾದ ಸಿಬ್ಬಂದಿ ಸಂಖ್ಯೆ 269. ಆದರೆ ಈಗ ಕರ್ತವ್ಯ ನಿರ್ವಹಿಸುತ್ತಿರುವವರು 183 ಮಂದಿ ಮಾತ್ರ. ಇಲಾಖೆಯಿಂದ ಮಂಜೂರಾದ ಪ್ರಕಾರ ಉಪ ವಲಯ ಅರಣ್ಯ ಅಧಿಕಾರಿಗಳ ಸಂಖ್ಯೆ 81 ಇರಬೇಕಿತ್ತು. ಆದರೆ ಈಗಿರುವುದು ಕೇವಲ 45 ಅಧಿಕಾರಿಗಳು. ಜಿಲ್ಲೆಗೆ ಒಟ್ಟು 151 ಗಾರ್ಡ್‌ಗಳು ಮಂಜೂರಾಗಿದ್ದರೂ ಸೇವೆಯಲ್ಲಿರುವವರು 111 ಮಂದಿ. ಉಳಿದ 40 ಹುದ್ದೆಗಳಿಗೆ ನೇಮಕವಾಗಿಲ್ಲ. ಅರಣ್ಯ ಕಾವಲುಗಾರರಾಗಿ ಒಟ್ಟು 37 ಮಂದಿ ಇರಬೇಕಿದ್ದರೂ, ಈಗಿರುವುದು 27 ಮಂದಿ. ಉಳಿದ 10 ಹುದ್ದೆಗಳು ಖಾಲಿಯಾಗಿವೆ.
ಎರಡು ವರ್ಷಗಳಿಂದ ಮಂಗಳೂರು ಕೇಂದ್ರ ಸ್ಥಾನದಲ್ಲೇ ಉಪ ವಲಯ ಅರಣ್ಯ ಇಲಾಖೆಯ ಹುದ್ದೆ ಖಾಲಿ ಇದೆ. ಸಿಬ್ಬಂದಿ ಕೊರತೆಯ ಹಿನ್ನೆಲೆಯಲ್ಲಿ ತಮಗೆ ನಿಗದಿಗೊಳಿಸಿದ ಅರಣ್ಯ ಸಂರಕ್ಷಣೆಯ ಕೆಲಸ ಕಾರ್ಯಗಳನ್ನೇ ಪೂರೈಸಲಾಗುತ್ತಿಲ್ಲ. ಸಿಬ್ಬಂದಿ ಕೊರತೆ ಇರುವ ಅರಣ್ಯ ಇಲಾಖೆಗೆ ಜವಾಬ್ದಾರಿ ಹಿಂದಿಗಿಂತ ಅಧಿಕವಾಗಿದೆ.
ಅಕ್ರಮ-ಸಕ್ರಮ ಕಡತ ಪರಿಶೀಲನೆ, ಇಂಗು ಗುಂಡಿಗಳ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಯೋಜನೆಗಳು ಮಂಜೂರಾದಾಗ ಇಲಾಖೆಯ ವತಿಯಿಂದ ಸಹಕರಿಸುವುದು ಸೇರಿದಂತೆ ಹಲವು ಹೊಣೆಗಾರಿಕೆಗಳಿವೆ. ಹಳ್ಳಿಯ ಮೂಲೆ ಮೂಲೆಗೆ ಸಂಪರ್ಕ ವ್ಯವಸ್ಥೆ ಇರುವುದರಿಂದ ಮರ ಕಡಿದು ಅಕ್ರಮ ಸಾಗಾಟ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಮರ ಕಡಿಯುವುದು, ಗಣಿಗಾರಿಕೆ ನಡೆಸುವ ಬಗ್ಗೆಯೂ ಹದ್ದಿನ ಕಣ್ಣಿಡಬೇಕಾಗಿದೆ. ಆನೆ ಕಾರಿಡಾರ್‌ಗಳ ನಾಶ ಹಾಗೂ ಅರಣ್ಯದಲ್ಲಿ ಆಹಾರದ ಕೊರತೆಯ ಪರಿಣಾಮ ಆನೆಗಳ ಹಾವಳಿಯೂ ಹೆಚ್ಚಾಗುತ್ತಿದೆ. ಇದಲ್ಲದೆ ವನಮಹೋತ್ಸವ, ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಅರಣ್ಯ ಇಲಾಖೆ ವತಿಯಿಂದಲೇ ನಡೆಯಬೇಕಾಗಿದೆ.

ಹುದ್ದೆ ಮಾತ್ರ ಹೆಚ್ಚಳ: ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಅರಣ್ಯ ಇಲಾಖೆಯಲ್ಲಿ ಹುದ್ದೆ ಮಂಜೂರಾತಿ ಹೆಚ್ಚಳವಾಗಿದೆ. ಆದರೆ ಕಳೆದ 18 ವರ್ಷಗಳಿಂದ ಸಿಬ್ಬಂದಿ ಸಂಖ್ಯೆಯಲ್ಲಿ ಏರಿಕೆ ನಡೆದಿಲ್ಲ. ಪ್ರಸ್ತುತ ಓರ್ವ ಗಾರ್ಡ್‌ಗೆ ಐದು ಗ್ರಾಮದ ಜವಾಬ್ದಾರಿ ವಹಿಸಲಾಗಿದೆ. ಓರ್ವ ಗಾರ್ಡ್‌ಗೆ ಎರಡು ಗ್ರಾಮದ ಜವಾಬ್ದಾರಿ ನೀಡಿದರೆ ಹೆಚ್ಚಿನ ನಿಗಾ ಇಡಲು ಸಾಧ್ಯ ಎನ್ನುತ್ತಾರೆ ಇಲಾಖಾಧಿಕಾರಿಗಳು.

ಅರಣ್ಯ ಇಲಾಖೆಗೆ ಮಂಜೂರಾದ ಹುದ್ದೆಗಳನ್ನು ನೇಮಕ ಮಾಡಿದರೆ ಸದ್ಯ ಇರುವ ಕೆಲಸದ ಒತ್ತಡ ಕಡಿಮೆಯಾಗಬಹುದು. ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರೆ ಉತ್ತಮ.
|ಶ್ರೀಧರ್, ಅರಣ್ಯಾಧಿಕಾರಿ ಮಂಗಳೂರು ವಲಯ