ಬೆಂಗಳೂರು: ಪೊಲೀಸ್ ಅಧಿಕಾರಿಗಳ ವರ್ಗಾವಣೆ ವೇಳೆ ಜನಪ್ರತಿನಿಧಿಗಳ ಶಿಫಾರಸು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಪೊಲೀಸ್ ಸಿಬ್ಬಂದಿ ಮಂಡಳಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ನಿಯಮಬಾಹಿರವಾಗಿ ಶಿಫಾರಸು ಮಾಡಿರುವ 24 ಜನಪ್ರತಿನಿಧಿಗಳ ವಿರುದ್ಧ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಸಲು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.
ಈ ವೇಳೆ ಗೃಹ ಇಲಾಖೆಯ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದ ಸರ್ಕಾರಿ ವಕೀಲರು, ಕಾನೂನು ಪ್ರಕಾರವೇ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ. ಯಾವುದೇ ನಿಯಮಗಳನ್ನು ಉಲ್ಲಂಘಿಸುತ್ತಿಲ್ಲ ಎಂದು ತಿಳಿಸಿದರು. ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಪೀಠ, ಸುಪ್ರೀಂಕೋರ್ಟ್ ತೀರ್ಪಿನ ನಂತರವೂ ಜನಪ್ರತಿನಿಧಿಗಳ ಶಿಫಾರಸುಗಳಿಗೆ ಬೆಲೆ ಇದೆಯೇ? ಇಂಥ ಶಿಫಾರಸುಗಳನ್ನು ಸ್ವೀಕರಿಸದೆ ನಿರ್ಲಕ್ಷಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪೊಲೀಸ್ ಎಸ್ಟಾಬ್ಲಿಷ್ವೆುಂಟ್ ಬೋರ್ಡ್ ಸ್ಪಷ್ಟಪಡಿಸಬೇಕು. ಆ ಕುರಿತು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಜ.24ಕ್ಕೆ ಮುಂದೂಡಿತು.
ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ರಾಜಕಾರಣಿಗಳು ಶಿಫಾರಸು ಪತ್ರಗಳನ್ನು ನೀಡುವುದನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಆದರೆ, ಅವುಗಳನ್ನು ಪರಿಗಣಿಸುವುದಿಲ್ಲವೆಂದು ಸರ್ಕಾರವೇ ಭರವಸೆ ನೀಡಬೇಕು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಅತ್ಯಂತ ಸ್ಪಷ್ಟವಾಗಿದೆ. ಯಾವುದೇ ಕಾರಣಕ್ಕೂ ಪೊಲೀಸರ ವರ್ಗಾವಣೆಯಲ್ಲಿ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ನ್ಯಾಯಪೀಠ ಹೇಳಿತು.