ರಾಮನಗರದ ಕಾಂಗ್ರೆಸ್​ ಬಂಡಾಯ ಶಮನ; ಅನಿತಾ ಕುಮಾರಸ್ವಾಮಿ ನಮ್ಮ ಒಮ್ಮತದ ಅಭ್ಯರ್ಥಿ ಎಂದ ಇಕ್ಬಾಲ್​

ರಾಮನಗರ: ರಾಮನಗರದಲ್ಲಿ ಸ್ಪರ್ಧೆ ಮಾಡದಿರುವ ಕಾಂಗ್ರೆಸ್​ನ ನಿರ್ಧಾರದ ವಿರುದ್ಧ ಸಿಡಿದಿದ್ದ ಕಳೆದ ಬಾರಿಯ ಕಾಂಗ್ರೆಸ್​ ಅಭ್ಯರ್ಥಿ, ಎಚ್​.ಡಿ ಕುಮಾರಸ್ವಾಮಿ ಅವರ ಸಮೀಪಸ್ಪರ್ಧಿ ಇಕ್ಬಾಲ್​ ಹುಸೇನ್​ ಅವರು, ಡಿ.ಕೆ ಸೋದರರ ಸಂಧಾನದ ಬಳಿಕ ಸಮಾಧಾನಗೊಂಡಿದ್ದಾರೆ.

ರಾಮನಗರ ತಾಲೂಕಿನ ಕವಣಾಪುರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಹಿತದೃಷ್ಟಿಯಿಂದ ನಾನು ಈ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ. ಪಕ್ಷದ ಹಿತದ ಹಿನ್ನೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡದಿರಲು ನಿರ್ಧರಿಸಿದ್ದೇನೆ. ಪಕ್ಷದ ನಾಯಕರು ಹೇಳಿದಂತೆ ಸಂಘಟನೆಯಲ್ಲಿ ತೊಡಗುತ್ತೇನೆ. ಅನಿತಾ ಕುಮಾರಸ್ವಾಮಿ ಅವರು ನಮ್ಮ ಒಮ್ಮತದ ಅಭ್ಯರ್ಥಿ ಎಂದು ಅವರು ಸ್ಪಷ್ಟಪಡಿಸಿದರು.

ಕಳೆದ ಬಾರಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿದ್ದ ಇಕ್ಬಾಲ್​ ಹುಸೇನ್​ 69 ಸಾವಿರಕ್ಕೂ ಅಧಿಕ ಮತ ಪಡೆದು ಗಮನ ಸೆಳೆದಿದ್ದರು. ಹೀಗಾಗಿ, ಜೆಡಿಎಸ್​ಗೆ ಕ್ಷೇತ್ರ ಬಿಟ್ಟುಕೊಟ್ಟರೆ, ಸಂಘಟನೆಗೆ, ಪಕ್ಷಕ್ಕೆ ದಕ್ಕೆಯಾಗಲಿದೆ ಎಂದು ಹೇಳಿದ್ದ ಇಕ್ಬಾಲ್​, ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಆದರೆ, ಸಚಿವ ಡಿ.ಕೆ ಶಿವಕುಮಾರ್​ ಮತ್ತು ಸಂಸದ ಡಿ.ಕೆ ಸುರೇಶ್​ ಅವರ ಸಂಧಾನದೊಂದಿಗೆ ಇಕ್ಬಾಲ್​ ಮನಿಸು ಶಮನವಾಗಿದೆ.

ಈ ಮೂಲಕ ರಾಮನಗರದಲ್ಲಿ ಜೆಡಿಎಸ್​ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಎದುರಾಗಿದ್ದ ಆರಂಭಿಕ ಹಿನ್ನಡೆ ನಿವಾರಣೆಯಾಗಿದೆ.