ರಾಜೀವ್ ವಿರಾಟ ವಿಹಾರಕ್ಕೆ ಸಾಕ್ಷ್ಯ: ಕೌಟುಂಬಿಕ ಪ್ರವಾಸಕ್ಕೆ ಐಎನ್​ಎಸ್ ವಿರಾಟ್ ಯುದ್ಧ ನೌಕೆ ಬಳಕೆ ನಿಜವೆಂದ ಮಾಜಿಗಳು

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂದಿ ಕುಟುಂಬದ ವೈಯಕ್ತಿಕ ಪ್ರವಾಸಕ್ಕೆ ನೌಕಾಸೇನೆಯ ಐಎನ್​ಎಸ್ ವಿರಾಟ್ ಯುದ್ಧ ನೌಕೆ ಬಳಸಿದ್ದು ನಿಜವೆಂದು ಸೇನೆಯ ನಿವೃತ್ತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಜೀವ್ ಗಾಂಧಿ ವಿರುದ್ಧದ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ಕಾಂಗ್ರೆಸ್ ವಿರೋಧಿಸುತ್ತಲೇ, ಯುದ್ಧ ನೌಕೆ ಬಳಸಿರುವುದನ್ನು ಅಲ್ಲಗಳೆಯುತ್ತಿಲ್ಲ. ಹೀಗಾಗಿ ಭ್ರಷ್ಟಾಚಾರಿ ನಂ.1 ಹೇಳಿಕೆ ನಂತರ ಚುನಾವಣಾ ಕಣದಲ್ಲಿ ರಾಜೀವ್ ಯುದ್ಧ ನೌಕೆ ಬಳಕೆ ವಿಚಾರ ಕೂಡ ಭಾರಿ ಸದ್ದು ಮಾಡುತ್ತಿದೆ. ದೆಹಲಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ‘ಐಎನ್​ಎಸ್ ವಿರಾಟ್ ಯುದ್ಧ ನೌಕೆಯನ್ನು ವೈಯಕ್ತಿಕ ಟ್ಯಾಕ್ಸಿ ರೀತಿಯಲ್ಲಿ ರಜಾದಿನಗಳ ವಿಹಾರಕ್ಕೆ ರಾಜೀವ್ ಗಾಂಧಿ ಕುಟುಂಬ ಬಳಸಿಕೊಂಡಿತ್ತು. ದೇಶದ ಗಡಿ ಕಾಯುವ ನೌಕೆಯನ್ನು ವಿದೇಶಿ ಸಂಬಂಧಿಗಳ ಜತೆಗೆ ರಜೆಯ ಮಜಕ್ಕೆ ಬಳಸಿಕೊಳ್ಳಲಾಗಿತ್ತು’ ಎಂದು ಟೀಕಿಸಿದ್ದರು. ಪ್ರಧಾನಿ ಹೇಳಿಕೆಯನ್ನು ಇಬ್ಬರು ನಿವೃತ್ತ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದು, ಯುದ್ಧನೌಕೆ ದುರ್ಬಳಕೆಗೆ ತಾವು ಸಾಕ್ಷಿಯಾಗಿದ್ದನ್ನು ವಿವರಿಸಿದ್ದಾರೆ.

‘ಬಂಗಾರಾಮ್ ದ್ವೀಪದಲ್ಲಿ ರಜಾ ದಿನಗಳನ್ನು ಆಚರಿಸಲು ಐಎನ್​ಎಸ್ ವಿರಾಟ್ ಯುದ್ಧನೌಕೆಯನ್ನು ರಾಜೀವ್ ಕುಟುಂಬ ಬಳಸಿದೆ. ನೌಕಾಸೇನೆಯ ಸಂಪನ್ಮೂಲಗಳನ್ನು ಈ ವಿಹಾರಕ್ಕೆ ಬಳಸಲಾಗಿದೆ. ನಾನು ಆಗ ಐಎನ್​ಎಸ್ ವಿರಾಟ್​ನಲ್ಲಿ ಕೆಲಸ ಮಾಡುತ್ತಿದ್ದೆ ಹಾಗೂ ಈ ಘಟನೆಗೆ ಸಾಕ್ಷಿಯಾಗಿದ್ದೇನೆ. ಆಡ್ಮಿರಲ್​ಗಳ ಕೊಠಡಿಯನ್ನು ರಾಜೀವ್ ಹಾಗೂ ಸೋನಿಯಾ ದಂಪತಿಗಾಗಿ ಸಿದ್ಧಗೊಳಿಸಲಾಗಿತ್ತು’ ಎಂದು ನಿವೃತ್ತ ಕಮಾಂಡರ್ ವಿ.ಕೆ.ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನಿವೃತ್ತ ಲೆಫ್ಟಿನಂಟ್ ಕಮಾಂಡರ್ ಹರಿಂದರ್ ಸಿಕ್ಕಾ, ‘ಗಾಂಧಿ ಕುಟುಂಬವು ಯುದ್ಧನೌಕೆಯಲ್ಲಿ ರಜಾದಿನಗಳನ್ನು ಕಳೆದಿದ್ದು ಆ ದಿನಗಳಲ್ಲಿ ನೌಕಾಸೇನೆಯ ಎಲ್ಲರಿಗೂ ತಿಳಿದ ವಿಚಾರ. ಆದರೆ ಆ ಸಂದರ್ಭದಲ್ಲಿ ನಾವು ಅದನ್ನು ವಿರೋಧಿಸಲು ಆಗುತ್ತಿರಲಿಲ್ಲ. ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಪ್ರಯಾಣಕ್ಕೆ ನಮ್ಮ ವಿರೋಧವಿರಲಿಲ್ಲ. ಆದರೆ ವಿದೇಶಿ ಮಹಿಳೆ ಸೋನಿಯಾ ಜತೆಗೆ ಹೋಗುವುದಕ್ಕೆ ಆಕ್ಷೇಪವಿತ್ತು. ನೌಕೆಯ ನಿಯಂತ್ರಣ ಕೊಠಡಿಗೆ ಎಲ್ಲ ಅಧಿಕಾರಿಗಳಿಗೆ ಪ್ರವೇಶ ಇರುವುದಿಲ್ಲ. ಆದರೆ ಪ್ರಧಾನಿ ಹಾಗೂ ಅವರ ಅತಿಥಿಗಳಿಗೆ ನಿಯಂತ್ರಣ ಕೊಠಡಿಯನ್ನು ಕೂಡ ತೆರೆದಿಡಲಾಗಿತ್ತು. ಸೇನೆಯ ಸಂಪನ್ಮೂಲಗಳನ್ನು ಕೂಡ ಪ್ರಧಾನಿ ಕುಟುಂಬದ ರಜೆಗೆ ಬಳಸಲಾಗಿತ್ತು. ಇದು ಸೇನೆಯಲ್ಲಿನ ಕೆಲ ಅಧಿಕಾರಿಗಳಿಗೆ ಕೋಪ ತರಿಸಿತ್ತು. ಆದರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದಾಗ ಬಾಯಿ ಮುಚ್ಚಿಕೊಂಡಿರಲು ಸೂಚಿಸಿದ್ದರು’ ಎಂದು ವಿವರಿಸಿದ್ದಾರೆ.

ವಾಯುಸೇನೆ ಮೋದಿ ಟ್ಯಾಕ್ಸಿಯಾಗಿದೆ!

ವಾಯುಸೇನೆಯ ಜೆಟ್ ಹಾಗೂ ಹೆಲಿಕಾಪ್ಟರ್​ಗಳನ್ನು ಟ್ಯಾಕ್ಸಿ ರೀತಿಯಲ್ಲಿ ಮೋದಿ ಬಳಸಿದ್ದಾರೆ. ರಾಜಕೀಯ ಕಾರ್ಯಕ್ರಮಗಳಿಗೆ ಮೋದಿಯು 240 ಬಾರಿ ಸೇನಾ ಜೆಟ್​ಗಳನ್ನು ಬಳಸಿದ್ದು, ಕೇವಲ 1.4 ಕೋಟಿ ರೂ.ಗಳನ್ನು ಬಿಜೆಪಿ ಮೂಲಕ ಪಾವತಿಸಲಾಗಿದೆ. ಕೆಲವು ಬಾರಿ ಕೇವಲ 740 ರೂ.ಗಳನ್ನು ಮಾತ್ರ ಸೇನೆಗೆ ವೆಚ್ಚ ಮಾಡಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಆರೋಪಿಸಿದ್ದಾರೆ.

ಏನಿದು ಐಎನ್​ಎಸ್ ಪ್ರವಾಸ ವಿವಾದ

1987ರ ಡಿಸೆಂಬರ್​ನಲ್ಲಿ ಬಂಗಾರಾಮ್ೆ ರಾಜೀವ್ ಗಾಂಧಿ ಕುಟುಂಬ 10 ದಿನಗಳ ವಿಹಾರಕ್ಕೆ ಬಂದಿತ್ತು. ರಾಜೀವ್, ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾಗೆ ಅಮಿತಾಬ್ ಬಚ್ಚನ್ ಕುಟುಂಬ ಹಾಗೂ ಸೋನಿಯಾ ಸಹೋದರಿ ಸಂಬಂಧಿಗಳು ಕೂಡ ಜತೆಯಾಗಿದ್ದರು. 10 ದಿನಗಳ ಪ್ರವಾಸವು ಮಂಗಳೂರಿನಲ್ಲಿ ಅಂತ್ಯವಾಗಿತ್ತು. ಮಂಗಳೂರು ಬಂದರಿನವರೆಗೂ ರಾಜೀವ್​ಗೆ ರಾಹುಲ್ ಸಾಥ್ ನೀಡಿದ್ದರು. ಪ್ರಧಾನಿ ಕುಟುಂಬದ ವೈಯಕ್ತಿಕ ಪ್ರವಾಸಕ್ಕೆ ಯುದ್ಧನೌಕೆ ಬಳಸಲಾಗಿತ್ತು ಎಂದು 2013ರಲ್ಲಿಯೇ ಇಂಡಿಯಾ ಟುಡೇ ವರದಿ ಮಾಡಿತ್ತು. ಇದರ ಜತೆಗೆ ನಾಲ್ಕಕ್ಕೂ ಅಧಿಕ ವಿದೇಶಿ ಪ್ರಜೆಗಳು ಕೂಡ ರಾಜೀವ್ ಜತೆಗಿದ್ದರು ಎನ್ನುವುದು ವರದಿಯ ಸಾರವಾಗಿತ್ತು. ಈ ವರದಿ ಪ್ರಕಟವಾದಾಗಲೇ ಸೇನೆಯ ಕೆಲ ನಿವೃತ್ತ ಅಧಿಕಾರಿಗಳು ತನಿಖೆಗೆ ಆಗ್ರಹಿಸಿದ್ದರು.

ಐಎನ್​ಎಸ್ ವಿರಾಟ್ ಹಿನ್ನೆಲೆ

# ಬ್ರಿಟನ್ ರಾಯಲ್ ನೇವಿಯ ಯುದ್ಧ ನೌಕೆಯನ್ನು 1987ರ ಮೇನಲ್ಲಿ ಭಾರತ ಖರೀದಿಸಿತ್ತು.

# ಐಎನ್​ಎಸ್ ವಿಕ್ರಮಾದಿತ್ಯ ಬಂದ ಬಳಿಕ 2017ರಲ್ಲಿ ಕಾರ್ಯಾಚರಣೆಯಿಂದ ಹೊರಗಿಡಲಾಗಿದೆ.

ಸಿಖ್ಖರ ಹತ್ಯೆಗೆ ರಾಜೀವ್ ಆದೇಶ!

ಸಿಖ್ಖರ ಹತ್ಯೆಗೆ ಪ್ರಧಾನಿ ರಾಜೀವ್ ಗಾಂಧಿ ಕಚೇರಿಯಿಂದಲೇ ಆದೇಶವಾಗಿತ್ತು ಎಂದು ನಾನಾವತಿ ಆಯೋಗದ ವರದಿಯಲ್ಲಿ ಉಲ್ಲೇಖವಾಗಿದೆ. ಕಾಂಗ್ರೆಸ್​ನ ಇಂತಹ ನೀಚ ಕೃತ್ಯಗಳನ್ನು ಪ್ರಧಾನಿ ಪ್ರಶ್ನಿಸಬಾರದೇ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿಯ ಈ ಹೇಳಿಕೆಯನ್ನು ಹಿರಿಯ ವಕೀಲ ಎಚ್.ಎಸ್.ಪೂಲ್ಕಾ ಕೂಡ ಸಮರ್ಥಿಸಿಕೊಂಡಿದ್ದಾರೆ. ಸಿಖ್ ವಿರೋಧಿ ಗಲಭೆಯ ಸಂತ್ರಸ್ತರ ಪರ ಪೂಲ್ಕಾ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಏತನ್ಮಧ್ಯೆ, ರಾಜೀವ್ ಹತ್ಯೆಗೆ ಸಂಬಂಧಿಸಿ ನಿರ್ದಿಷ್ಟ ಗುಪ್ತಚರ ವರದಿಗಳಿದ್ದರೂ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಸೂಕ್ತ ಭದ್ರತೆ ನೀಡಲಿಲ್ಲ. ಬಿಜೆಪಿಯ ದ್ವೇಷವೇ ರಾಜೀವ್ ಗಾಂಧಿ ಹತ್ಯೆಗೆ ಕಾರಣವಾಯಿತು ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಆರೋಪಿಸಿದ್ದಾರೆ.

ಬಚ್ಚನ್ ವಿವರಣೆ ಕೇಳಿದ ಕೈ

ಪ್ರಧಾನಿ ಮೋದಿ ಹೇಳಿಕೆಗೆ ಸಂಬಂಧಿಸಿ ನಟ ಅಮಿತಾಬ್ ಬಚ್ಚನ್ ಸ್ಪಷ್ಟನೆ ನೀಡಿ ವಿವಾದಕ್ಕೆ ತೆರೆ ಎಳೆಯುವುದು ಒಳಿತು ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಗಳ ಮುಖ್ಯಸ್ಥೆ ರಮ್ಯಾ ಆಗ್ರಹಿಸಿದ್ದಾರೆ. ಪ್ರಧಾನಿ ಮೋದಿ ಜತೆಗೆ ಉತ್ತಮ ಸಂಬಂಧ ಹೊಂದಿರುವ ಬಚ್ಚನ್, ರಾಜೀವ್ ಅತ್ಯಾಪ್ತ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.

ಐಎನ್​ಎಸ್ ಸುಮಾತ್ರಾ ದೊಳಗೆ ಕೆನಡದ ನಾಗರಿಕ ಅಕ್ಷಯ್ ಕುಮಾರ್ ಕುಟುಂಬವನ್ನು ಬಿಡಲಾಗಿತ್ತು. ಇದು ಸರಿಯೇ ಸುಳ್ಳಿನ ಪ್ರಧಾನಿ.

| ರಮ್ಯಾ ಕಾಂಗ್ರೆಸ್ ನಾಯಕಿ

ಕಾಂಗ್ರೆಸ್ ದ್ವಂದ್ವ ಹೇಳಿಕೆ

ಯುದ್ಧನೌಕೆಯನ್ನು ವೈಯಕ್ತಿಕ ಪ್ರವಾಸಕ್ಕೆ ಬಳಸಿಕೊಂಡಿರುವುದಕ್ಕೆ ಕಾಂಗ್ರೆಸ್ ಮುಖಂಡರು ಹಾಗೂ ಕೆಲ ನಿವೃತ್ತ ಅಧಿಕಾರಿಗಳು ದ್ವಂದ್ವ ಹೇಳಿಕೆ ನೀಡಿದ್ದಾರೆ. ‘ಪ್ರಧಾನಿಯಾಗಿ ಐಎನ್​ಎಸ್ ಬಳಸುವ ಅಧಿಕಾರವನ್ನು ರಾಜೀವ್ ಹೊಂದಿದ್ದರು. ಕೌಟುಂಬಿಕ ಮೌಲ್ಯಗಳನ್ನು ತಿಳಿದಿದ್ದ ಅವರು ಕುಟುಂಬವನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದಾರೆ. ಅದರಲ್ಲಿ ತಪ್ಪೇನಿದೆ? ಹಾಲಿ ಪ್ರಧಾನಿಗೆ ಕುಟುಂಬವೇ ಇಲ್ಲ, ಕುಟುಂಬದ ಪ್ರೀತಿ ಬಗ್ಗೆ ತಿಳಿದಿಲ್ಲ. ಹೀಗಾಗಿ ನೌಕೆಯನ್ನು ಬಳಸುವ ಪ್ರಮೇಯವೇ ಬರುವುದಿಲ್ಲ’ ಎಂದು ರಾಜ್ಯಸಭಾ ಸದಸ್ಯ ಆನಂದ ಶರ್ಮಾ ಲೇವಡಿ ಮಾಡಿದ್ದಾರೆ. ಸರ್ಕಾರದ ಅಧಿಕೃತ ಕಾರ್ಯಕ್ರಮದ ನಿಮಿತ್ತ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಭೇಟಿ ನೀಡಿದ್ದರು. ರಾಜೀವ್ ಭದ್ರತೆಗೆ ಐಎನ್​ಎಸ್ ನಿಯೋಜಿಸಲಾಗಿತ್ತು ಎಂದು ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ಯಾಗಿದ್ದ ವಜಾಹತ್ ಹಬೀಬುಲ್ಲಾ ತಿಳಿಸಿದ್ದಾರೆ. ರಾಜೀವ್ ಕುಟುಂಬದ ಜತೆಗೆ ನಟ ಅಮಿತಾಬ್ ಬಚ್ಚನ್ ಕುಟುಂಬ ಕೂಡ ಪ್ರಯಾಣ ಮಾಡಿತ್ತು ಎನ್ನುವುದಕ್ಕೆ ರಮ್ಯಾ ಟ್ವೀಟ್ ಸಾಕ್ಷಿಯಾಗಿದೆ. ಆದರೆ ಆಡ್ಮಿರಲ್ ಎಲ್.ರಾಮದಾಸ್ ಮಾತ್ರ ರಾಜೀವ್ ಹಾಗೂ ಸೋನಿಯಾ ಮಾತ್ರ ಪ್ರಯಾಣಿಸಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಗಾಂಧಿ ಕೂಡ ಜತೆಗಿರಲಿಲ್ಲ ಎಂದಿದ್ದಾರೆ.

ಸೇನೆ ಯಾರೊಬ್ಬರ ಆಸ್ತಿಯಲ್ಲ ಎಂದು ರಾಹುಲ್ ಹೇಳುತ್ತಾರೆ. ಆದರೆ ಗಾಂಧಿಗಳು ಐಎನ್​ಎಸ್ ವಿರಾಟ್​ನ್ನು ಪರ್ಸನಲ್ ಟ್ಯಾಕ್ಸಿ ಮಾಡಿಕೊಂಡು 10 ದಿನ ರಜೆ ಕಳೆಯಲು ಬಳಸಿದ್ದರು. ಗಡಿ ಕಾಯುವ ಕೆಲಸದ ಮೇಲಿದ್ದ ಯುದ್ಧ ನೌಕೆಯನ್ನು ಗಾಂಧಿಗಳ ಪ್ರಯಾಣಕ್ಕೆ ನಿಯೋಜಿಸಲಾಗಿತ್ತು.

| ಅರುಣ್ ಜೇಟ್ಲಿ ಕೇಂದ್ರ ಸಚಿವ

ರಾಜೀವ್ ಗಾಂಧಿ ಕುಟುಂಬ ಹಾಗೂ ಸಂಬಂಧಿಕರು ಪ್ರಯಾಣ ಮಾಡಿದ್ದನ್ನು ಐಎನ್​ಎಸ್-ವಿರಾಟ್​ನ ಸಿಬ್ಬಂದಿಯೇ ಬಹಿರಂಗಪಡಿಸಿದ್ದಾರೆ. 2013ರಲ್ಲೇ ಈ ಕುರಿತು ಮಾಧ್ಯಮಗಳು ವರದಿ ಮಾಡಿವೆ. ನಾವು ರಾಜಕೀಯ ಮಾಡುವುದು ಏನಿದೆ?

| ನಿರ್ಮಲಾ ಸೀತಾರಾಮನ್ ರಕ್ಷಣಾ ಸಚಿವೆ

ಆತಿಷಿ- ಗಂಭೀರ್ ಕರಪತ್ರ ಕಾದಾಟ

ನವದೆಹಲಿ: ಆಪ್ ಅಭ್ಯರ್ಥಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಇರುವ ಕರಪತ್ರಗಳನ್ನು ಹಂಚಿಸಿದ್ದೇನೆ ಎಂದು ಸಾಬೀತುಪಡಿಸಿದಲ್ಲಿ ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ ಎಂದು ಪೂರ್ವ ದೆಹಲಿ ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಹೇಳಿದ್ದಾರೆ. ಆರೋಪ ಸುಳ್ಳಾದರೆ ರಾಜಕೀಯ ದಿಂದ ನಿವೃತ್ತರಾಗುತ್ತೀರಾ ಎಂದು ಸವಾಲು ಕೂಡ ಹಾಕಿದ್ದಾರೆ. ತನ್ನ ಬಗ್ಗೆ ಅಸಭ್ಯ ಹೇಳಿಕೆಗಳಿರುವ ಕರಪತ್ರ ಹಂಚಲಾಗುತ್ತಿರುವುದನ್ನು ತಿಳಿದ ಆಪ್ ಅಭ್ಯರ್ಥಿ ಆತಿಷಿ ಕಣ್ಣೀರು ಹಾಕಿ, ಬಿಜೆಪಿ ಅಭ್ಯರ್ಥಿಯೇ ಕಾರಣ ಎಂದು ದೂಷಿಸಿದ್ದರು. ಇದಕ್ಕೆ ಟ್ವೀಟ್ ಮಾಡಿರುವ ಗಂಭೀರ್, ಚುನಾವಣೆ ಗೆಲ್ಲಲು ಮಹಿಳೆಯನ್ನು ಅವಮಾನಿಸುವ ಕೃತ್ಯವನ್ನು ಅರವಿಂದ್ ಕೇಜ್ರಿವಾಲ್ ನಡೆಸಿದ್ದಾರೆ ಎಂದು ದೂರಿದ್ದಾರೆ.

ಎನ್​ಸಿಪಿ ಮತ ಬಿಜೆಪಿಗೆ ಚಲಾವಣೆ

ಸತಾರ್: ನಾನು ಎನ್​ಸಿಪಿಗೆ ಚಲಾಯಿಸಿದ ಮತ ಬಿಜೆಪಿಗೆ ಹೋಗಿತ್ತು ಎಂದು ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿಕೆ ನೀಡಿದ್ದಾರೆ. ಆದರೆ, ಎಲ್ಲ ವಿದ್ಯುನ್ಮಾನ ಮತಯಂತ್ರಗಳು ಹಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುಜರಾತ್ ಹಾಗೂ ಹೈದರಾಬಾದ್​ಗಳಲ್ಲಿ ನನ್ನೆದುರು ಇರಿಸಲಾಗಿದ್ದ ಮತಯಂತ್ರಗಳಲ್ಲಿ ಎನ್​ಸಿಪಿ ಚಿಹ್ನೆ ಕೈಗಡಿಯಾರದ ಮುಂದಿನ ಗುಂಡಿಯೊತ್ತಿದಾಗ ಕಮಲಕ್ಕೆ ಮತ ಚಲಾವಣೆ ಆಗಿತ್ತು. ಹೀಗಾಗಿ ಇವಿಎಂಗಳ ಬಗ್ಗೆ ನನಗೂ ಕಳವಳವಿದೆ ಎಂದು ತಿಳಿಸಿದ್ದಾರೆ.

ಶಿವರಾಜ್ ಸಿಂಗ್ ಚೌಹಾಣ್​ಗೆ ಕಣ್ಣಿನ ಔಷಧ!

ಭೋಪಾಲ್: ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ಗೆ ಕಣ್ಣಿನ ಔಷಧ, ಚ್ಯವನಪ್ರಾಶ್ ಹಾಗೂ ಬಾದಾಮಿಯನ್ನು ಉಡುಗೊರೆಯಾಗಿ ಕಳುಹಿಸುತ್ತಿದ್ದಾರೆ. ರೈತರ ಸಾಲಮನ್ನಾ ಹಾಗೂ ಕಾಂಗ್ರೆಸ್ ಸರ್ಕಾರದ ಇತರ ನಿರ್ಧಾರಗಳು ಜನರಿಗೆ ಪ್ರಯೋಜನಕಾರಿಯಾಗಿವೆ. ಆದರೆ ಈ ಬಗ್ಗೆ ಶಿವರಾಜ್ ಸಿಂಗ್ ಚೌಹಾಣ್ ಸುಳ್ಳು ಹೇಳುತ್ತಿದ್ದಾರೆ. ವಯೋಸಹಜ ಮರೆವು ಹಾಗೂ ದೃಷ್ಟಿ ದೋಷದಿಂದಾಗಿ ಅವರಿಗೆ ವಾಸ್ತವವನ್ನು ಅರಿಯಲು ಸಾಧ್ಯವಾಗುತ್ತಿಲ್ಲ. ಈ ತೊಂದರೆಯನ್ನು ನಿವಾರಿಸಿಕೊಳ್ಳಲು ಅವರಿಗೆ ಕಣ್ಣಿನ ಔಷಧ, ಶಕ್ತಿವರ್ಧಕ ಚ್ಯವನಪ್ರಾಶ್ ಹಾಗೂ ನೆನಪಿನ ಶಕ್ತಿ ಹೆಚ್ಚಿಸುವ ಬಾದಾಮಿಯನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.