ನಾನಾ ಪಾಟೇಕರ್​ ವಿರುದ್ಧ ತನುಶ್ರೀ ದತ್ತಾ ದಾಖಲಿಸಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಬಿ ವರದಿ ಸಲ್ಲಿಸಿದ ಪೊಲೀಸರು

ಮುಂಬೈ: ಹಿರಿಯ ನಟ, ನಿರ್ದೇಶಕ ನಾನಾ ಪಾಟೇಕರ್​ ವಿರುದ್ಧ ನಟಿ ತನುಶ್ರೀ ದತ್ತಾ ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಯಾವುದೇ ಪುರಾವೆ ಸಿಗಲಿಲ್ಲ ಎಂದು ಮುಂಬೈ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಆಂಧೇರಿ ಮೆಟ್ರೋಪಾಲಿಟಿನ್​ ಮ್ಯಾಜಿಸ್ಟ್ರೇಟ್​ನಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟ ಬಿ ಸಮ್ಮರಿ ವರದಿ ಸಲ್ಲಿಸಿದ್ದಾರೆ. ತನುಶ್ರೀ ದತ್ತಾ ನಾನಾ ಪಾಟೇಕರ್​ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆದರೆ, ನಾನಾ ವಿರುದ್ಧಚಾರ್ಜ್​ ಶೀಟ್ ಸಲ್ಲಿಸಿ, ವಿಚಾರಣೆ ನಡೆಸಲು ಯಾವುದೇ ಸಾಕ್ಷಿ ಸಿಗದ ಕಾರಣ ಓಶಿವಾರಾ ಸಬ್​ ಅರ್ಬನ್​ ಪೊಲೀಸರು ಮೆಟ್ರೋಪಾಲಿಟಿನ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ಗೆ ಬಿ ಸಮ್ಮರಿ ಸಲ್ಲಿಸಿದ್ದಾರೆ ಎಂದು ಡಿಸಿಪಿ ಪರಂಜಿತ್​ ಸಿಂಗ್​ ದಹಿಯಾ ತಿಳಿಸಿದ್ದಾರೆ.

2008ರಲ್ಲಿ ಹಾರ್ನ್​ ಒಕೆ ಪ್ಲೀಸ್​ ಸಿನಿಮಾ ಹಾಡೊಂದರ ಶೂಟಿಂಗ್​ ವೇಳೆ ನಾನಾ ಪಾಟೇಕರ್​ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದರು. ನಂತರ ಅಕ್ಟೋಬರ್​ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ತನುಶ್ರೀಯಿಂದ ಶುರುವಾದ ಲೈಂಗಿಕ ದೌರ್ಜನ್ಯದ ಈ ಆರೋಪ, #ಮೀ ಟೂ ಎಂದು ಹೆಸರು ಪಡೆದುಕೊಂಡು ದೊಡ್ಡ ಚಳವಳಿಯನ್ನೇ ಸೃಷ್ಟಿಸಿ ಹಲವು ಸೆಲೆಬ್ರಿಟಿಗಳು ಹಾಗೂ ಗಣ್ಯರನ್ನು ಕಾಡಿತ್ತು.